ಲೋಕಸಭೆಯಲ್ಲಿ ಸುಷ್ಮಾಗೆ ವಿಪಕ್ಷಗಳ ಶಹಬ್ಬಾಸ್‌ಗಿರಿ!
ಹೊಸದಿಲ್ಲಿ, ಮಾ.10: ಆಳುವ ಪಕ್ಷಗಳು ಹಾಗೂ ವಿಪಕ್ಷಗಳ ನಡುವಿನ ಸೌಹಾರ್ದದ ಅಪೂರ್ವ ಕ್ಷಣವೊಂದರಲ್ಲಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇಂದು ಲೋಕಸಭೆಯಲ್ಲಿ ವಿಪಕ್ಷ ಸದಸ್ಯರಿಂದ ಶ್ಲಾಘನೆಯನ್ನು ಗಳಿಸಿದ್ದಾರೆ.
ತಾನು ಸುಷ್ಮಾ ಸ್ವರಾಜ್‌ಜೀಯವರಿಗೆ ಕೃತಜ್ಞತೆ ಸಲ್ಲಿಸಬಯಸುತ್ತೇನೆ.ಅವರು ವಿದೇಶಗಳಲ್ಲಿರುವ ನಮ್ಮವರ ರಕ್ಷಣೆಗೆ ಅತ್ಯಂತ ಒಳ್ಳೆಯ ಕೆಲಸ ಮಾಡುತ್ತಿದ್ದಾರೆಂದು ಆಮ್‌ಆದ್ಮಿ ಪಕ್ಷದ(ಎಎಪಿ) ಸಂಸದ ಭಗವಂತ ಮಾನ್ ಲೋಕಸಭೆಯಲ್ಲಿ ಪ್ರಶ್ನಾವಧಿಯಲ್ಲಿ ಹೇಳಿದರು.
ಇತ್ತೀಚೆಗೆ, ತನ್ನ ಕ್ಷೇತ್ರದ 13 ಮಂದಿಯನ್ನು ಸೌದಿ ಅರೇಬಿಯದಲ್ಲಿ ಗುಲಾಮರನ್ನಾಗಿ ಮಾಡಲಾಗಿತ್ತು. ತಾನು ಈ ಕುರಿತು ವಿದೇಶಾಂಗ ಸಚಿವಾಲಯದ ಅಧಿಕಾರಿಗಳನ್ನು ಭೇಟಿಯಾಗಿದ್ದೆ. ಅವರು ತಕ್ಷಣವೇ ಕ್ರಮ ಕೈಗೊಂಡರು. ಅದರ ಫಲವಾಗಿ, ಅವರೆಲ್ಲರನ್ನು ಮಾತ್ರವಲ್ಲದೆ ಇತರ 8 ಮಂದಿಯನ್ನು ರಕ್ಷಿಸಲಾಯಿತು ಹಾಗೂ ಅಂತಿಮವಾಗಿ ಸ್ವದೇಶಕ್ಕೆ ಸುರಕ್ಷಿತವಾಗಿ ಹಿಂದಿರುಗಿಸಲಾಯಿತೆಂದು ಅವರು ವಿವರಿಸಿದರು.
ಇನ್ನೊಬ್ಬ ಎಎಪಿ ಸದಸ್ಯ ಧರಂವೀರ್ ಗಾಂಧಿ ಸಹ ಸುಷ್ಮಾರನ್ನು ಹೊಗಳಿದರು. ತಾನು ಯಾವ ಪ್ರಶ್ನೆಯನ್ನೂ ಕೇಳುವುದಿಲ್ಲ. ಅವರಿಗೆ ಧನ್ಯವಾದ ಸಲ್ಲಿಸಲಷ್ಟೇ ತಾನು ಎದ್ದು ನಿಂತಿದ್ದೇನೆ. ಅಗತ್ಯವಾದಾಗೆಲ್ಲ ತಾವು ಸಚಿವೆಯ ನೆರವನ್ನು ಪಡೆದಿದ್ದೇವೆ. ಅವರು ಪಂಜಾಬಿನ ಜನರಿಗಾಗಿ ಭಾರೀ ಕೆಲಸ ಮಾಡಿದ್ದಾರೆಂದು ಅವರು ಹೇಳಿದರು.
ಒಬ್ಬರು ಸಚಿವೆಯಾಗಿ ಅವರ ಪ್ರತಿಕ್ರಿಯೆ ವಿಶಿಷ್ಟವಾದುದೆಂದು ಬಿಜೆಡಿ ನಾಯಕ ಬೈಜಯಂತ್ ಪಂಡ ಸುಷ್ಮಾರನ್ನು ಶ್ಲಾಘಿಸಿದರು. ಪ್ರಶ್ನೆಗಳನ್ನು ಇಂಗ್ಲಿಷ್‌ನಲ್ಲಿ ಕೇಳಲಾಗಿದ್ದರೂ, ಹಿಂದಿಯಲ್ಲಿ ಉತ್ತರಿಸಿದ ಅವರಿಗೆ ಆರ್‌ಜೆಡಿ ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಶಹಭಾಸ್‌ಗಿರಿ ನೀಡಿದರು.
ಪ್ರಶ್ನೆಗಳನ್ನು ಇಂಗ್ಲಿಷ್‌ನಲ್ಲಿ ಕೇಳಿದ್ದರೂ, ಹಿಂದಿಯಲ್ಲಿ ಉತ್ತರಿಸಿದುದಕ್ಕಾಗಿ ತಾನು ಸುಷ್ಮಾ ಜಿಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಸದನದಲ್ಲಿ ಕೆಲವು ಸದಸ್ಯರಿದ್ದಾರೆ. ಅವರಿಗೆ ಹಿಂದಿ ಚೆನ್ನಾಗಿ ಬರುತ್ತಿದ್ದರೂ, ಕೇವಲ ಇಂಗ್ಲಿಷ್‌ನಲ್ಲೇ ಉತ್ತರಿಸುತ್ತಾರೆ ಎಂದವರು ಹೇಳಿದರು.
ಈ ಸಂದರ್ಭದಲ್ಲಿ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್, ‘ಪ್ರಶ್ನೆಗಳೇ ಇಲ್ಲ, ಕೇವಲ ಧನ್ಯವಾದಗಳು ಮಾತ್ರ!’ ಎಂದು ಆಶ್ಚರ್ಯೋದ್ಗಾರ ಮಾಡಿದರು. ತನಗೆ ಧೈರ್ಯ ತುಂಬಿದ ಎಲ್ಲ ಸದಸ್ಯರಿಗೆ ಸುಷ್ಮಾ ಕೃತಜ್ಞತೆ ಸೂಚಿಸಿದರು.
ತನಗೆ ಧನ್ಯವಾದ ಸೂಚಿಸಿದವರಿಗೆಲ್ಲರಿಗೂ ಧನ್ಯವಾದಗಳು ಎಂದವರು ಕೈ ಜೋಡಿಸಿ ಹೇಳಿದರು.





