ಜವಳಿ ಇಲಾಖೆಯಲ್ಲಿ ಶೇ.91ರಷ್ಟು ಸಾಧನೆ: ಸಚಿವ ಚಿಂಚನಸೂರ್

ಬೆಂಗಳೂರು, ಮಾ. 10: ಕರ್ನಾಟಕ ಕೈಮಗ್ಗ ಮತ್ತು ಜವಳಿ ಇಲಾಖೆಗೆ 2015-16ರ ಆಯವ್ಯಯದಲ್ಲಿ 227.23 ಕೋಟಿ ರೂ.ಒದಗಿಸಲಾಗಿದೆ. 184.95 ಕೋಟಿ ರೂ. ಬಿಡುಗಡೆ ಮಾಡಿದ್ದು, ಆ ಪೈಕಿ 168.45 ಕೋಟಿ ರೂ.ವೆಚ್ಚ ಮಾಡ ಲಾಗಿದ್ದು, ಶೇ.91ರಷ್ಟು ಸಾಧನೆ ಮಾಡಿದೆ ಎಂದು ಜವಳಿ, ಬಂದರು ಸಚಿವ ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.
ಗುರುವಾರ ವಿಧಾನಸೌಧದ ತನ್ನ ಕೊಠಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ 12,306 ಮಂದಿ ನಿರುದ್ಯೋಗಿಗಳಿಗೆ 8 ಕೋಟಿ ರೂ. ವೆಚ್ಚದಲ್ಲಿ ಸಿದ್ಧ ಉಡುಪು ತಯಾರಿಕಾ ತರಬೇತಿ ಹಾಗೂ 60 ಸಾವಿರ ಮಂದಿಗೆ ತರಬೇತಿ ನೀಡಲಾಗಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ಒಟ್ಟು 171 ಜವಳಿ ಕೈಗಾರಿಕಾ ಘಟಕಗಳಿಗೆ ಒಟ್ಟು 20 ಕೋಟಿ ರೂ.ಪ್ರೋತ್ಸಾಹ ಧನ ಹಾಗೂ ಉತ್ತೇಜನ ಮೊತ್ತ ಬಿಡುಗಡೆ ಮಾಡಲಾಗಿದೆ. 440 ಜವಳಿ ಘಟಕಗಳಿಗೆ 42 ಕೋಟಿ ರೂ.ಪ್ರೋತ್ಸಾಹ ಧನ ನೀಡಿದ್ದು, 12, 570 ಮಂದಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಶಿವಮೊಗ್ಗದ ಶಾಹಿ ಎಕ್ಸ್ ಪೋರ್ಟ್, ಮದ್ದೂರಿನ ಶಾಹಿ ಎಕ್ಸ್‌ಪೋರ್ಟ್, ಬಿಜಾ ಪುರದ ಇಟ್ಕೊ ಡೆನಿಮ್, ದೊಡ್ಡ ಬಳ್ಳಾಪುರದ ಸ್ಕಾಟ್ಸ್ ಗಾರ್ಮೆಂಟ್ಸ್ ಹಾಗೂ ಹಾಸನದ ಪ್ರಿಕಾಟ್ ಮೆರಿ ಡಿಯನ್ ಕಂಪೆನಿಗಳಿಗೆ 17.10 ಕೋಟಿ ರೂ.ಪ್ರೋತ್ಸಾಹ, 100 ಕೋಟಿ ರೂ.ಸ್ಥಿರ ಬಂಡವಾಳ ಹೂಡಿಕೆ ಮಾಡಿದ್ದು, 22 ಸಾವಿರ ಮಂದಿಗೆ ಉದ್ಯೋಗ ಸೃಷ್ಟಿಯಾಗಿವೆ ಎಂದು ಅವರು ವಿವರಿಸಿದರು.
ಒಡಂಬಡಿಕೆ: ‘ಇನ್ವೆಸ್ಟ್- ಕರ್ನಾಟಕ’ ಬಂಡವಾಳ ಹೂಡಿಕೆ ದಾರರ ಸಮಾವೇಶದಲ್ಲಿ ಜವಳಿ ಉದ್ಯಮಕ್ಕೆ ಸೇರಿದಂತೆ 325 ಯೋಜನೆಗಳಿಗೆ ಒಡಂಬಡಿಕೆ ಮಾಡಿಕೊಂಡಿದ್ದು, 6,349 ಕೋಟಿ ರೂ.ಹೂಡಿಕೆ ಮತ್ತು 85 ಸಾವಿರ ಉದ್ಯೋಗ ಸೃಷ್ಟಿ ಆಗುವ ನಿರೀಕ್ಷೆ ಹೊಂದಲಾಗಿದೆ ಎಂದು ಅವರು ತಿಳಿಸಿದರು.
