ಪರೋಲ್ ನೀಡಿದಲ್ಲಿ ವಿಕಾಸ್ ಯಾದವ್ ಇನ್ನೊಬ್ಬನನ್ನು ಕೊಂದಾನು!
ಹೈಕೋರ್ಟ್‌ನಲ್ಲಿ ನೀಲಂ ಕತಾರಾ ವಾದ
ಹೊಸದಿಲ್ಲಿ, ಮಾ.10: ತನ್ನ ಮಗ ನೀತೀಶ್‌ನ ಕೊಲೆ ಅಪರಾಧಿ ವಿಕಾಸ್ ಯಾದವ್‌ನನ್ನು ಪರೋಲ್‌ರ ಮೇಲೆ ಬಿಡುಗಡೆ ಮಾಡಿದರೆ, ಆತ ಬೇರೆ ಯಾರನ್ನೋ ಕೊಲ್ಲಬಹುದು. ಹಾಗೂ 10 ವರ್ಷದ ಬಳಿಕ, ಕೊಲ್ಲಲ್ಪಟ್ಟವನ ತಾಯಿ ನ್ಯಾಯಾಲಯದ ಮುಂದೆ ನಿಂತು ನ್ಯಾಯವನ್ನು ಬೇಡಬೇಕಾಗಬಹುದೆಂದು ನೀಲಂ ಕತಾರಾ ದಿಲ್ಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿರುವ ತನ್ನ ಪಿತ್ರಾರ್ಜಿತ ಆಸ್ತಿಯನ್ನು ಮಾರಲು 4 ವಾರಗಳ ಪರೋಲ್ ನೀಡುವಂತೆ ಮಾಡಿಕೊಂಡ ಮನವಿಯನ್ನು ನ್ಯಾಯಮೂರ್ತಿ ಸಿದ್ಧಾರ್ಥ ಮೃದುಲ್‌ರ ಮುಂದೆ ವಿರೋಧಿಸುತ್ತ ಅವರು ಈ ಮಾತನ್ನು ಹೇಳಿದ್ದಾರೆ.
ಪರೋಲ್‌ನಲ್ಲಿ ಬಿಡುಗಡೆಗೊಂಡಿದ್ದ ವೇಳೆ ಅರ್ಜಿದಾರ (ವಿಕಾಸ್ ಯಾದವ್) ತನ್ನ ಮಗನ ಹತ್ಯೆ ನಡೆಸಿದನೆಂದು 10 ವರ್ಷಗಳ ಬಳಿಕ ಇನ್ನೊಬ್ಬ ಮಹಿಳೆ ದಿಲ್ಲಿ ಹೈಕೋರ್ಟ್‌ನಲ್ಲಿ ನಿಂತು ಹೇಳುತ್ತಿರುವುದನ್ನು ಕೇಳಲು ತಾನು ಬಯಸುವುದಿಲ್ಲ ಎಂದ ನೀಲಂ, ನೀತೀಶ್ ಕತಾರಾ ಕೊಲೆ ಪ್ರಕರಣದಲ್ಲಿ 30 ವರ್ಷಗಳ ಕಾರಾಗೃಹ ಶಿಕ್ಷೆ ಅನುಭವಿಸುತ್ತಿರುವ ವಿಕಾಸ್‌ನ ಪರೋಲ್ ಮನವಿಯನ್ನು ವಿರೋಧಿಸಿದ್ದಾರೆ.
ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವವನು ಸುಧಾರಣೆಯ ‘ಪುಟ್ಟ ಹೆಜ್ಜೆಯನ್ನೂ’ ಇರಿಸಿಲ್ಲ ಎಂದವರು ಆರೋಪಿಸಿದ್ದಾರೆ.
ನೀಲಂರ ವಾದವನ್ನು ಬೆಂಬಲಸಿದ, ದಿಲ್ಲಿ ಪೊಲೀಸರ ಹೆಚ್ಚುವರಿ ಸ್ಥಾಯಿ ವಕೀಲ ರಾಜೇಶ್ ಮಹಾಜನ್, ವಿಚಾರಣೆಯ ವೇಳೆ ಹಾಗೂ ಮೇಲ್ಮನವಿ ಬಾಕಿಯಿರುವಾಗ ವಿಕಾಸ್, ವ್ಯವಸ್ಥೆಯ ದುರ್ಲಾಭ ಹಾಗೂ ದುರುಪಯೋಗ ನಡೆಸಿದ್ದನು. ಆದುದರಿಂದ ಆತನ ಪರೋಲ್ ಮನವಿ ಸಮರ್ಥನೀಯವಲ್ಲವೆಂದು ವಾದಿಸಿದ್ದಾರೆ.
ವಿಕಾಸ್ ಪರ ಹಾಜರಾಗಿದ್ದ ಹಿರಿಯ ವಕೀಲ ಎನ್. ಹರಿಹರನ್, ಅಧಿಕಾರಿಗಳ ಈ ಪ್ರವೃತ್ತಿ ಪ್ರಾಣಿಯನ್ನಾಗಿ ಅಥವಾ ಅದಕ್ಕಿಂತಲೂ ಕೆಟ್ಟವನನ್ನಾಗಿ ಮಾಡಬಹುದು. ಅವನು ಸುಧಾರಣೆಯಾಗುವ ಎಲ್ಲ ಅವಕಾಶವೂ ಇದೆ ಎಂದು ಪ್ರತಿಪಾದಿಸಿದ್ದಾರೆ.
ಮುಂದಿನ ವಿಚಾರಣೆ ಮಾ.17ರಂದು ನಡೆಯಲಿದೆ.





