ಮ್ಯಾಗಿಗೆ ಮತ್ತೆ ಸಂಕಷ್ಟ
" ಕೆಳದರ್ಜೆಯ ಸ್ಯಾಂಪಲ್ ಗಳು" ಎಂದ ಉತ್ತರ ಪ್ರದೇಶದ ಅಧಿಕಾರಿಗಳು
_0.png)
ಹೊಸದಿಲ್ಲಿ, ಮಾ. 10 : ಮ್ಯಾಗಿಗೆ ಮತ್ತೆ ಸಂಕಷ್ಟ ಬಂದ ಹಾಗಿದೆ. ನೆಸ್ಲೆಯ ಮ್ಯಾಗಿಯ ಹೊಸ ಸ್ಯಾಂಪಲ್ ಗಳು "ಕೆಳದರ್ಜೆಯವು" ಎಂದು ಉತ್ತರ ಪ್ರದೇಶ ರಾಜ್ಯ ಅಧಿಕಾರಿಗಳು ಹೇಳಿದ್ದಾರೆ. ಆದರೆ ನೆಸ್ಲೆ ಈ ಆರೋಪವನ್ನು ಸಾರಾಸಗಟಾಗಿ ನಿರಾಕರಿಸಿದೆ. ಫೆಬ್ರವರಿ ೫ ರಂದು ಬಾರಾಬಂಕಿ ಜಿಲ್ಲೆಯಲ್ಲಿ ಸಂಗ್ರಹಿಸಿದ ಮ್ಯಾಗಿ ನೂಡಲ್ಸ್ ಸ್ಯಾಂಪಲ್ ಗಳು "ಕೆಳದರ್ಜೆಯವು" ಎಂದು ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ ಎಂದು ಇಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಲಕ್ನೊ ಮೂಲದ ರಾಜ್ಯ ಸರಕಾರದ ಅಧೀನದ ಪ್ರಯೋಗಾಲಯವೊಂದರಲ್ಲಿ ನಡೆಸಿದ ಪರೀಕ್ಷೆಯಲ್ಲಿ ಈ ಸ್ಯಾಂಪಲ್ ಗಳಲ್ಲಿ 1.85 % ಬೂದಿ ಅಂಶ ಇರುವುದು ಕಂಡು ಬಂದಿದೆ. ಇದು ಅನುಮತಿಯಿರುವ 1% ಕ್ಕಿಂತ ಹೆಚ್ಚಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ಆದರೆ ನೆಸ್ಲೆ ಈ ಆರೋಪವನ್ನು ನಿರಾಕರಿಸಿದೆ. " ಮ್ಯಾಗಿ ನೂಡಲ್ಸ್ 100% ಸುರಕ್ಷಿತವಾಗಿದೆ. ಮಕರೋನಿ ಉತ್ಪನ್ನಗಳಿಗೆ ಅನುಸರಿಸುವ ಮಾನದಂಡವನ್ನು ತಪ್ಪಾಗಿ ನೂಡಲ್ಸ್ ಗೆ ಬಳಸಿದ್ದರಿಂದ ಹೀಗಾಗಿದೆ ಎಂದು ಮಾಧ್ಯಮ ವರದಿಗಳ ಮೂಲಕ ಸ್ಪಷ್ಟವಾಗಿದೆ " ಎಂದು ನೆಸ್ಲೆ ಹೇಳಿದೆ.
ನೆಸ್ಲೆ ಸಹಿತ ಇತರ ಉದ್ಯಮ ಸಂಸ್ಥೆಗಳು ಫುಡ್ ಸೇಫ್ಟಿ ಎಂಡ್ ಸ್ಟಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾಕ್ಕೆ ಮನವಿ ನೀಡಿ ಈ ಗೊಂದಲ ನಿವಾರಿಸುವಂತೆ ಕೇಳಿದ್ದೇವೆ. " ಮಕರೋನಿ ಉತ್ಪನ್ನಗಳಿಗೆ ಅನುಸರಿಸುವ ಮಾನದಂಡವನ್ನು ನೂಡಲ್ಸ್ ಗಳಿಗೆ ಅನುಸರಿಸಿದರೆ ಇಂತಹ ತಪ್ಪು ಫ಼ಲಿತಾಂಶ ಹಾಗು ತೀರ್ಮಾನಗಳು ಬರುತ್ತವೆ. ನಮ್ಮ ಉತ್ಪನ್ನಗಳ ಗುಣಮಟ್ಟ ಹಾಗು ಸುರಕ್ಷತೆ ನಮಗೆ ರಾಜಿಯಿಲ್ಲದ ಆದ್ಯತೆಗಳಾಗಿವೆ " ಎಂದು ನೆಸ್ಲೆ ಹೇಳಿದೆ.





