ಟೆಲಿಕಾಂ, ಬ್ಯಾಂಕ್, ರೈಲ್ವೆ ವಿರುದ್ಧ ಗರಿಷ್ಠ ಸಾರ್ವಜನಿಕ ದೂರುಗಳು
ಹೊಸದಿಲ್ಲಿ,ಮಾ.10: ಕಳೆದ ಮೂರು ವರ್ಷಗಳಲ್ಲಿ ಸರಕಾರದ ವಿವಿಧ ಇಲಾಖೆಗಳ ಪೈಕಿ ದೂರಸಂಪರ್ಕ ಇಲಾಖೆ,ಬ್ಯಾಂಕುಗಳು ಮತ್ತು ರೈಲ್ವೆ ವಿರುದ್ಧ ಗರಿಷ್ಠ ಸಂಖ್ಯೆಯ ದೂರುಗಳು ದಾಖಲಾಗಿವೆ ಎಂದು ಸಹಾಯಕ ಸಿಬ್ಬಂದಿ,ಸಾರ್ವಜನಿಕ ದೂರುಗಳು ಮತ್ತು ಪಿಂಚಣಿ ಸಚಿವ ಜಿತೇಂದ್ರ ಸಿಂಗ್ ಅವರು ಗುರುವಾರ ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದರು.
ವಿವಿಧ ಸಚಿವಾಲಯಗಳ ವಿರುದ್ಧ 2015ರಲ್ಲಿ 8.81 ಲಕ್ಷಕ್ಕೂ ಅಧಿಕ ದೂರುಗಳು ಸಲ್ಲಿಕೆಯಾಗಿದ್ದು,ಹಿಂದಿನ ವರ್ಷಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಳವಾಗಿದೆ. ಸರಕಾರವು ಕೈಗೊಂಡಿರುವ ‘ನಾಗರಿಕ ಸ್ನೇಹಿ’ಕ್ರಮಗಳು ಇದಕ್ಕೆ ಕಾರಣ ಎಂದು ಅವರು ಹೇಳಿದರು.
2015ರಲ್ಲಿ ದೂರಸಂಪರ್ಕ ಇಲಾಖೆ,ಹಣಕಾಸು ಸೇವೆಗಳ ಇಲಾಖೆ(ಬ್ಯಾಂಕಿಂಗ್ ವಿಭಾಗ) ಮತ್ತು ರೈಲ್ವೆ ವಿರುದ್ಧ ಅನುಕ್ರಮವಾಗಿ 63,964, 53,866 ಮತ್ತು 46,693 ದೂರುಗಳು ದಾಖಲಾಗಿವೆ. 2014ರಲ್ಲಿ ಈ ದೂರುಗಳ ಸಂಖ್ಯೆ ಅನುಕ್ರಮವಾಗಿ 52,266, 13,129 ಮತ್ತು 20,028 ಆಗಿದ್ದವು.
ಸರಕಾರವು ಸ್ಥಾಪಿಸಿರುವ ಕೇಂದ್ರಿಕೃತ ಸಾರ್ವಜನಿಕ ದೂರುಗಳ ಪರಿಹಾರ ಮತ್ತು ನಿಗಾ ವ್ಯವಸ್ಥೆಯ ಮೂಲಕ ಆನ್‌ಲೈನ್‌ನಲ್ಲಿ ಈ ದೂರುಗಳು ಸಲ್ಲಿಕೆಯಾಗಿವೆ ಎಂದುಸಚಿವರು ತಿಳಿಸಿದರು.





