ಹೊಸ ಆಟೊರಿಕ್ಷಾಗೆ ಬೆಂಕಿ ಎಂಎನ್‌ಎಸ್ ಬೆಂಬಲಿಗರಿಗೆ ರಾಜ್‌ಠಾಕ್ರೆ ಕರೆ!
ಮುಂಬೈ, ಮಾ.10: ಮುಂದಿನ ವರ್ಷದ ನಿರ್ಣಾಯಕ ನಾಗರಿಕ ಚುನಾವಣೆಗಳಿಗೆ ಮುನ್ನ ರೋಗಗ್ರಸ್ತ ಪಕ್ಷವನ್ನು ಪುನರುಜ್ಜೀವಿಸಲು ಹತಾಶ ಪ್ರಯತ್ನ ನಡೆಸುತ್ತಿರುವ ಮಹಾರಾಷ್ಟ್ರ ನವ ನಿರ್ಮಾಣ ಸೇನಾದ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ, ತಾನು ಪ್ರಯತ್ನಿಸಿ-ಪರೀಕ್ಷಿಸಿದ ಹಳೆಯ ತಂತ್ರವೊಂದರ ಬೆನ್ನು ಬಿದ್ದಿದ್ದಾರೆ. ಹಿಂಸಾತ್ಮಾಕ ಚಳವಳಿಗಳನ್ನು ನಡೆಸುವಂತೆ ಅವರು ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.
ಈ ಬಾರಿ, ರಸ್ತೆಯಲ್ಲಿ ಕಣ್ಣಿಗೆ ಬಿದ್ದ ಹೊಸ ಆಟೊರಿಕ್ಷಾಗಳನ್ನು ಸುಡುವಂತೆ ರಾಜ್ ಕರೆ ನೀಡಿದ್ದಾರೆ. ಹೆಚ್ಚಿನ ಹೊಸ ಆಟೊರಿಕ್ಷಾಗಳ ಪರವಾನಿಗೆಗಳನ್ನು ‘ಹೊರಗಿನವರಿಗೆ’ ನೀಡಲಾಗಿದೆ ಹಾಗೂ ಸರಕಾರದ ನಿರ್ಧಾರವು ಆಟೊರಿಕ್ಷಾ ಉತ್ಪಾದಕರಿಗೆ ಲಾಭ ಒದಗಿಸುವ ಗುರಿ ಹೊಂದಿದೆಯೆಂಬುದು ಇದಕ್ಕೆ ಅವರು ನೀಡುವ ಕಾರಣವಾಗಿದೆ.
ಬೀದಿಗಿಳಿದು ಅಂತಹ ವಾಹನಗಳನ್ನು ಧ್ವಂಸ ಮಾಡುವಂತೆ ಕಾರ್ಯಕರ್ತರಿಗೆ ನಿರ್ದೇಶಿಸಿರುವ ರಾಜ್, ಹೊಸ ಆಟೊರಿಕ್ಷಾ ಚಾಲನೆಗೆ ಅಗತ್ಯವಾಗಿರುವ 70 ಸಾವಿರ ಹೊಸ ಪರವಾನಿಗೆಗಳಲ್ಲಿ ಹೆಚ್ಚಿನವನ್ನು, ಹಾಲಿ ನಿಯಮ ಸಡಿಲಗೊಳಿಸಿ ‘ಹೊರಗಿನವರಿಗೆ’ ನೀಡಲಾಗಿದೆ ಎಂದಿದ್ದಾರೆ.
ತನ್ನ ಪಕ್ಷ ಸ್ಥಾಪನೆಯ ದಶಮನೋತ್ಸವದಲ್ಲಿ, ಮಾತನಾಡಿದ ಅವರು, ಕೇವಲ ಆಟೊರಿಕ್ಷಾ ಉತ್ಪಾದಕರಿಗೆ ಲಾಭವಾಗುವಂತೆ, ನಿಯಮಗಳನ್ನು ಉಲ್ಲಂಘಿಸಿ, ಈ ಪರವಾನಿಗೆಗಳನ್ನು ಬಿಜೆಪಿ ನೇತೃತ್ವದ ಸರಕಾರವು ತರಾತುರಿಯಿಂದ ನೀಡುತ್ತಿದೆಯೆಂದು ಆರೋಪಿಸಿದ್ದಾರೆ.





