ಬಂಟ್ವಾಳ ಪುರಸಭೆ: ಅಧ್ಯಕ್ಷರಾಗಿ ರಾಮಕೃಷ್ಣ ಆಳ್ವ, ಉಪಾಧ್ಯಕ್ಷರಾಗಿ ಎನ್.ಮುಹಮ್ಮದ್ ನಂದರಬೆಟ್ಟು ಆಯ್ಕೆ

ಬಂಟ್ವಾಳ: ಮಾ. 10: ಇಲ್ಲಿನ ಪುರಸಭೆಗೆ ಇಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ರಾಮಕೃಷ್ಣ ಆಳ್ವ, ಉಪಾಧ್ಯಕ್ಷರಾಗಿ ಎನ್.ಮುಹಮ್ಮದ್ ನಂದರಬೆಟ್ಟು ಆಯ್ಕೆಯಾಗಿದ್ದಾರೆ.
ಗುರುವಾರ ಬೆಳಗ್ಗೆ 10:30 ನಾಮಪತ್ರ ಸಲ್ಲಿಸಲು ಕೊನೆಯ ಸಮಯವಾಗಿದ್ದು, 12:30ಕ್ಕೆ ಕೈ ಎತ್ತುವ ಮೂಲಕ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ರಾಮಕೃಷ್ಣ ಆಳ್ವ, ಬಿಜೆಪಿಯಿಂದ ಗೋವಿಂದ ಪ್ರಭು, ಎಸ್.ಡಿ.ಪಿ.ಐ.ಯಿಂದ ಮುಹಮ್ಮದ್ ಇಕ್ಬಾಲ್ ನಾಮಪತ್ರ ಸಲ್ಲಿಸಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಎನ್. ಮುಹಮ್ಮದ್ ನಂದರಬೆಟ್ಟು, ಬಿಜೆಪಿಯಿಂದ ದೇವದಾಸ ಶೆಟ್ಟಿ, ಎಸ್.ಡಿ.ಪಿ.ಐ.ಯಿಂದ ಮುನೀಶ್ ಅಲಿ ನಾಮಪತ್ರ ಸಲ್ಲಿಸಿದ್ದರು.
ಕೊನೆಯ ಗಳಿಗೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಎಸ್.ಡಿ.ಪಿ.ಐ. ಅಭ್ಯರ್ಥಿಗಳು ಸಲ್ಲಿಸಿದ್ದ ನಾಮಪತ್ರವನ್ನು ವಾಪಸ್ ಪಡೆದರು.
12:30 ಸರಿಯಾಗಿ ಕೈ ಎತ್ತುವ ಮೂಲಕ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ರಾಮಕೃಷ್ಣ ಆಳ್ವ, ಎನ್.ಮುಹಮ್ಮದ್ ತಲಾ 16 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಬಿಜೆಪಿ ಅಭ್ಯರ್ಥಿಗಳು ತಲಾ 5 ಮತಗಳನ್ನು ಪಡೆದರೆ, ಎಸ್.ಡಿ.ಪಿ.ಐ.ಯ ಮೂವರು ಸದಸ್ಯರು ತಟಸ್ಥರಾಗಿದ್ದರು.
ಆಯ್ಕೆ ಪ್ರಕ್ರಿಯೆಯನ್ನು ತಹಶೀಲ್ದಾರ್ ಪುರಂದರ ಹೆಗಡೆ ನಡೆಸಿಕೊಟ್ಟರು.
ಆಕ್ರೋಶ: ಅಧ್ಯಕ್ಷ ಸ್ಥಾನದ ಪ್ರಮುಖ ಆಕಾಂಶಿಯಾಗಿದ್ದ ಸದಾಶಿವ ಬಂಗೇರರಿಗೆ ಕೊನೆ ಗಳಿಗೆಯಲ್ಲಿ ಅವಕಾಶ ಕೈ ತಪ್ಪಿದ್ದರಿಂದ ಅವರ ಅಭಿಮಾನಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.







