ಭಾರತ ಭದ್ರತೆಯ ಕುರಿತು ಲಿಖಿತ ಭರವಸೆ ನೀಡಬೇಕು:ಪಾಕ್
ಇಸ್ಲಾಮಾಬಾದ್/ಹೊಸದಿಲ್ಲಿ, ಮಾ.10: ಭಾರತ ಭದ್ರತೆಯ ಕುರಿತು ಲಿಖಿತ ಭರವಸೆ ನೀಡುವ ತನಕ ಪಾಕ್ ಕ್ರಿಕೆಟ್ ತಂಡವನ್ನು ಭಾರತಕ್ಕೆ ಕಳುಹಿಸಿಕೊಡಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಪುನರುಚ್ಚರಿಸಿದೆ. ಈ ಮೂಲಕ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಭಾಗವಹಿಸುವ ಕುರಿತಂತೆ ಇರುವ ಕುತೂಹಲ ಮುಂದುವರಿದಿದೆ.
‘‘ನಾವು ಇದೀಗ ನಮ್ಮ ತಂಡವನ್ನು ಭಾರತಕ್ಕೆ ಕಳುಹಿಸಿಕೊಡುವ ಪರಿಸ್ಥಿತಿಯಲ್ಲಿಲ್ಲ. ನೇರವಾಗಿ ಪಾಕ್‌ಗೆ ಬೆದರಿಕೆಯಿದೆ. ನಮ್ಮ ಆಟಗಾರರು ಆಡುವಾಗ ಯಾವುದೇ ಒತ್ತಡ ಎದುರಿಸದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಭಾರತ ಸರಕಾರದಿಂದ ಲಿಖಿತ ಭರವಸೆ ಸಿಗುವ ತನಕ ನಮ್ಮ ತಂಡ ಭಾರತಕ್ಕೆ ತೆರಳುವುದಿಲ್ಲ’’ ಎಂದು ಪಾಕ್‌ನ ಆಂತರಿಕ ಸಚಿವ ಚೌಧರಿ ನಾಸಿರ್ ಅಲಿ ಖಾನ್ ಸುದ್ದಿಗಾರರಿಗೆ ಗುರುವಾರ ತಿಳಿಸಿದ್ದಾರೆ.
ದಟ್ಟ ಬೆದರಿಕೆಗಳ ನಡುವೆ ಕ್ರಿಕೆಟ್ ಆಡುವುದಾದರೂ ಹೇಗೆ...ಈಡನ್‌ಗಾರ್ಡನ್ಸ್ ಸ್ಟೇಡಿಯಂ 1 ಲಕ್ಷ ಪ್ರೇಕ್ಷಕರ ಸಾಮರ್ಥ್ಯ ಹೊಂದಿದೆ. ಅಲ್ಲಿ ಯಾವುದೇ ದಿಕ್ಕಿನಿಂದಲೂ ಕಲ್ಲುಗಳು ತಂಡದ ಮೇಲೆ ತೂರಿಬರಬಹುದು ಎಂದು ಖಾನ್ ಆತಂಕವ್ಯಕ್ತಪಡಿಸಿದರು.
‘‘ಭಾರತ ಎಲ್ಲ ಪ್ರಮುಖ ಟೂರ್ನಿಗಳಲ್ಲಿ ಅಗತ್ಯವಿರುವ ಭದ್ರತಾವ್ಯವಸ್ಥೆ ಮಾಡುತ್ತಾ ಬಂದಿದೆ. ಇದಕ್ಕೆ ಇತ್ತೀಚೆಗೆ ಅಸ್ಸಾಂನಲ್ಲಿ ನಡೆದ ದಕ್ಷಿಣ ಏಷ್ಯನ್ ಗೇಮ್ಸ್ ಸಾಕ್ಷಿ. ಏಷ್ಯನ್ ಗೇಮ್ಸ್‌ನಲ್ಲಿ ಪಾಕಿಸ್ತಾನ ಸಹಿತ ಎಲ್ಲ ಸ್ಯಾಫ್ ರಾಷ್ಟ್ರಗಳು ಭಾಗವಹಿಸಿದ್ದವು. ಐಸಿಸಿ ವಿಶ್ವಕಪ್ ಎಲ್ಲ ರೀತಿಯಲ್ಲೂ ಯಶಸ್ಸು ಕಾಣುವ ವಿಶ್ವಾಸವಿದೆ’’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಹೊಸದಿಲ್ಲಿಯಲ್ಲಿ ಹೇಳಿದ್ದಾರೆ.







