ಆಸ್ಟ್ರೇಲಿಯ ಮಡಿಲಿಗೆ ಟ್ವೆಂಟಿ-20 ಟ್ರೋಫಿ

ಅಮ್ಲ ಪಂದ್ಯಶ್ರೇಷ್ಠ, ವಾರ್ನರ್ ಸರಣಿಶ್ರೇಷ್ಠ
ಕೇಪ್‌ಟೌನ್, ಮಾ.10: ಮೂರನೆ ಹಾಗೂ ಅಂತಿಮ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಠಿಣ ಸವಾಲನ್ನು ಯಶಸ್ವಿಯಾಗಿ ಬೆನ್ನತ್ತಿದ ಆಸ್ಟ್ರೇಲಿಯ ತಂಡ ದಕ್ಷಿಣ ಆಫ್ರಿಕ ತಂಡವನ್ನು 6 ವಿಕೆಟ್‌ಗಳ ಅಂತರದಿಂದ ಮಣಿಸಿತು. ಈ ಗೆಲುವಿನ ಮೂಲಕ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು.
ಬುಧವಾರ ಇಲ್ಲಿ ನಡೆದ 3ನೆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕ ತಂಡ ಹಾಶಿಮ್ ಅಮ್ಲ(ಔಟಾಗದೆ 97) ಅವರ ಭರ್ಜರಿ ಅರ್ಧಶತಕದ ಬೆಂಬಲದಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 178 ರನ್ ಗಳಿಸಿತ್ತು.
ಗೆಲ್ಲಲು ಕಠಿಣ ಸವಾಲು ಪಡೆದ ಆಸ್ಟ್ರೇಲಿಯ 19.2 ಓವರ್‌ಗಳಲ್ಲಿ 181 ರನ್ ಗಳಿಸಿತು. ಉಸ್ಮಾನ್ ಖ್ವಾಜಾ(33) ಹಾಗೂ ಶೇನ್ ವ್ಯಾಟ್ಸನ್(42) ಮೊದಲ ವಿಕೆಟ್‌ಗೆ 76 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಈ ಇಬ್ಬರು ಆಟಗಾರರು 3 ಎಸೆತಗಳ ಅಂತರದಲ್ಲಿ ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್‌ಗೆ ವಿಕೆಟ್ ಒಪ್ಪಿಸಿದರು.
ಆಗ ಜೊತೆಯಾದ ನಾಯಕ ಸ್ಟೀವನ್ ಸ್ಮಿತ್(44) ಹಾಗೂ ಡೇವಿಡ್ ವಾರ್ನರ್(33) 3ನೆ ವಿಕೆಟ್‌ಗೆ 79 ರನ್ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಆಲ್‌ರೌಂಡರ್‌ಗಳಾದ ಗ್ಲೆನ್ ಮ್ಯಾಕ್ಸ್‌ವೆಲ್(ಔಟಾಗದೆ 19, 10 ಎಸೆತ) ಹಾಗೂ ಮಿಚೆಲ್ ಮಾರ್ಷ್(ಔಟಾಗದೆ 4) ಗೆಲುವಿನ ಶಾಸ್ತ್ರ ಮುಗಿಸಿದರು.
ಅಮ್ಲರ 97 ರನ್ ವ್ಯರ್ಥ: ಆರಂಭಿಕ ದಾಂಡಿಗ ಅಮ್ಲ(ಔಟಾಗದೆ 97 ರನ್, 62 ಎಸೆತ, 8 ಬೌಂಡರಿ, 4 ಸಿಕ್ಸರ್) ದಕ್ಷಿಣ ಆಫ್ರಿಕ ತಂಡ ಸವಾಲಿನ ಮೊತ್ತ ಗಳಿಸಲು ನೆರವಾದರು. ಅಮ್ಲ ಹಾಗೂ ಕ್ವಿಂಟನ್ ಡಿಕಾಕ್ ಮೊದಲ ವಿಕೆಟ್‌ಗೆ 47 ರನ್ ಸೇರಿಸಿದರು.
ಅಮ್ಲ ಆಸ್ಟ್ರೇಲಿಯದ ವಿರುದ್ಧ ಟ್ವೆಂಟಿ-20 ಪಂದ್ಯದಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ದಕ್ಷಿಣ ಆಫ್ರಿಕದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು.
ನ್ಯೂಲ್ಯಾಂಡ್ಸ್ ಸ್ಟೇಡಿಯಂನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದರು. ಆದರೆ, ದಕ್ಷಿಣ ಆಫ್ರಿಕ 6 ವಿಕೆಟ್‌ಗಳಿಂದ ಸೋತ ಕಾರಣ ಅಮ್ಲರ ಈ ಸಾಹಸ ವ್ಯರ್ಥವಾಯಿತು.
ಎಬಿ ಡಿವಿಲಿಯರ್ಸ್ ಅನುಪಸ್ಥಿತಿಯಲ್ಲಿ ಸರಣಿಯಲ್ಲಿ ಮೊದಲ ಬಾರಿ ಆಡುವ ಅವಕಾಶ ಪಡೆದಿದ್ದ ಅಮ್ಲ ಆಕರ್ಷಕ ಅರ್ಧಶತಕದಿಂದ ಗಮನ ಸೆಳೆದರು. ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.
ಡೇವಿಡ್ ವಾರ್ನರ್ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕ: 20 ಓವರ್‌ಗಳಲ್ಲಿ 178/4
(ಹಾಶಿಮ್ ಅಮ್ಲ ಔಟಾಗದೆ 97, ಮಿಲ್ಲರ್ 30, ಡಿಕಾಕ್ 25, ಕೌಲ್ಟರ್ ನೀಲ್ 2-36)
ಆಸ್ಟ್ರೇಲಿಯ: 19.2 ಓವರ್‌ಗಳಲ್ಲಿ 181/4
(ಸ್ಟೀವ್ ಸ್ಮಿತ್ 44, ವ್ಯಾಟ್ಸನ್ 42, ಖ್ವಾಜಾ 33, ವಾರ್ನರ್ 33, ತಾಹಿರ್ 2-38)







