ಬಜ್ಪೆ: ವಿಮಾನ ನಿಲ್ದಾಣದ ಮುಂದೆ ಧರಣಿ: ಎಮಿಗ್ರೇಶನ್ ಮತ್ತು ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಮಂಗಳೂರು, ಮಾ.9: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಎಮಿಗ್ರೇಶನ್ ಮತ್ತು ಕಸ್ಟಮ್ಸ್ ಅಧಿಕಾರಿಗಳು ಅನಗತ್ಯ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಇಂದು ಕೇರಳ ಸ್ಟೇಟ್ ಮುಸ್ಲಿಮ್ ಯೂತ್ ಲೀಗ್ ಕಾಸರಗೋಡು ಜಿಲ್ಲಾ ಸಮಿತಿಯು ವಿಮಾನ ನಿಲ್ದಾಣದ ಬಳಿ ಧರಣಿ ನಡೆಸಿತು.
ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಮಂಜೇಶ್ವರ ಕ್ಷೇತ್ರದ ಶಾಸಕ ಪಿ.ಬಿ.ಅಬ್ದುರ್ರಝಾಕ್, ಬಜ್ಪೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಯಲ್ಲಿ ಕೇರಳಿಗರ ಕೊಡುಗೆ ಅಪಾರ. ಮಂಗಳೂರು ವಿಮಾನ ನಿಲ್ದಾಣ ಸ್ಥಾಪನೆಯಾಗುವ ಮೊದಲು ವಿದೇಶದಲ್ಲಿರುವ ಕೇರಳಿಗರು ಮುಂಬೈ ಮೂಲಕ ಕೇರಳಕ್ಕೆ ಮರಳುತ್ತಿದ್ದರು. ಮಂಗಳೂರಿನಲ್ಲಿ ಪ್ರತ್ಯೇಕ ವಿಮಾನ ನಿಲ್ದಾಣ ನಿರ್ಮಾಣವಾದರೆ ಕೇರಳ, ಮಂಗಳೂರು ಮತ್ತು ಸುತ್ತಮುತ್ತ ಜಿಲ್ಲೆಗಳ ಜನರಿಗೆ ಅನುಕೂಲವಾಗಬಹುದು ಎಂಬ ಹಿನ್ನೆಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣ ಸ್ಥಾಪನೆಗೆ ಕೇರಳಿಗರು ಹಾಗೂ ಕರಾವಳಿಯ ಜನರು ಆಗ್ರಹಿಸಿದ್ದರು. ಇಷ್ಟೆಲ್ಲಾ ಪ್ರಯತ್ನದ ಹೊರತಾಗಿಯೂ ಇಲ್ಲಿನ ಅಧಿಕಾರಿಗಳ ವರ್ತನೆಯನ್ನು ಗಮನಿಸುವಾಗ ಬೇಸರವಾಗುತ್ತದೆ. ಎಮಿಗ್ರೇಶನ್, ಕಸ್ಟಮ್ಸ್ ವಿಭಾಗದ ಅಧಿಕಾರಿಗಳು ವಿದೇಶದಿಂದ ಬರುವ ಯುವಕರಿಗೆ ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ. ಇದು ನಿಲ್ಲಬೇಕು. ಒಂದು ವೇಳೆ ಅಧಿಕಾರಿಗಳ ವರ್ತನೆ ಹೀಗೆಯೇ ಮುಂದುವರಿದಲ್ಲಿ ಕೇರಳದ ಜನಪ್ರತಿನಿಧಿಗಳು ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಲೀಗ್‌ನ ಪ್ರಧಾನ ಕಾರ್ಯದರ್ಶಿ ಎ.