ಝಿಂಬಾಬ್ವೆಗೆ ಶರಣಾದ ಸ್ಕಾಟ್ಲೆಂಡ್

ವಿಶ್ವಕಪ್ ಪ್ರಥಮ ಸುತ್ತಿನ ಪಂದ್ಯ
ನಾಗ್ಪುರ, ಮಾ.10: ಹಿರಿಯ ಆಟಗಾರ ಶೇನ್ ವಿಲಿಯಮ್ಸ್(53 ರನ್, 36 ಎಸೆತ) ಬಾರಿಸಿದ ಅರ್ಧಶತಕ ಹಾಗೂ ಸ್ಪಿನ್ನರ್ ವೆಲ್ಲಿಂಗ್ಟನ್ ಮಸಕಝ(4-28) ನೇತೃತ್ವದ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಝಿಂಬಾಬ್ವೆ ತಂಡ ಸ್ಕಾಟ್ಲೆಂಡ್ ತಂಡವನ್ನು 11 ರನ್‌ಗಳ ಅಂತರದಿಂದ ಮಣಿಸಿದೆ.
ಗುರುವಾರ ಇಲ್ಲಿನ ವಿಸಿಎ ಜಮ್ತಾ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್‌ನ ಮೊದಲ ಸುತ್ತಿನ ಬಿ ಗುಂಪಿನ ಪಂದ್ಯದಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದ ಝಿಂಬಾಬ್ವೆ ಟೂರ್ನಿಯಲ್ಲಿ ಸತತ ಎರಡನೆ ಜಯ ಸಾಧಿಸಿ ಪ್ರಮುಖ ಸುತ್ತಿಗೇರುವ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.
ಝಿಂಬಾಬ್ವೆ ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಹಾಂಕಾಂಗ್ ತಂಡವನ್ನು 14 ರನ್ ಅಂತರದಿಂದ ಮಣಿಸಿತ್ತು.
ಗೆಲುವಿಗೆ 148 ರನ್ ಗುರಿ ಪಡೆದಿದ್ದ ಸ್ಕಾಟ್ಲೆಂಡ್ 19.4 ಓವರ್‌ಗಳಲ್ಲಿ 136 ರನ್‌ಗೆ ಆಲೌಟಾಯಿತು. ಸ್ಪಿನ್ನರ್ ವೆಲ್ಲಿಂಗ್ಟನ್ ಮಸಕಝ ಸ್ಕಾಟ್ಲೆಂಡ್ ಸೋಲಿಗೆ ಕಾರಣರಾದರು.
ಇದೀಗ ಸತತ ಎರಡನೆ ಸೋಲು ಕಂಡಿರುವ ಸ್ಕಾಟ್ಲೆಂಡ್ ಪ್ರಧಾನ ಸುತ್ತಿಗೇರುವ ಸ್ಪರ್ಧೆಯಿಂದ ಹೊರ ನಡೆದಿದೆ. ಸ್ಕಾಟ್ಲೆಂಡ್ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ 14 ರನ್‌ಗಳಿಂದ ಸೋತಿತ್ತು.
ಟಾಸ್ ಜಯಿಸಿದ ಝಿಂಬಾಬ್ವೆ ತಂಡದ ನಾಯಕ ಹ್ಯಾಮಿಲ್ಟನ್ ಮಸಕಝ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ವಿಲಿಯಮ್ಸ್(53 ರನ್, 36 ಎಸೆತ, 6 ಬೌಂಡರಿ), ಚಿಗುಂಬುರ(20) ಹಾಗೂ ಮುತುಂಬಮಿ(19) ಕೊಡುಗೆಯ ನೆರವಿನಿಂದ ಝಿಂಬಾಬ್ವೆ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು.
ಸ್ಕಾಟ್ಲೆಂಡ್‌ನ ಪರ ಎವನ್ಸ್(2-30), ವಾಟ್(2-21) ಹಾಗೂ ಶರೀಫ್(2-31) ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.
