ಭದ್ರತೆಯ ಭರವಸೆ ಸಿಗದಿದ್ದರೆ ಟೂರ್ನಿಯಿಂದ ಹೊರಗೆ: ಪಾಕ್
ಕರಾಚಿ, ಮಾ.9: ತನ್ನ ಆಟಗಾರರು ಹಾಗೂ ಅಭಿಮಾನಿಗಳಿಗೆ ಸುರಕ್ಷತೆ ಒದಗಿಸುವ ಬಗ್ಗೆ ಭಾರತ ಸರಕಾರ ಭರವಸೆ ನೀಡದೇ ಇದ್ದರೆ ಟ್ವೆಂಟಿ-20 ವಿಶ್ವಕಪ್‌ನಿಂದ ಹೊರಗುಳಿಯುವುದಾಗಿ ಪಾಕಿಸ್ತಾನ ಬುಧವಾರ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.
ಭದ್ರತಾ ಕಾರಣದಿಂದಾಗಿ ಭಾರತ-ಪಾಕ್ ನಡುವಿನ ಮಾ.19 ರಂದು ನಡೆಯಲಿರುವ ಪಂದ್ಯವನ್ನು ಐಸಿಸಿ ಬುಧವಾರ ಧರ್ಮಶಾಲಾದಿಂದ ಕೋಲ್ಕತಾಗೆ ವರ್ಗಾಯಿಸಿತ್ತು. ಇದರಿಂದ ತೃಪ್ತರಾಗದ ಪಾಕಿಸ್ತಾನ ಭದ್ರತೆಯ ಭರವಸೆ ನೀಡಬೇಕು ಎಂದು ಹೇಳಲಾರಂಭಿಸಿದೆ.
ಆಟಗಾರರು ಹಾಗೂ ತನ್ನ ಕ್ರಿಕೆಟ್ ಅಭಿಮಾನಿಗಳ ಭದ್ರತೆಯ ಬಗ್ಗೆ ಪಾಕ್ ಈಗಲೂ ಭಾರತ ಸರಕಾರದ ಭರವಸೆಯ ನಿರೀಕ್ಷೆಯಲ್ಲಿದೆ. ಭದ್ರತೆಯ ಭರವಸೆ ಸಿಗದೇ ಇದ್ದರೆ ಪಾಕ್ ತಂಡ ವಿಶ್ವಕಪ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಇಂಡೋ-ಪಾಕ್ ವಿಶ್ವಕಪ್ ಪಂದ್ಯಕ್ಕೆ ಮಮತಾ ಸ್ವಾಗತ
ಕೋಲ್ಕತಾ, ಮಾ.9: ಭಾರತ-ಪಾಕಿಸ್ತಾನ ನಡುವಿನ ಟ್ವೆಂಟಿ-20 ವಿಶ್ವಕಪ್ ಪಂದ್ಯವನ್ನು ಈಡನ್‌ಗಾರ್ಡನ್ಸ್ ಸ್ಟೇಡಿಯಂನಲ್ಲಿ ಆಯೋಜಿಸಲು ನನಗೆ ಅತೀವ ಸಂತೋಷವಾಗುತ್ತಿದೆ’’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಭಾರತ-ಪಾಕ್ ವಿಶ್ವಕಪ್ ಪಂದ್ಯದ ಆತಿಥ್ಯವಹಿಸಲು ನಮಗೆ ತುಂಬಾ ಖುಷಿಯಾಗುತ್ತಿದೆ. ಎಲ್ಲರಿಗೂ ನಮ್ಮ ಸುಂದರ ನಗರಕ್ಕೆ ಸ್ವಾಗತವಿದೆ ಎಂದು ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.





