ಹೊರಗಿನ ವ್ಯಕ್ತಿಯಿಂದ ಜೆಎನ್‌ಯುನಲ್ಲಿ ಕನ್ಹಯ್ಯಾ ಮೇಲೆ ಹಲ್ಲೆಗೆ ಯತ್ನ

ಹೊಸದಿಲ್ಲಿ,ಮಾ.10: ಸೇನೆಯ ಕುರಿತು ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ ಹೇಳಿಕೆಯಿಂದ ಕ್ರುದ್ಧ ವ್ಯಕ್ತಿಯೋರ್ವ ವಿವಿಯ ಕ್ಯಾಂಪಸ್‌ನಲ್ಲಿಯೇ ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ಗುರುವಾರ ಸಂಭವಿಸಿದೆ. ಆರೋಪಿಯನ್ನು ಬಳಿಕ ಭದ್ರತಾ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ವ್ಯಕ್ತಿಯನ್ನು ವಿಕಾಸ ಚೌಧರಿ ಎಂದು ಗುರುತಿಸಲಾಗಿದ್ದು,ಘಾಜಿಯಾಬಾದ್ ನಿವಾಸಿಯಾಗಿರುವ ಈತ ಜೆಎನ್‌ಯುಗೆ ಸಂಬಂಧಿಸಿದವನಲ್ಲ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಚೌಧರಿ ಕನ್ಹಯ್ಯ ಮೇಲೆ ಹಲ್ಲೆಗೆ ಯತ್ನಿಸುತ್ತಿದ್ದಂತೆ ಇತರ ಜೆಎನ್‌ಯು ವಿದ್ಯಾರ್ಥಿಗಳು ಅವರ ರಕ್ಷಣೆಗೆ ಧಾವಿಸಿದ್ದು, ಅವರಿಗೆ ಯಾವುದೇ ಅಪಾಯವಾಗಿಲ್ಲ ಎನ್ನಲಾಗಿದೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚೌಧರಿ,ಸೇನೆಯ ಕುರಿತು ಕನ್ಹಯ್ಯ ಹೇಳಿಕೆಯಿಂದ ತಾನು ಕಳವಳಗೊಂಡಿದ್ದೆ. ಆತ ನಾಯಕನಾಗಲು ಬಯಸುತ್ತಿದ್ದಾನೆ ಮತ್ತು ತಾನು ಆತನಿಗೆ ಪಾಠ ಕಲಿಸಲು ಬಯಸಿದ್ದೆ ಎಂದು ಹೇಳಿದ.
Next Story