ಕೆ.ಎಂ.ಅಶ್ರಫ್ ಮಾತನಾಡಿ, ಮಂಜೇಶ್ವರ ಮಂಗಳಪಾಡ ಪಂಚಾಯತ್ ವ್ಯಾಪ್ತಿಯ ಮುತ್ತಂ ಬಳಿಯ ನಿವಾಸಿ ಅಬ್ದುಲ್ ಖಾದರ್ ದುಬೈ ಹೋಗುತ್ತಿದ್ದ ಸಂದರ್ಭ ಇಲ್ಲಿನ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆಯ ನೆಪದಲ್ಲಿ ಅವರ ಬಳಿ ಇದ್ದ ಟ್ಯಾಬ್‌ವೊಂದನ್ನು ವಶಕ್ಕೆ ಪಡೆದು ‘ಇದು ಸ್ಫೋಟಕ ವಸ್ತು’ ಎಂದು ಸತಾಯಿಸಿದ್ದಾರೆ. ಮಾತ್ರವಲ್ಲದೆ, ಅವರ ತಂದೆ ಸಹಿತ ಕುಟುಂಬಸ್ಥರನ್ನು ಕರೆಸಿ ಸುಮಾರು 24 ತಾಸುಗಳ ಕಾಲ ವಿಚಾರಣೆ ನಡೆಸಿ ಕೊನೆಗೆ ‘ಸಾರಿ’ (ತಪ್ಪಾಗಿದೆ) ಎಂದು ಹೇಳಿ ಕಳುಹಿಸಿಕೊಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ವಿಮಾನ ನಿಲ್ದಾಣದಲ್ಲಿ ತಿಂಗಳ ಹಿಂದೆ ಕಾಸರಗೋಡು ತಳಂಗರೆಯ ನಿವಾಸಿ ಹಾಗೂ ರಣಜಿ ತಂಡದ ಆಟಗಾರ ಮುಹಮ್ಮದ್ ಅಝರುದ್ದೀನ್ ಕತರ್‌ಗೆ ತೆರುಳುತ್ತಿದ್ದ ಸಂದರ್ಭ ಎಮಿಗ್ರೇಶನ್ ಮತ್ತು ಕಸ್ಟಮ್ಸ್ ಅಧಿಕಾರಿಗಳು ಅವರ ವೀಸಾ ನಕಲಿ ಎಂದು ಹೇಳಿ ಸುಮಾರು 6 ಗಂಟೆಗಳ ಕಾಲ ಕಿರುಕುಳ ನೀಡಿ ಅನಂತರ ಕ್ಷಮೆಯಾಚಿಸಿದ್ದಾರೆೆ ಎಂದವರು ಹೇಳಿದರು.
ಬಳಿಕ ಶಾಸಕ ಅಬ್ದುರ್ರಝಾಕ್ ನೇತೃತ್ವದಲ್ಲಿ ಮಂಗಳೂರು ವಿಮಾನ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಜೆ.ಟಿ.ರಾಧಾಕೃಷ್ಣನ್‌ರಿಗೆ ಮನವಿ ಸಲ್ಲಿಸಲಾಯಿತು.
ಧರಣಿಯಲ್ಲಿ ಯೂತ್ ಲೀಗ್‌ನ ಕಾಸರಗೋಡು ಜಿಲ್ಲಾಧ್ಯಕ್ಷ ಮೊದಿನ್ ಕೊಲ್ಲಂಬಾಡಿ, ಪ್ರಧಾನ ಕಾರ್ಯದರ್ಶಿ ಎ.ಕೆ.ಎಂ.ಅಶ್ರಫ್, ಉಪಾಧ್ಯಕ್ಷರಾದ ಮುಹಮ್ಮದ್ ಕುಂಞಿ, ಯೂಸುಫ್ ಉಳುವಾರ್, ಕಾರ್ಯದರ್ಶಿಗಳಾದ ಅಶ್ರಫ್ ಎಡನೀರ್, ಟಿ.ಎಸ್.ನಜೀಬ್ ಮೊದಲಾದವರು ಉಪಸ್ಥಿತರಿದ್ದರು.







