ವಿಶ್ವವಿದ್ಯಾನಿಲಯದ ಸ್ವಾಯತ್ತತೆ ಮೇಲೆ ನಡೆದ ದಾಳಿ: ಡಾ.ಬಿಳಿಮಲೆ
ಜೆಎನ್‌ಯು ಪ್ರಕರಣ

ಹೊಸಪೇಟೆ, ಮಾ.10: ಹೊಸದಿಲ್ಲಿಯ ಜವಾಹಾರ ಲಾಲ್ ವಿಶ್ವವಿದ್ಯಾನಿಲಯದ ಸ್ವಾಯತ್ತತೆ ಮೇಲೆ ದಾಳಿ ನಡೆಸಲಾಗಿದೆ ಎಂದು ಜೆಎನ್‌ಯು ಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನುಡಿಹಬ್ಬ-24 ಘಟಿಕೋತ್ಸವ ಸಮಾರಂಭದನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಘಟನೆ ನಡೆಯುವುದಕ್ಕೆ ಮುಂಚೆ ಆರೆಸ್ಸೆಸ್‌ನ ಪಾಂಚಜನ್ಯ ಪತ್ರಿಕೆಯಲ್ಲಿ ಜೆಎನ್‌ಯುನಲ್ಲಿ ದೇಶದ್ರೋಹಿಗಳಿದ್ದಾರೆಂಬ ಲೇಖನ ಬಂದಿತ್ತು. ಸುಬ್ರಹ್ಮಣ್ಯಸ್ವಾಮಿ ಜೆಎನ್‌ಯು ಮುಚ್ಚಬೇಕೆಂದು ಹೇಳಿಕೆ ನೀಡಿದ್ದರು. ಇದರಿಂದ ಜೆಎನ್‌ಯುನಲ್ಲಿ ದೇಶದ್ರೋಹಿಗಳಿದ್ದಾರೆಂದು ಆಪಾದಿಸಿ ವಿವಿಯಲ್ಲಿ ಪೊಲೀಸರು ನುಗ್ಗಿ ವಿದ್ಯಾರ್ಥಿ ಮುಖಂಡರನ್ನು ಬಂಧಿಸಿರುವುದು ಸ್ವಾಯತ್ತತೆ ಮೇಲೆ ನಡೆದ ದಾಳಿಯಾಗಿದೆ ಎಂದರು.
ಈ ವಿಶ್ವವಿದ್ಯಾನಿಲಯದಲ್ಲಿ 8 ಸಾವಿರ ವಿದ್ಯಾರ್ಥಿಗಳಿದ್ದಾರೆ. ಎಲ್ಲ ವಿದ್ಯಾರ್ಥಿಗಳು ಬೌದ್ಧಿಕ ಸಂವಾದ ನಡೆಸುತ್ತಾರೆ. ಎಲ್ಲ ಸೈದ್ಧಾಂತಿಕ ವಿದ್ಯಾರ್ಥಿಗಳೂ ಇದ್ದಾರೆ. ಇಲ್ಲಿ ಎಲ್ಲ ರೀತಿಯ ಸಂವಾದ ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ. 5 ಜನ ವಿದ್ಯಾರ್ಥಿಗಳು ದೇಶದ್ರೋಹಿ ಘೋಷಣೆ ಕೂಗಿದರೆ ಅವರ ಮೇಲೆ ವಿವಿ ಕ್ರಮ ಕೈಗೊಳ್ಳಬೇಕಿತ್ತು. ಪೊಲೀಸರು ಏಕಾಏಕಿ ನುಗ್ಗಿರುವುದು ಪೂರ್ವನಿಯೋಜಿತ ಸಂಚಾಗಿದೆ ಎಂದರು. ಆವರಣದಲ್ಲಿ ಪೊಲೀಸರು ಮಧ್ಯೆ ಪ್ರವೇಶಿಸಿದ್ದು ಸರಿಯಲ್ಲ ವಿವಿ ಸ್ವಾಯತ್ತತೆಗೆ ಧಕ್ಕೆ ತರಬಾರದು ಎಂದು ಡಾ.ಬಿಳಿಮಲೆ ಹೇಳಿದರು.







