ಲೀ ಚಾಂಗ್ ವೀಗೆ ಪ್ರಣೀತ್ ಆಘಾತ
ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್
ಲಂಡನ್, ಮಾ.10: ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನಲ್ಲಿ ಭಾರತದ ಯುವ ಬ್ಯಾಡ್ಮಿಂಟನ್ ಆಟಗಾರ ಬಿ. ಸಾಯ್ ಪ್ರಣೀತ್ ಮೂರು ಬಾರಿಯ ಚಾಂಪಿಯನ್ ಲೀ ಚಾಂಗ್ ವೀ ಅವರನ್ನು ಮಣಿಸಿ ಶಾಕ್ ನೀಡಿದ್ದಾರೆ.
ಬುಧವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಪ್ರಣೀತ್ ಮಲೇಷ್ಯಾದ 2ನೆ ಶ್ರೇಯಾಂಕದ ವೀ ಅವರನ್ನು 24-22, 22-20 ಸೆಟ್‌ಗಳ ಅಂತರದಿಂದ ಸೋಲಿಸಿ ಮುಂಬರುವ ರಿಯೋ ಒಲಿಂಪಿಕ್ಸ್‌ಗೆ ಉತ್ತಮ ತಯಾರಿ ನಡೆಸಿದ್ದಾರೆ.
ಡ್ರಗ್ಸ್ ಸೇವನೆ ಆರೋಪದಲ್ಲಿ 8 ತಿಂಗಳ ಕಾಲ ನಿಷೇಧಕ್ಕೆ ಗುರಿಯಾಗಿ ಕಳೆದ ವರ್ಷ ಬ್ಯಾಡ್ಮಿಂಟನ್‌ಗೆ ವಾಪಸಾಗಿದ್ದ ಮಾಜಿ ವಿಶ್ವದ ನಂ.1 ಆಟಗಾರ ಲೀ 2014ರ ನಂತರ ಇದೇ ಮೊದಲ ಬಾರಿ ಆಲ್ ಇಂಗ್ಲೆಂಡ್‌ನಲ್ಲಿ ಸ್ಪರ್ಧಿಸಿದ್ದರು.
ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಕೆ. ಶ್ರೀಕಾಂತ್ ಇಂಗ್ಲೆಂಡ್‌ನ ರಾಜೀವ್ ಒಸೆಫ್‌ರನ್ನು 21-17, 21-12 ಸೆಟ್‌ಗಳಿಂದ ಸೋಲಿಸಿದರು. ವಿಶ್ವದ ನಂ.2ನೆ ಆಟಗಾರ್ತಿ ಸೈನಾ ನೆಹ್ವಾಲ್ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಕೆನಡಾದ ಮಿಚೆಲ್ ಲೀ ಅವರನ್ನು 21-17, 21-12 ಸೆಟ್‌ಗಳಿಂದ ಮಣಿಸಿದರು. ಆದರೆ, ಪಿ.ವಿ. ಸಿಂಧು ಥಾಯ್ಲೆಂಡ್‌ನ ಪೊರ್ನ್‌ಟಿಪ್ ವಿರುದ್ಧ 21-18, 17-21, 12-21 ಸೆಟ್‌ಗಳ ಅಂತರದಿಂದ ಸೋತರು.





