ಪುತ್ತೂರು ; ಬಾಲಕಿ ಫರ್ಝಾನಳಿಗೆ ಬೇಕಾಗಿದೆ ದಾನಿಗಳ ನೆರವು, ಮಗಳ ಮಾರಕ ರೋಗದಿಂದ ಕಂಗಾಲಾಗಿದೆ ಬಶೀರ್ ಕುಟುಂಬ

ಪುತ್ತೂರು; ಈಕೆಯ ಹೆಸರು ಫರ್ಝಾನ. ಪ್ರಾಯ 8 ವರ್ಷ. ಪ್ರಸ್ತುತ ಕೊಣಾಲು ಪ್ರಾಥಮಿಕ ಶಾಲೆಯ 2ನೇ ತರಗತಿಯಲ್ಲಿ ಓದುತ್ತಿರುವ ಈ ಪುಟ್ಟ ಬಾಲಕಿ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಳೆ. ಪುತ್ತೂರು ತಾಲೂಕಿನ ಗೋಳಿತೊಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಣಾಲು ಗ್ರಾಮದ ಕೋಲ್ಪೆ ಜನತಾ ಕಾಲೊನಿ ನಿವಾಸಿ ಮಹಮ್ಮದ್ ಬಶೀರ್ ಅವರ ಮೂವರು ಮಕ್ಕಳಲ್ಲಿ 2ನೆಯವಳಾದ ಫರ್ಝಾನ ಕಳೆದ ಕೆಲ ಸಮಯಗಳಿಂದ ಈ ರೋಗದಿಂದ ಬಳಲುತ್ತಿದ್ದಾಳೆ. ಇದರಿಂದಾಗಿ ಬಶೀರ್ ಅವರ ಬಡ ಕುಟುಂಬ ಇದೀಗ ಕಂಗಾಲಾಗಿದೆ. ಈ ಕುಟುಂಬದ ಇಬ್ಬರು ಮಕ್ಕಳು ಅಸಹಾಕತೆಯಲ್ಲಿ ಜೀವಿಸುತ್ತಿದ್ದಾರೆ. ತಂದೆ ಬಶೀರ್ ಮಂಗಳೂರಿನ ಹೋಟೆಲ್ ಒಂದರಲ್ಲಿ ಕಾರ್ಮಿಕ, ತಾಯಿ ಆಯಿಷಾ ಬೀಡಿಕಟ್ಟಿ ಕಷ್ಟದಿಂದ ಜೀವನ ಸಾಗಿಸುತ್ತಿದ್ದಾರೆ. ನೋವಿನ ಮೇಲೆ ಬರೆ ಎಂಬಂತೆ ಫರ್ಝಾನ ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದರೆ ಉಳಿದ ಇಬ್ಬರು ಮಕ್ಕಳಲ್ಲಿ ಓರ್ವ ಪುತ್ರ ಎಂಡೋಪೀಡಿತರಾಗಿ ಬಳಲುತ್ತಿದ್ದಾರೆ. ಜನತಾ ಕಾಲೊನಿಯಲ್ಲಿ ಸಣ್ಣ ಮನೆಯೊಂದರಲ್ಲಿ ವಾಸಿಸುತ್ತಿರುವ ಈ ಕುಟುಂಬದಲ್ಲಿ ಸಂತಸವಿಲ್ಲ. ನೋವನ್ನೇ ಹೊದ್ದುಕೊಂಡು ಬದುಕು ಸಾಗಿಸುತ್ತಿರುವ ಕುಟುಂಬದ ಮುಂದೆ ಪುಟ್ಟ ಮಕ್ಕಳ ’ಭವಿಷ್ಯ’ ಕಾಡುತ್ತಿದೆ.
