ದರ್ಶನ್ ವಿಜಯಲಕ್ಷ್ಮೀ ಪ್ರಕರಣ ದಾಖಲು: ಮಂಜುಳಾ ಮಾನಸ

ಮಂಗಳೂರು,ಮಾ.8: ಚಲನಚಿತ್ರ ನಟ ದರ್ಶನ್‌ಮತ್ತು ಪತ್ನಿ ವಿಜಯಲಕ್ಷ್ಮೀ ಕುಟುಂಬದಲ್ಲಿ ಬಂದಿರುವ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ರಾಜ್ಯ ಮಹಿಳಾ ಆಯೋಗದಿಂದ ಸ್ವಯಂ ಪ್ರೇರಿತ ದೂರು (ಸುಮೊಟೋ) ದಾಖಲಿಸಲಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ತಿಳಿಸಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದರ್ಶನ್ ಮತ್ತು ವಿಜಯಲಕ್ಷ್ಮೀ ಎರಡು ದಿನಗಳ ಕಾಲಾವಕಾಶ ಕೇಳಿದ್ದಾರೆ. ಅದರಂತೆ ಇನ್ನು 2-3 ದಿನಗಳಲ್ಲಿ ದಂಪತಿಯ ಕೌನ್ಸೆಲಿಂಗ್ ನಡೆಸಿ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಕೌಟುಂಬಿಕ ಕಲಹದ ಪ್ರಕರಣಗಳಲ್ಲಿ ಮೊದಲು ಕೌನ್ಸೆಲಿಂಗ್ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶವಿದೆ. ಈಗ ಆಯೋಗದಲ್ಲಿ ಪ್ರಕರಣ ದಾಖಲಾಗಿರುವುದರಿಂದ ಕೌನ್ಸೆಲಿಂಗ್ ನಡೆಸಲಾಗುತ್ತದೆ. ಇದಕ್ಕೆ ಇಬ್ಬರೂ ಒಪ್ಪಿಗೆ ಸೂಚಿಸಿದ್ದಾರೆ . ಯಾವುದೇ ಸಾಮಾನ್ಯ ಮಹಿಳೆಗೆ ಅನ್ಯಾಯವಾದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಲಿ, ಆಗದಿರಲಿ, ಮಹಿಳಾ ಆಯೋಗಕ್ಕೆ ಸುಮೊಟೋ ಆಕ್ಷನ್ ಜಾರಿಗೊಳಿಸುವ ಅಧಿಕಾರವಿದೆ. ದರ್ಶನ್ ಅವರು ಸೆಲೆಬ್ರಿಟಿ ಎನ್ನುವ ಕಾರಣಕ್ಕಾಗಿ ಸುಮೊಟೋ ಕ್ರಮ ಕೈಗೊಂಡಿದ್ದಲ್ಲ ಎಂದು ಅವರು ಹೇಳಿದರು.
ದರ್ಶನ್ ಮತ್ತು ವಿಜಯಲಕ್ಷ್ಮೀ ನನ್ನೊಂದಿಗೆ ಮಾತನಾಡಿದ್ದಾರೆ. ಮಗನ ಮೇಲಿನ ಪ್ರೀತಿ ಮತ್ತು ಪತಿಯ ವರ್ಚಸ್ಸಿನ ಕುರಿತು ಕಾಳಜಿ ಇರುವುದರಿಂದ ಮಹಿಳಾ ಆಯೋಗದ ಎದುರು ಹಾಜರಾಗಲು 2-3 ದಿನಗಳ ಕಾಲಾವಕಾಶ ಬೇಕು ಎಂದು ವಿಜಯಲಕ್ಷ್ಮೀ ಹೇಳಿದ್ದಾರೆ. ದರ್ಶನ್ ಕೂಡ ಕರೆ ಮಾಡಿ, ನನ್ನ ಮಗನನ್ನು ನೋಡಲು ಅಪಾರ್ಟ್‌ಮೆಂಟ್ ಗೆ ಹೋಗಿದ್ದೆ. ಆದರೆ ಅಲ್ಲಿಗೆ ಹೋಗಲು ಅವಕಾಶ ನೀಡದಿರುವುದರಿಂದ ಸ್ವಲ್ಪ ಗೊಂದಲ ಉಂಟಾಗಿದೆ. ಮೊದಲು ವಿಜಯಲಕ್ಷ್ಮೀ ಮಾತನಾಡಲಿ, ನಂತರ ನಾನು ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ದರ್ಶನ್ ತಪ್ಪು ಮಾಡಿದ್ದರೆ ಅದು ತಪ್ಪೇ. ವಿಜಯಲಕ್ಷ್ಮೀ ಅವರು ವಿನಾಕಾರಣ ದೂರು ನೀಡಿದ್ದರೂ ಅದು ತಪ್ಪೇ. ಇಬ್ಬರೊಂದಿಗೆ ಕೌನ್ಸೆಲಿಂಗ್ ನಡೆಸಿದ ಬಳಿಕ ಪ್ರಕರಣವನ್ನು ಇತ್ಯರ್ಥಪಡಿಸುವ ಕೆಲಸವನ್ನು ಮಹಿಳಾ ಆಯೋಗದ ಮೂಲಕ ನಡೆಸಲಾಗುವುದು ಎಂದು ಹೇಳಿದರು.







