ವಿಶ್ವಕಪ್: ಅಫ್ಘಾನಿಸ್ತಾನಕ್ಕೆ ಸುಲಭ ಜಯ

ನಾಗ್ಪುರ, ಮಾ.10: ಮುಹಮ್ಮದ್ ನಬಿ ಅಮೋಘ ಬೌಲಿಂಗ್(4-20) ಹಾಗೂ ವಿಕೆಟ್‌ಕೀಪರ್-ದಾಂಡಿಗ ಮುಹಮ್ಮದ್ ಶಹಝಾದ್(41) ಜವಾಬ್ದಾರಿಯುತ ಬ್ಯಾಟಿಂಗ್‌ನ ನೆರವಿನಿಂದ ಅಫ್ಘಾನಿಸ್ತಾನ ತಂಡ ಹಾಂಕಾಂಗ್ ತಂಡವನ್ನು 6 ವಿಕೆಟ್‌ಗಳ ಅಂತರದಿಂದ ಮಣಿಸಿತು.
ಗುರುವಾರ ನಡೆದ ವಿಶ್ವಕಪ್ ಮೊದಲ ಸುತ್ತಿನ ‘ಬಿ’ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಹಾಂಕಾಂಗ್ ತಂಡ ನಬಿ ದಾಳಿಗೆ ತತ್ತರಿಸಿ 6 ವಿಕೆಟ್‌ಗಳ ನಷ್ಟಕ್ಕೆ ಕೇವಲ 116 ರನ್ ಗಳಿಸಿತು.
ಅಂಶುಮಾನ್ ರಾತ್(ಔಟಾಗದೆ 28) ಹಾಗೂ ಹಿರಿಯ ಆಟಗಾರ ಕ್ಯಾಂಪ್‌ಬೆಲ್(27) ಎರಡಂಕೆಯ ಸ್ಕೋರ್ ದಾಖಲಿಸಿದರು.
ಗೆಲ್ಲಲು ಸುಲಭ ಸವಾಲು ಪಡೆದ ಅಫ್ಘಾನ್ ತಂಡ 18 ಓವರ್‌ಗಳಲಿ 4 ವಿಕೆಟ್‌ಗಳ ನಷ್ಟಕ್ಕೆ 119 ರನ್ ಗಳಿಸಿತು. ಶಹಝಾದ್(41ರನ್, 40 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ನೂರ್ ಅಲಿ ಝದ್ರಾನ್(35 ರನ್, 37 ಎಸೆತ, 2 ಬೌಂಡರಿ) ಮೊದಲ ವಿಕೆಟ್‌ಗೆ 70 ರನ್ ಸೇರಿಸಿ ಉತ್ತಮ ಆರಂಭ ನೀಡಿದರು.
ನಬಿ ಹಾಗೂ ನಜಿಬುಲ್ಲಾ ಝದ್ರಾನ್ ತಲಾ 17 ರನ್ ಗಳಿಸಿದರು. ಆಲ್‌ರೌಂಡ್ ಪ್ರದರ್ಶನ ನೀಡಿದ ನಬಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.