ನೂತನ ಜವಳಿ ನೀತಿಯನ್ವಯ ಈವರೆಗೂ ಸುಮಾರು 2,404 ಕೋಟಿ ರೂ. ಹೂಡಿಕೆಯಾಗಿದ್ದು, ಸುಮಾರು 96,568 ಜನರಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ ಎಂದ ಅವರು, ಮಾರ್ಚ್ ಅಂತ್ಯದ ವೇಳೆ ಶೇ.100ರಷ್ಟು ಸಾಧನೆ ಮಾಡಲು ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಹೊಸದಿಲ್ಲಿಗೆ: ಕರಾವಳಿ ಬಂದರುಗಳ ಸಮಗ್ರ ಅಭಿವೃದ್ಧಿ ಮತ್ತು ಒಳನಾಡು ಜಲಸಾರಿಗೆ ಅಭಿವೃದ್ಧಿಗಾಗಿ ರೂಪಿಸಿರುವ ‘ಕರ್ನಾಟಕ ಜಲಸಾರಿಗೆ ಮಂಡಳಿ’ ಸ್ಥಾಪಿಸುವ ವಿಧೇಯಕಕ್ಕೆ ಅಂಕಿತ ಹಾಕಲು ಕೋರಿ ರಾಷ್ಟ್ರಪತಿಯವರನ್ನು ಭೇಟಿ ಮಾಡುವೆ ಎಂದು ಬಾಬುರಾವ್ ಚಿಂಚನಸೂರ್ ಹೇಳಿದರು.
ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದಿರುವ ವಿಧೇಯಕವನ್ನು ಕೇಂದ್ರಕ್ಕೆ ರವಾನಿಸಿದ್ದು, ಗೃಹ ಇಲಾಖೆ ಪರಿಶೀಲನೆಯಲ್ಲಿದೆ. ಆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ನೌಕಾಯಾನ ಸಚಿವ ನಿತಿನ್ ಗಡ್ಕರಿ ಅವರನ್ನು ಖುದ್ದು ಭೇಟಿ ಮಾಡುವೆ ಎಂದರು.
ಕರಾವಳಿಯ ಮೂರು ಜಿಲ್ಲೆಗಳಲ್ಲಿನ ಸುಮಾರು 300ಕಿ.ಮೀ ಉದ್ದವನ್ನು ಹೊಂದಿದ್ದು, ಆ ಪೈಕಿ ಶೇ.20ರಷ್ಟು ಅಂದರೆ ಸುಮಾರು 60 ಕಿ.ಮೀ ನಷ್ಟು ಕರಾವಳಿ ತೀರವು ಕಡಲ ಕೊರೆತಕ್ಕೆ ತುತ್ತಾಗುತ್ತಿದೆ. ಆದುದರಿಂದ ಕಡಲ ಕೊರೆತ ತಡೆಗೆ ಕ್ರಮ ಕೈಗೊಳ್ಳಲಾಗಿದ್ದು, ವಿವಿಧ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ರಾಜ್ಯದಲ್ಲಿ ಬಿಪಿಎಲ್ ಕುಟುಂಬಗಳ ಸದಸ್ಯರಿಗೆ ‘ವಸ್ತ್ರ ಭಾಗ್ಯ’ ಯೋಜನೆಯಡಿ ಸೀರೆ-ರವಿಕೆ, ಅಂಗಿ-ಪಂಚೆ, ಟವೆಲ್ ನೀಡಲು ಉದ್ದೇಶಿಸಿದ್ದು, ಈ ಯೋಜನೆಗೆ ವಾರ್ಷಿಕ 750 ಕೋಟಿ ರೂ.ವೆಚ್ಚವಾಗಲಿದೆ. ಈ ಸಂಬಂಧ ಸಿಎಂ ಜೊತೆ ಚರ್ಚಿಸಿ ಯೋಜನೆ ಜಾರಿಗೆ ಕ್ರಮ ವಹಿಸಲಾಗುವುದು.
&ಬಾಬುರಾವ್ ಚಿಂಚನಸೂರ್, ಜವಳಿ ಸಚಿವ