ಫರ್ಝಾನಳಿಗೆ ಒಂದೂವರೆ ವರ್ಷದ ಹಿಂದೆ ಬ್ಲಡ್ ಕ್ಯಾನ್ಸರ್ ಬಂದಿರುವುದು ಕುಟುಂಬದ ಗಮನಕ್ಕೆ ಬಂದಿತ್ತು. ಬಳಿಕ ಅಲ್ಲಲ್ಲಿ ಸಾಲ ಮಾಡಿ ಹಾಗೂ ಸ್ಥಳೀಯ ದಾನಿಗಳ ನೆರವಿನಿಂದ ಮಗುವಿಗೆ ಮಂಗಳೂರಿನ ವೆನ್ಲಾಕ್ ಆಸ್ಪ್ರತೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಈಗಾಗಲೇ ರೂ. 3 ಲಕ್ಷಕ್ಕೂ ಹೆಚ್ಚು ಹಣ ಖರ್ಚಾಗಿದೆ. ವೈದ್ಯರು ಹೇಳುವಂತೆ ಇನ್ನೂ ಒಂದೂವರೆ ವರ್ಷ ಚಿಕಿತ್ಸೆ ಬೇಕಾಗಿದೆ. ಬಳಿಕಷ್ಟೇ ಬದುಕಿನ ಭರವಸೆ ಸಿಗಲಿದೆಯಂತೆ. ಬಶೀರ್ ಅವರ ಬಡ ಕುಟುಂಬದ ಮೇಲೆ ಈಗಾಗಲೇ ಸಾಲದೆ ಹೊರೆ ಸಾಕಷ್ಟಿದೆ. ಇನ್ನೂ ಚಿಕಿತ್ಸೆ ಕೊಡಿಸುವ ಚೈತನ್ಯ ಈ ಬಡ ಕುಟುಂಬಕ್ಕಿಲ್ಲ. ಫರ್ಝಾನಳ ಚಿಕಿತ್ಸೆಗೆ ಬಶೀರ್ ಅವರು ದಾನಿಗಳ ನೆರವು ಯಾಚಿಸುತ್ತಿದ್ದಾರೆ. ಅದಕ್ಕಾಗಿ ಕುಟುಂಬ ಮಾಧ್ಯಮದ ಮುಂದೆ ಬಂದಿದ್ದಾರೆ. ಈಗಾಗಲೇ ರಾಜ್ಯದ ಮುಖ್ಯಮಂತ್ರಿ, ಆರೋಗ್ಯ ಸಚಿವರಿಗೆ ಮನವಿ ಅರ್ಪಿಸಲಾಗಿದೆ. ಆದರೆ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಈ ಬಡಕುಟುಂಬಕ್ಕೆ ಮಗಳನ್ನು ರಕ್ಷಿಸಿಕೊಳ್ಳಬೇಕು ಎನ್ನುವ ಧಾವಂತವಿದೆ. ಆದರೆ ಕೈಯಲ್ಲಿ ದುಡ್ಡಿಲ್ಲ. ದಾನಿಗಳ ನೆರವೇ ನಮ್ಮ ಬದುಕು ಕಟ್ಟಕೊಳ್ಳಲು ಸಹಾಯಕ. ಮಗಳ ಜೀವನ ಸರಿಯಾದರೆ ಸಾಕು. ನಾವು ಕೂಲಿನಾಲಿ ಮಾಡಿ ಜೀವಿಸುತ್ತೇವೆ ಎನ್ನುವುದು ತಾಯಿ ಆಯಿಷಾ ಅವರ ನೋವಿನ ನುಡಿ.
ಸ್ಥಳೀಯರಾದ ಇಸ್ಮಾಯಿಲ್ ಕೋಲ್ಪೆ ಅವರ ನೇತೃತ್ವದಲಿ ಸ್ಪಲ್ಪ ಮಟ್ಟಿನ ಸಹಾಯ ದೊರಕಿದೆ ಎನ್ನುವ ಆಯಿಷಾ ಅವರು ಆದರೆ ಇಷ್ಟೇ ಸಾಕಾಗುತ್ತಿಲ್ಲ. ಅದಕ್ಕಾಗಿ ದಾನಿಗಳ ಸಹಾಯ ಬೇಕಾಗಿದೆ ಎಂದಿದ್ದಾರೆ. ಪುಟ್ಟ ಬಾಲಿ ಫರ್ಝಾನಳಿಗೆ ಬದುಕು ನೀಡಲು ಸಹೃದಯಿ ದಾನಿಗಳು ಸಹಾಯ ಮಾಡಬೇಕಾಗಿದೆ. ನೆರವು ನೀಡುವ ದಾನಿಗಳು ಮೊಬೈಲ್ ಸಂಖ್ಯೆ: 9663037323 ಅಥವಾ ಫರ್ಝಾನಾಳ ಬ್ಯಾಂಕ್ ಖಾತೆ : ಕೆನರಾ ಬ್ಯಾಂಕ್ ನೆಲ್ಯಾಡಿ ಶಾಖೆ; ಖಾತೆ ನಂ.1655108012807. ಇಲ್ಲಿಗೆ ನೀಡಬಹುದು.







