ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಿ: ಹೈಕೋರ್ಟ್
ಭೂ ಸ್ವಾಧೀನ ಪ್ರಕರಣ
ಬೆಂಗಳೂರು, ಮಾ.10: ಮೈಸೂರು, ಬೆಂಗಳೂರು ಹಾಗೂ ಇತರೆ ಜಿಲ್ಲೆಗಳಲ್ಲಿ ಭೂ ಸ್ವಾಧೀನ ಕಾಯ್ದೆ ಅಡಿಯಲ್ಲಿ ರೈತರಿಂದ ವಶಪಡಿಸಿಕೊಂಡ ಜಮೀನುಗಳಿಗೆ ಸರಕಾರ ಸೂಕ್ತ ಪರಿಹಾರ ನೀಡಬೇಕೆಂದು ಹೈಕೋರ್ಟ್ ಆದೇಶಿಸಿದೆ.
ಸೂಕ್ತ ಪರಿಹಾರ ಬೇಕೆಂದು ಹಲವು ರೈತರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದ್ ಭೈರಾರೆಡ್ಡಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಎಸ್‌ಇಝಡ್ ಜಾರಿ ಹಿನ್ನೆಲೆಯಲ್ಲಿ ಸರಕಾರ ರೈತರಿಂದ ಭೂಮಿಯನ್ನು ವಶಪಡಿಸಿಕೊಳ್ಳುವಾಗ ಸೂಕ್ತ ಪರಿಹಾರವನ್ನು ನೀಡಬೇಕು ಹಾಗೂ ಪರಿಹಾರವನ್ನು ನೀಡುವಾಗಲೂ ವಿಳಂಬ ಮಾಡಬಾರದೆಂಬ ಸೂಚನೆ ನೀಡಿತು.
ಅರ್ಜಿದಾರರ ಪರ ವಕೀಲರು ವಾದಿಸಿ, 419ಕ್ಕೂ ಹೆಚ್ಚು ಎಕರೆ ಭೂಮಿಯನ್ನು ಎಸ್‌ಇಝಡ್ ಜಾರಿ ಹಿನ್ನೆಲೆಯಲ್ಲಿ ಸರಕಾರ ವಶಪಡಿಸಿಕೊಂಡಿದ್ದು, ಈವರೆಗೆ ರೈತರಿಗೆ ಸೂಕ್ತ ಪರಿಹಾರವನ್ನು ನೀಡಿಲ್ಲವೆಂದು ನ್ಯಾಯಪೀಠಕ್ಕೆ ತಿಳಿಸಿದರು.
ಅಲ್ಲದೆ, ಪರಿಹಾರ ನೀಡುವುದಕ್ಕೂ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದು, ಇದರಿಂದ, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆಂದು ನ್ಯಾಯಪೀಠದ ಗಮನಕ್ಕೆ ತಂದರು.
ರೈತರಿಗೆ ಸೂಕ್ತ ಪರಿಹಾರವನ್ನು ಕಲ್ಪಿಸಿ ಹಾಗೂ ರೈತರಿಗೆ ನೀಡುವ ಪರಿಹಾರವೂ ವಿಳಂಬವಾಗಬಾರದೆಂದು ಹೈಕೋರ್ಟ್ ಸರಕಾರಕ್ಕೆ ಸೂಚನೆ ನೀಡಿತು.





