ವಿಶ್ವ ಸಾಂಸ್ಕೃತಿಕ ಉತ್ಸವದಿಂದ ಹಿಂದೆ ಸರಿದ ಜಿಂಬಾಬ್ವೆ ಅಧ್ಯಕ್ಷ ಮುಗಾಬೆ

ನವದೆಹಲಿ : ಈಗಾಗಲೇ ಸಾಕಷ್ಟು ವಿವಾದಕ್ಕೀಡಾಗಿರುವ ಆರ್ಟ್ ಆಫ್ ಲಿವಿಂಗ್ ಯಮುನಾ ನದಿ ತೀರದಲ್ಲಿ ಆಯೋಜಿಸಲಿರುವ ವಿಶ್ವ ಸಾಂಸ್ಕೃತಿಕ ಉತ್ಸವಕ್ಕೆ ಇನ್ನೊಂದು ಹೊಡೆತ ಬಿದ್ದಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದ ಅತಿ ಗಣ್ಯ ವ್ಯಕ್ತಿಗಳಲ್ಲೊಬ್ಬರಾದ ಜಿಂಬಾಬ್ವೆ ಅಧ್ಯಕ್ಷ ರಾಬರ್ಟ್ ಮುಗಾಬೆ ಈ ಉತ್ಸವದಿಂದ ಸುರಕ್ಷಾ ಲೋಪಗಳ ನೆಪದಲ್ಲಿ ಹಿಂದೆ ಸರಿದಿದ್ದಾರೆ. ಕಾರ್ಯಕ್ರಮದ ಸುರಕ್ಷಾ ಏರ್ಪಾಡುಗಳಲ್ಲಿರುವ ಲೋಪದ ಬಗ್ಗೆ ಆಯೋಜಕರೇ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಮುಗಾಬೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ.
ಸೋಮವಾರ ಹರಾರೆಯಿಂದ ನವದೆಹಲಿಗೆ ಪ್ರಯಾಣಿಸಿದ್ದ ಮುಗಾಬೆ ಭಾರತದ ರಾಜಧಾನಿ ತಲುಪಿದ್ದರೂ 48 ಗಂಟೆಗಳೊಳಗೆ ಮತ್ತೆ ಸ್ವದೇಶಕ್ಕೆ ಹೊರಟಿದ್ದಾರೆೆಂದುಜಿಂಬಾಬ್ವೆ ನ್ಯೂಸ್‌ಡೇ ವರದಿ ಮಾಡಿದೆ.
ಈ ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸಲು ಬಂದಿರುವ ರಾಷ್ಟ್ರವೊಂದರ ಮುಖ್ಯಸ್ಥನೊಬ್ಬ ತಾನೊಬ್ಬನೇ ಹಾಗೂ ಸುರಕ್ಷಾ ವ್ಯವಸ್ಥೆಗಳು ಕೂಡ ಸಮಾಧಾನಕರವಾಗಿಲ್ಲವೆಂದು ತಿಳಿದ 92 ವರ್ಷದ ಮುಗಾಬೆ ಸ್ವದೇಶಕ್ಕೆ ಮರಳೀದ್ದಾರೆಂದು ವರದಿ ತಿಳಿಸಿದೆ.
‘‘ಕಾರ್ಯಕ್ರಮ ನಡೆಯಲಿರುವ ದೇಶದ ನಾಯಕರೂ ಸೇರಿದಂತೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದ ಹಲವಾರು ನಾಯಕರು ಹಿಂದಕ್ಕೆ ಸರಿದ್ದಿದಾರೆ. ಅಧ್ಯಕ್ಷರು ಒಂದೆರಡು ದಿನಗಳಲ್ಲಿ ಸ್ವದೇಶಕ್ಕೆ ಮರಳಲಿದ್ದಾರೆ,’’ಎಂದು ಜಿಂಬಾಬ್ವೆ ಟಿವಿ ವಾಹಿನಿಯೊಂದು ವರದಿ ಮಾಡಿದೆ.
ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲವೆಂದು ಗೊತ್ತಿದ್ದೂ ಮುಗಾಬೆ ತಮ್ಮ ವಿದೇಶ ಸಚಿವ ಸಿಂಬರಶೆ ಮುಂಬೆಂಗೆಗ್ವಿ ಹಾಗೂ ಹಿರಿಯ ಸರಕಾರಿ ಅಧಿಕಾರಿಗಳೊಂದಿಗೆ ಭಾರತಕ್ಕೆ ಪಯಣಿಸಿದ್ದರು.







