ಕಾಶ್ಮೀರದಲ್ಲಿ ಸೈನಿಕರಿಂದ ಅತ್ಯಾಚಾರ
ಕನ್ಹಯ್ಯ ಕುಮಾರ್ ಗಂಭೀರ ಆರೋಪ
ಹೊಸದಿಲ್ಲಿ,ಮಾ.10: ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ವಿದ್ಯಾರ್ಥಿಗಳ ಸಮಾವೇಶದಲ್ಲಿ ಮಾಡಿದ್ದ ಭಾಷಣವನ್ನು ಉಲ್ಲೇಖಿಸಿ ಬಿಜೆಪಿ ಯುವಮೋರ್ಚಾ ಪೊಲೀಸ್ ದೂರೊಂದನ್ನು ದಾಖಲಿಸಿದೆ. ಕನ್ಹಯ್ಯಾ ‘ರಾಷ್ಟ್ರವಿರೋಧಿ ಹೇಳಿಕೆಗಳನ್ನು’ ನೀಡುವ ಮೂಲಕ ಜಾಮೀನು ಶರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂದು ಅದು ಆರೋಪಿಸಿದೆ.
ನೀವು ನಮ್ಮನ್ನು ತಡೆಯಲು ಎಷ್ಟೇ ಪ್ರಯತ್ನಿಸಿ...ನಾವು ಮಾನವ ಹಕ್ಕುಗಳ ಉಲ್ಲಂಘನೆಗಳ ವಿರುದ್ಧ ಮಾತನಾಡಿಯೇ ಸಿದ್ಧ. ಸಶಸ್ತ್ರ ಪಡೆಗಳ ವಿಶೇಷಾಧಿಕಾರಗಳ ಕಾಯ್ದೆಯ ವಿರುದ್ಧ ನಾವು ಧ್ವನಿಯನ್ನೆತ್ತುತ್ತೇವೆ. ನಮ್ಮ ಯೋಧರ ಬಗ್ಗೆ ನಮಗೆ ತುಂಬ ಗೌರವವಿದೆಯಾದರೂ ಕಾಶ್ಮೀರಿ ಮಹಿಳೆಯರು ಭದ್ರತಾ ಸಿಬ್ಬಂದಿಯಿಂದ ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ ಎಂಬ ಕಟುಸತ್ಯದ ಬಗ್ಗೆ ನಾವೂ ಈಗಲೂ ಮಾತನಾಡುತ್ತೇವೆ ಎಂದು ಕನ್ಹಯ್ಯೆ ಮಂಗಳವಾರ ತಡರಾತ್ರಿ ವಿದ್ಯಾರ್ಥಿ ಸಮಾವೇಶದಲ್ಲಿ ಹೇಳಿದ್ದರು.
ಕನ್ಹಯ್ಯ ಮತ್ತು ಜೆಎನ್‌ಯು ಪ್ರೊಫೆಸರ್ ನಿವೇದಿತಾ ಮೆನನ್ ಅವರು ಫೆ.9ರ ಕಾರ್ಯಕ್ರಮದ ಬಳಿಕ ರಾಷ್ಟ್ರವಿರೋಧಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಯುವಮೋರ್ಚಾ ಬುಧವಾರ ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದೆ.
ಜೆಎನ್‌ಯುನಲ್ಲಿ ಕನ್ಹಯ್ಯ ಮೇಲೆ ಹಲ್ಲೆಗೆ ಯತ್ನ
ಹೊಸದಿಲ್ಲಿ, ಮಾ.10: ಸೇನೆಯ ಕುರಿತು ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ ಹೇಳಿಕೆಯಿಂದ ಕ್ರುದ್ಧ ವ್ಯಕ್ತಿಯೋರ್ವ ವಿವಿಯ ಕ್ಯಾಂಪಸ್‌ನಲ್ಲಿಯೇ ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ಗುರುವಾರ ಸಂಭವಿಸಿದೆ. ಆರೋಪಿಯನ್ನು ಬಳಿಕ ಭದ್ರತಾ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ವ್ಯಕ್ತಿಯನ್ನು ವಿಕಾಸ ಚೌಧರಿ ಎಂದು ಗುರುತಿಸಲಾಗಿದ್ದು, ಘಾಜಿಯಾಬಾದ್ ನಿವಾಸಿಯಾಗಿರುವ ಈತ ಜೆಎನ್‌ಯುಗೆ ಸಂಬಂಧಿಸಿದವನಲ್ಲ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಚೌಧರಿ ಕನ್ಹಯ್ಯ ಮೇಲೆ ಹಲ್ಲೆಗೆ ಯತ್ನಿಸುತ್ತಿದ್ದಂತೆ ಇತರ ಜೆಎನ್‌ಯು ವಿದ್ಯಾರ್ಥಿಗಳು ಅವರ ರಕ್ಷಣೆಗೆ ಧಾವಿಸಿದ್ದು, ಅವರಿಗೆ ಯಾವುದೇ ಅಪಾಯವಾಗಿಲ್ಲ ಎನ್ನಲಾಗಿದೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚೌಧರಿ,ಸೇನೆಯ ಕುರಿತು ಕನ್ಹಯ್ಯ ಹೇಳಿಕೆಯಿಂದ ತಾನು ಕಳವಳಗೊಂಡಿದ್ದೆ. ಆತ ನಾಯಕನಾಗಲು ಬಯಸುತ್ತಿದ್ದಾನೆ ಮತ್ತು ತಾನು ಆತನಿಗೆ ಪಾಠ ಕಲಿಸಲು ಬಯಸಿದ್ದೆ ಎಂದು ಹೇಳಿದ್ದಾನೆ.







