ಅರ್ಧದಷ್ಟು ಹಣವನ್ನುಬಾಚಿಕೊಂಡು ಭಾರತ ತೊರೆದ ಮಲ್ಯ

ಬೆಂಗಳೂರು, ಮಾ. 10: ಉದ್ಯಮಿ ವಿಜಯ್ ಮಲ್ಯ ಅವರು ಭಾರತ ತೊರೆಯುವಾಗ ತನಗೆ ಸಂದಾಯವಾಗಬೇಕಿದ್ದ 515 ಕೋಟಿ ರೂಪಾಯಿ ಹಣದಲ್ಲಿ ಅರ್ಧದಷ್ಟು ಹಣವನ್ನು ಪಡೆದಿರುವ ವಿಚಾರ ಬೆಳಕಿಗೆ ಬಂದಿದೆ.
ಕಳೆದ ಫೆಬ್ರವರಿ 25 ರಂದು 275 ಕೋಟಿ ರೂ. ಹಣವನ್ನು ಪಡೆದಿದ್ದರೂ, ಅವರ ಬಾಕಿ ಹಣದ ಮೇಲೆ ಕಣ್ಣಿಟ್ಟಿದ್ದ ಬ್ಯಾಂಕ್‌ಗಳಿಗೆ ಮಲ್ಯರ ತಂತ್ರ ಗೊತ್ತಾಗಿಲ್ಲ. ಯುನೈಟೆಡ್ ಸ್ಪಿರಿಟ್ಸ್ ಕಂಪೆನಿಯ ಮುಖ್ಯಸ್ಥ ಹುದ್ದೆಯಿಂದ ನಿರ್ಗಮಿಸಿದ್ದಕ್ಕಾಗಿ ಬ್ರಿಟನ್ ನ ಡೈಜಿಯೋ ಕಂಪೆಯು ವಿಜಯ್ ಮಲ್ಯಗೆ 515 ಕೋಟಿ ರೂ. ನೀಡುವ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ಮೊದಲ ಕಂತನ್ನು ಫೆ.25ರ ಮೊದಲು ಪಾವತಿಸಬೇಕಿತ್ತು. ಉಳಿದ ಹಣವನ್ನು ಮುಂದಿನ ಐದು ವರ್ಷಗಳ ಅವಧಿಯಲ್ಲಿ ಪಾವತಿಸಬೇಕಿತ್ತು.
ವಿಜಯ್ ಮಲ್ಯಗೆ ಸಿಗುತ್ತಿರುವ 515 ಕೋಟಿ ರುಪಾಯಿ ಹಣದ ಮೇಲೆ ಕಣ್ಣಿಟ್ಟು ವಿವಿಧ ಬ್ಯಾಂಕುಗಳು ಹಣ ವಸೂಲಾತಿ ನ್ಯಾಯಾಲಯದ ಮೊರೆ ಹೋಗಿದ್ದರು. ಅದರಂತೆ ಹಣವನ್ನು ತಾತ್ಕಾಲಿಕವಾಗಿ ಜಪ್ತಿ ಮಾಡುವಂತೆ ಸೋಮವಾರ ಸಾಲ ವಸೂಲಾತಿ ನ್ಯಾಯಾಧೀಕರಣ(ಡಿಆರ್‌ಟಿ) ಆದೇಶ ನೀಡಿತ್ತು.
ಬ್ಯಾಂಕ್ ಒಕ್ಕೂಟಗಳು ವಿಜಯ್ ಮಲ್ಯ ಅವರನ್ನು ಬಂಧಿಸಿ ಅವರ ಪಾಸ್ ಪೋರ್ಟನ್ನು ವಶಪಡಿಸಿಕೊಳ್ಳುವಂತೆ ಕೋರಿದ್ದ ಅರ್ಜಿ ಸೇರಿದಂತೆ ಇತರೆ ಅರ್ಜಿಯ ವಿಚಾರಣೆಯನ್ನು ನ್ಯಾಯಾಧೀಕರಣ ಮಾರ್ಚ್ 28ಕ್ಕೆ ಮುಂದೂಡಿತ್ತು.