5ನೆ ಓವರ್‌ನಲ್ಲಿ 19 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದ ಝಿಂಬಾಬ್ವೆ ಕಳಪೆ ಆರಂಭ ಪಡೆದಿತ್ತು. ಮುಟುಂಬಮಿ ಅವರೊಂದಿಗೆ 3ನೆ ವಿಕೆಟ್‌ಗೆ 32 ರನ್ ಹಾಗೂ ವಾಲ್ಲರ್(13) ಅವರೊಂದಿಗೆ 5ನೆ ವಿಕೆಟ್‌ಗೆ 38 ರನ್ ಸೇರಿಸಿದ ವಿಲಿಯಮ್ಸನ್ ಝಿಂಬಾಬ್ವೆ 147 ರನ್ ಗಳಿಸಲು ನೆರವಾದರು.
ಗೆಲ್ಲಲು 148 ರನ್ ಗುರಿ ಪಡೆದಿದ್ದ ಸ್ಕಾಟ್ಲೆಂಡ್ 7.5ನೆ ಓವರ್‌ನಲ್ಲಿ 42 ರನ್‌ಗೆ 5 ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ 6ನೆ ವಿಕೆಟ್‌ಗೆ 51 ರನ್ ಸೇರಿಸಿದ ಬೆರಿಂಗ್ಟನ್(36ರನ್) ಹಾಗೂ ನಾಯಕ ಪೀಟರ್ ಮಮ್ಸನ್(31 ರನ್) ಸ್ಕಾಟ್ಲೆಂಡ್‌ಗೆ ಗೆಲುವಿನ ಆಸೆ ಮೂಡಿಸಿದ್ದರು.
ಸ್ಪಿನ್ನರ್ ಮಸಕಝ ಈ ಜೋಡಿಯನ್ನು ಬೇರ್ಪಡಿಸಿ ಝಿಂಬಾಬ್ವೆಗೆ ಮೇಲುಗೈ ತಂದುಕೊಟ್ಟರು. ಈ ಇಬ್ಬರು ಬೇರ್ಪಟ್ಟ ನಂತರ ಕುಸಿತದ ಹಾದಿ ಹಿಡಿದ ಸ್ಕಾಟ್ಲೆಂಡ್ 19.4 ಓವರ್‌ಗಳಲ್ಲಿ 136 ರನ್‌ಗೆ ಆಲೌಟಾಯಿತು.
ಸಂಕ್ಷಿಪ್ತ ಸ್ಕೋರ್
ಝಿಂಬಾಬ್ವೆ 20 ಓವರ್‌ಗಳಲ್ಲಿ 147/7
(ಎಸ್. ವಿಲಿಯಮ್ಸ್ 53, ಚಿಗುಂಬುರ 20, ಮುಟುಂಬಮಿ 19, ಎವನ್ಸ್ 2-30, ವಾಟ್ 2-21, ಶರೀಫ್ 2-31)
ಸ್ಕಾಟ್ಲೆಂಡ್: 19.4 ಓವರ್‌ಗಳಲ್ಲಿ 136 ರನ್‌ಗೆ ಆಲೌಟ್
(ಬೆರಿಂಗ್ಟನ್ 36, ಮಾಮ್ಸನ್ 31, ಡೇವಿ 24, ಮಸಕಝ 4-28, ಚಟಾರ 2-24, ಟಿರಿಪಾನೊ 2-20)
ಪಂದ್ಯಶ್ರೇಷ್ಠ: ವೆಲ್ಲಿಂಗ್ಟನ್ ಮಸಕಝ.
ಇಂದಿನ ಪಂದ್ಯ
ಒಮನ್-ಹಾಲೆಂಡ್
ಸಮಯ: ಮಧ್ಯಾಹ್ನ 3:00
ಬಾಂಗ್ಲಾದೇಶ-ಐರ್ಲೆಂಡ್
ಸಮಯ: ರಾತ್ರಿ 7:30
ಸ್ಥಳ: ಧರ್ಮಶಾಲಾ







