ಪ್ರಧಾನಿ ಮೋದಿಗೆ ಜಮೀಯತೆ ಉಲೇಮಾ ಎ ಹಿಂದ್ ಪ್ರಶ್ನೆ
ವಿಭಜಕ ಶಕ್ತಿಗಳ ಬಗ್ಗೆ ಯಾಕೆ ಮೌನ ?

ಹೊಸದಿಲ್ಲಿ, ಮಾ. 10 : " ದೇಶವನ್ನು ಹಿಂದೂ ರಾಷ್ಟ್ರವಾಗಿಸುವ ಪ್ರಯತ್ನಗಳ " ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಯಾಕೆ ಮೌನ ವಹಿಸಿದ್ದಾರೆ ಎಂದು ಜಮೀಯತೆ ಉಲೇಮಾ ಎ ಹಿಂದ್ ಅಧ್ಯಕ್ಷ ಮೌಲಾನ ಅರ್ಶದ್ ಮದನಿ ಪ್ರಶ್ನಿಸಿದ್ದಾರೆ.
ಸದ್ಯದ ದೇಶದ ಪರಿಸ್ಥಿತಿ " ದೇಶ ವಿಭಜನೆಯ ಸಂದರ್ಭಕ್ಕಿಂತ ಕೆಟ್ಟದ್ದಾಗಿದೆ" ಎಂದು ಹೇಳಿರುವ ಮದನಿ ಅವರು " ವಿಭಜಕ ಶಕ್ತಿಗಳು ಕಳೆದೊಂದು ವರ್ಷದಿಂದ ದೇಶದಲ್ಲಿ ಸರ್ಕ್ರಿಯವಾಗಿವೆ ಹಾಗು ಮೋದಿ ಅವರು ಮೌನವಾಗಿದ್ದಾರೆ" ಎಂದು ಆರೋಪಿಸಿದ್ದಾರೆ.
ಮಾರ್ಚ್ ೧೨ ಕ್ಕೆ ರಾಷ್ಟ್ರೀಯ ಏಕತಾ ಸಮಾವೇಶವನ್ನು ಮಾರ್ಚ್ ೧೨ಕ್ಕೆ ದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಸಲು ಯೋಜಿಸಲಾಗಿದೆ ಎಂದು ಮದನಿ ಹೇಳಿದ್ದಾರೆ.
ಈ ಸಮಾವೇಶದಲ್ಲಿ ದಲಿತ ನಾಯಕರು, ಧಾರ್ಮಿಕ ಮುಖಂಡರು ಹಾಗು ರಾಜಕೀಯ ನಾಯಕರು ಭಾಗವಹಿಸಲಿದ್ದು ದೇಶದ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಗಂಭೀರ ಅವಲೋಕನ ನಡೆಸಲಿದ್ದಾರೆ. ಸಮಾವೇಶದಲ್ಲಿ ನಲವತ್ತು ಸಾವಿರ ಜನ ಸೇರಲಿದ್ದಾರೆ ಎಂದು ಅವರು ತಿಳಿಸಿದರು.
" ಈ ಸರಕಾರ ದೇಶಪ್ರೇಮಕ್ಕೆ ತನ್ನದೇ ಸಿದ್ಧಾಂತದ ವ್ಯಾಖ್ಯೆ ನೀಡಲು ಪ್ರಯತ್ನಿಸುತ್ತಿದೆ. ಸ್ವಾತಂತ್ರ್ಯದ ನಂತರ ಇದೇ ಮೊದಲ ಬಾರಿ ಸರಕಾರಕ್ಕೆ ವಿರೋಧವಿರುವವರನ್ನು ದೇಶದ್ರೋಹಿಗಳೆಂದು ಹೇಳಲಾಗುತ್ತಿದೆ" ಎಂದು ಮದನಿ ದೂರಿದರು.
ಮನುವಾದಿಗಳನ್ನು ವಿರೋಧಿಸುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ದೇಶದ್ರೋಹಿಗಳೆಂದು ಹಣೆಪಟ್ಟಿ ಹಚ್ಚಲಾಗುತ್ತಿದೆ. ಇಂತಹ ಪರಿಸ್ಥಿತಿ ಆತ್ಮಹತ್ಯೆಗೆ ದೂಡುತ್ತಿದೆ ಎಂದು ಹೈದರಾಬಾದ್ ವಿವಿಯ ರೋಹಿತ್ ವೇಮುಲನ ಆತ್ಮಹತ್ಯೆ ಕುರಿತು ಅವರು ಹೇಳಿದರು.
" ಮುಸ್ಲಿಮರು ಹಾಗು ಹಿಂದೂಗಳ ನಡುವಿನ ಅಂತರ ಹೆಚ್ಚಾಗುತ್ತಿದೆ ಹಾಗು ಪರಸ್ಪರರನ್ನು ಕಂಡರೆ ಹೆದರುವ ಪರಿಸ್ಥಿತಿ ಬಂದಿದೆ. ಮುಸ್ಲಿಮರು , ಇತರ ಅಲ್ಪಸಂಖ್ಯಾತರು ಹಾಗು ದಲಿತರು ಏಕಾಂಗಿತನ ಅನುಭವಿಸುತ್ತಿದ್ದಾರೆ " ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ನಾವು ಯಾವುದೇ ಪಕ್ಷದ ಬೆಂಬಲಿಗರು ಅಥವಾ ವಿರೋಧಿಗಳು ಅಲ್ಲ. ನಾವು ಬಿಜೆಪಿ ವಿರೋಧಿಗಳು ಎಂದು ಕೆಲವರು ಆರೋಪಿಸುತ್ತಾರೆ. ಆದರೆ ನಾವು ಈ ದೇಶದ ಏಕತೆ ಹಾಗು ಸಮಗ್ರತೆಯನ್ನುಗೌರವಿಸದ ಅವರ ಮನೋಭಾವನೆಯನ್ನು ಮಾತ್ರ ವಿರೋಧಿಸುತ್ತೇವೆ. ಇದು ನಮ್ಮ ದೇಶ . ಇಲ್ಲಿ ನಮ್ಮ ಸ್ಥಾನಕ್ಕಾಗಿ ನಾವು ಹೋರಾಡುತ್ತೇವೆ. ದೇಶದ ಎಕರೆ, ಸಮಗ್ರತೆ, ಜಾತ್ಯತೀತತೆ ಹಾಗು ಸಂವಿಧಾನವನ್ನು ಕಾಪಾಡಲು ನಾವು ಶ್ರಮಿಸುತ್ತೇವೆ. ಏಕತಾ ಸಮಾವೇಶದ ಉದ್ದೇಶವೂ ಅದೇ " ಎಂದು ಅವರು ಹೇಳಿದರು.







