ಹಣಕಾಸು ವಿವಾದ: ಗರ್ಭಿಣಿ ಮಹಿಳೆಯ ಹೊಟ್ಟೆಗೆ ಒದ್ದ ಇನ್ನೋರ್ವ ಮಹಿಳೆ!
.jpg)
ಲುಧಿಯಾನ, ಮಾರ್ಚ್.10: ಹಣದ ವ್ಯವಹಾರ ಕುರಿತ ವಿವಾದದಲ್ಲಿ ಗರ್ಭಿಣಿಮಹಿಳೆಗೆ ನಿರ್ದಯವಾಗಿ ಹೊಡೆದು ಕೆಳಗುರುಳಿಸಿ ಹೊಟ್ಟೆಗೆ ಒದೆ ನೀಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿಗೆ ಸಮೀಪದ ಸಲೆಮ್ ಟಾಬರಿ ಪೊಲೀಸ್ ಸಂತ್ರಸ್ತೆ ಮಹಿಳೆಯ ದೂರನ್ನು ದಾಖಲಿಸಿದ್ದಾರೆ. ಪೂಜಾ ಎಂಬಗರ್ಭಿಣಿ ಮಹಿಳೆಯು ಹೇಳುವ ಪ್ರಕಾರ ಸ್ವೀಟಿ ಎಂಬ ಇನ್ನೋರ್ವ ಮಹಿಳೆ ಅವಳ ಮೇಲೆ ಹಲ್ಲೆ ನಡೆಸಿದ್ದಾಳೆ.
ಹೆಚ್ಚುವರಿ ಸಬ್ ಇನ್ಸ್‌ಪೆಕ್ಟರ್ ದಲ್‌ಬೀರ್ ಸಿಂಗ್ ಘಟನೆಯ ಕುರಿತು ವಿವರಿಸುತ್ತಾ ಮೂವತ್ತಾರು ವರ್ಷದ ಗೃಹಿಣಿ ಪೂಜಾ ಆರು ತಿಂಗಳ ಗರ್ಭಿಣಿಯಾಗಿದ್ದು ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ಮಾರ್ಚ್ ನಾಲ್ಕರಂದು ಮಧ್ಯಾಹ್ನ ಸ್ವೀಟಿ ಎಂಬ ಮಹಿಳೆ ಮನೆಗೆ ಬಂದು ಹೊಡೆಯಲು ಆರಂಭಿಸಿದ್ದಲ್ಲದೆ ಕೆಳಗೆ ದೂಡಿಹಾಕಿ ಹೊಟ್ಟೆಗೆ ಒದ್ದಿದ್ದಾಳೆಂದು ತಿಳಿಸಿದ್ದಾರೆ. ಅಷ್ಟರಲ್ಲಿ ಪೂಜಾಳ ಸಹೋದರ ಪವನ್ ಬಂದು ಪೂಜಾಳನ್ನು ಪಾರು ಮಾಡಿದ್ದರು. ಸ್ವೀಟಿ ಪೂಜಾಳ ಮೊಬೈಲ್ ಮತ್ತು ಪರ್ಸ್‌ನ್ನು ಎಗರಿಸಿಹೋಗಿದ್ದಾಳೆ. ಪರ್ಸ್‌ನಲ್ಲಿ 5,500ರೂಪಾಯಿ ಇತ್ತೆಂದು ಪೂಜಾ ತಿಳಿಸಿದ್ದಾಳೆ. ಒಂದು ವರ್ಷದ ಹಿಂದೆ ಸ್ವೀಟಿಯಿಂದ ಪೂಜಾ ಇಪ್ಪತ್ತು ಸಾವಿರ ರೂಪಾಯಿ ಬಡ್ಡಿಗೆ ಸಾಲ ಪಡೆದಿದ್ದಳು. ಅದನ್ನು ಆರು ತಿಂಗಳ ಹಿಂದೆ ಪೂಜಾ ಸಂದಾಯ ಮಾಡಿದ್ದಳು. ಪೂಜಾ ತಾನು ಕೊಟ್ಟಿದ್ದ ಚೆಕ್‌ನ್ನು ವಾಪಸು ಕೇಳಿದಾಗ ಸ್ವೀಟಿ ನೀಡಿರಲಿಲ್ಲ. ಅದನ್ನು ಕೇಳಿದ್ದಕ್ಕಾಗಿ ಸ್ವೀಟಿ ಪೂಜಾಗೆ ಜಗಳ ಮಾಡಿ ಹೊಟ್ಟೆಗೆ ಒದ್ದಿದ್ದಾಳೆ ಎಂದು ವರದಿಯಾಗಿದೆ.





