ಅಂಗಾಂಗ ದಾನಕ್ಕೆ ಕರಾವಳಿ ಪ್ರತ್ಯೇಕ ವಿಭಾಗ ಅಗತ್ಯ: ಪ್ಯಾಟ್ರಿಸಿಯ ವೀಗೋ

ಮಂಗಳೂರು,ಮಾ.10: ಕರಾವಳಿ ಜಿಲ್ಲೆಗೆ ಪ್ರತ್ಯೇಕ ವಿಭಾಗ ಮಾಡಿದರೆ ಕರಾವಳಿಯಲ್ಲಿ ದಾನಿಯೊಬ್ಬರು ನೀಡಿದ ಅಂಗಾಂಗವನ್ನು ಕರಾವಳಿ ಜಿಲ್ಲೆಯಲ್ಲಿ ಬೇಡಿಕೆಯಿರುವ ಮತ್ತೊಬ್ಬರಿಗೆ ನೀಡಲು ಅನುಕೂಲವಾಗಲಿದೆ ಎಂದು ಬೆಂಗಳೂರಿನ ಝಡ್‌ಸಿಸಿಕೆಯ ಹಿರಿಯ ಅಂಗಾಂಗ ಕಸಿ ಸಂಯೋಜಕಿ ಪ್ಯಾಟ್ರಿಸಿಯ ವೀಗೋ ಹೇಳಿದರು.
ನಗರದ ಎ ಜೆ ಆಸ್ಪತ್ರೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಅಂಗಾಂಗ ಕಸಿ ಮಾಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಸಾರಿಗೆ ವ್ಯವಸ್ಥೆ ದೊಡ್ಡ ಸಮಸ್ಯೆ ಯಾಗಿದೆ. ಮಂಗಳೂರಿನಲ್ಲಿ ಅಂಗಾಂಗ ದಾನ ಮಾಡಲು ದಾನಿಯೊಬ್ಬರಿದ್ದರೆ ಅದು ಮಂಗಳೂರಿನಲ್ಲಿರುವ ಅಂಗಾಂಗ ಬೇಡಿಕೆಯಿರುವ ರೋಗಿಗೆ ನೀಡಲು ನಿಯಮಾವಳಿಯ ಸಮಸ್ಯೆಯಿದೆ. ಅಂಗಾಂಗ ಪಡೆಯಲು ಹೆಸರು ನೋಂದಾಣಿ ಮಾಡಿಕೊಂಡವರಲ್ಲಿ ಮೊದಲಿಗರಿಗೆ ಆದ್ಯತೆಯ ಮೇಲೆ ಅಂಗಾಂಗವನ್ನು ನೀಡಬೇಕಾಗಿರುವುದರಿಂದ ಅಲ್ಲಿಗೆ ಕೊಂಡೊಯ್ಯಬೇಕಾಗುತ್ತದೆ ಎಂದು ಹೇಳಿದರು.
ಸಾರಿಗೆ ವೆಚ್ಚದಾಯಕವಾಗಿರುವುದು ಮತ್ತು ಅಂಗಾಂಗವನ್ನು ಬೇರ್ಪಡಿಸಿದ ನಂತರ ಕಡಿಮೆ ಸಮಯದಲ್ಲಿ ಅಂಗಾಂಗ ಜೋಡಣೆ ಮಾಡಬೇಕಾಗಿರುವುದರಿಂದ ಅಂಗಾಂಗವನ್ನು ಅಗತ್ಯವಿರುವಲ್ಲಿಗೆ ಕೊಂಡೊಯ್ಯುವುದೆ ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದರು.
ಅಂಗಾಂಗ ದಾನ ಮಾಡುವ ದಾನಿಗಳು ಮೃತ ವ್ಯಕ್ತಿಯ ದೇಹವನ್ನು ಶೀಘ್ರ ತಮ್ಮ ಸುರ್ದಿಗೆ ನೀಡುವಂತೆ ವಿನಂತಿಸುತ್ತಾರೆ.ಈ ನಡುವೆ ಅಂಗಾಂಗವನ್ನು ಪಡೆಯಲು ಅಗತ್ಯವಿರುವವರನ್ನು ಸಂಪರ್ಕಿಸುವುದು ಮತ್ತು ಅವರ ದೇಹಕ್ಕೆ ದಾನಿ ನೀಡುವ ಅಂಗಾಂಗ ಹೊಂದಾಣಿಕೆಯಾಗುತ್ತದೆಯೆ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಇದೀಗ ಅಂಗಾಂಗದಾನಕ್ಕೆ ಸಂಬಂದಪಟ್ಟಂತೆ ರಾಜ್ಯದಲ್ಲಿರುವ ಬೇಡಿಕೆಯ ಆಧಾರದ ಮೇಲೆ ದಾನಿಗಳಿಂದ ಬೇಡಿಕೆಯಿರುವವರಿಗೆ ನಿಡಲಾಗುತ್ತದೆ ಎಂದು ಹೇಳಿದರು.







