ಲಿಂಗ ಸಮಾನತೆಗೆ ಪಠ್ಯಪುಸ್ತಕ ಪರಿಷ್ಕರಣೆ: ಪ್ರೊ.ಬರಗೂರು

ಬೆಂಗಳೂರು, ಮಾ.9: ಶಾಲಾ ಪಠ್ಯಪುಸ್ತಕಗಳಲ್ಲಿನ ಲಿಂಗ ತಾರತಮ್ಯ ನಿವಾರಿಸಿ ಲಿಂಗ ಸಮಾನತೆ, ಜೊತೆಗೆ ಒಟ್ಟಾರೆ ಸಮಾನತೆ ಪ್ರತಿಪಾದಿಸುವ ನಿಟ್ಟಿನಲ್ಲಿ ಪಠ್ಯಪುಸ್ತಕ ಪರಿಷ್ಕರಣೆಗೆ ಕ್ರಮ ಕೈಗೊಳ್ಳಲಾಗುವುದೆಂದು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ಹಾಗೂ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿ ರಾಜ್ಯ ಮಹಿಳಾ ಆಯೋಗದಿಂದ ಏರ್ಪಡಿಸಿದ್ದ ‘ಶಿಕ್ಷಣ ವ್ಯವಸ್ಥೆಯಲ್ಲಿ ಲಿಂಗತ್ವ ಸಮಾನತೆ ಹಾಗೂ ಲಿಂಗತ್ವ ನ್ಯಾಯದ ಪರಿಕಲ್ಪನೆ’ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಠ್ಯಪುಸ್ತಕಗಳಲ್ಲಿ ಲಿಂಗ ತಾರತಮ್ಯದ ಬಗ್ಗೆ ಮಹಿಳಾ ಸಂಘಟನೆಗಳಿಂದ ಆಕ್ಷೇಪಣೆಗಳು ಬಂದಿವೆ. ಅವುಗಳನ್ನು ಪರಿಶೀಲಿಸಿ ತಜ್ಞರ ಸಮಿತಿಯಲ್ಲಿ ಸಮಾಲೋಚನೆ ನಡೆಸಿ ಪಠ್ಯಪುಸ್ತಕದಲ್ಲಿ ಲಿಂಗತ್ವ ಸಮಾನತೆ ಕಾಯ್ದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಲಿಂಗ ಸಮಾನತೆಯ ಜತೆಗೆ ಸಂವಿಧಾನದ ಆಶಯದಂತೆ ಒಟ್ಟಾರೆ ಸಮಾನತೆಯನ್ನು ಪ್ರತಿಪಾದಿಸುವ ಪಠ್ಯಪುಸ್ತಕಗಳು ಅಗತ್ಯ ಎಂದ ಬರಗೂರು ರಾಮಚಂದ್ರಪ್ಪ, ಭಾಷೆ, ಸಮಾಜ ವಿಜ್ಞಾನ ಪಠ್ಯಗಳಲ್ಲಿ ಲಿಂಗ ಸಮಾನತೆ ತರುವುದರ ಜತೆಗೆ ವಿಜ್ಞಾನ ಮತ್ತಿತರ ಪಠ್ಯಗಳಲ್ಲಿ ಸಾಧಕಿಯರ ಸಾಧನೆ ಕುರಿತ ಪಾಠ ಅಳವಡಿಸಲಾಗುವುದು ಎಂದು ಹೇಳಿದರು.
ಬದಲಾವಣೆ ಅಗತ್ಯ: ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ, ಪಠ್ಯ ಪುಸ್ತಕಗಳಲ್ಲಿ ಶೇ.70ರಷ್ಟು ಲಿಂಗ ತಾರತಮ್ಯವನ್ನೊಳಗೊಂಡ ಚಿತ್ರಗಳಿದ್ದು, ಮಹಿಳೆ ಎಂದರೆ ಆಕೆ ಅಡುಗೆ ಮನೆ, ಬಟ್ಟೆ ತೊಳೆಯುವ ಕೆಲಸಕ್ಕೆ ಸೀಮಿತ ಸರಿಯಲ್ಲ. ಆದುದರಿಂದ ಪಠ್ಯ ಪುಸ್ತಕಗಳಲ್ಲಿನ ಲಿಂಗ ತಾರತಮ್ಯ ಚಿತ್ರಗಳ ಪರಿಷ್ಕರಣೆ ಆಗಲೇಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕಿ ಶಕುಂತಳಾ ಶೆಟ್ಟಿ ಸೇರಿದಂತೆ ಮಹಿಳಾ ಸಂಘಟನೆಗಳ ಪ್ರತಿನಿಧಿಗಳು ಸಂವಾದದಲ್ಲಿ ಭಾಗವಹಿಸಿದ್ದರು.







