ವಿವಾದ ಜೈಲಿಗೆ ಹೋಗಲು ರೆಡಿ ದಂಡ ಪಾವತಿಸಲ್ಲ: ರವಿಶಂಕರ್
ವಿಶ್ವ ಸಂಸ್ಕೃತಿ ಉತ್ಸವ

ಹೊಸದಿಲ್ಲಿ, ಮಾ.10: ತಾನೇನೂ ತಪ್ಪು ಮಾಡಿಲ್ಲ. ತಾನು ಕಾರಾಗೃಹಕ್ಕೆ ಹೋಗುವೆನೆಯೇ ವಿನಾ ಒಂದು ಪೈಸೆ ದಂಡ ಕಟ್ಟುವುದಿಲ್ಲ ಎಂದು ವಿಶ್ವಾದ್ಯಂತ ಅನುಯಾಯಿಗಳನ್ನು ಹೊಂದಿರುವ ಆಧ್ಯಾತ್ಮಿಕ ಗುರು ರವಿಶಂಕರ್ ಇಂದು ಎನ್‌ಡಿಟಿವಿಗೆ ತಿಳಿಸಿದ್ದಾರೆ.
59ರ ಹರೆಯದ ಅವರು, ಪರಿಸರ ಕಳವಳದ ನಡುವೆ ದಿಲ್ಲಿಯ ಯಮುನಾ ತೀರದಲ್ಲಿ ನಾಳೆ ಆರಂಭವಾಗಲಿರುವ ಬೃಹತ್ ವಿಶ್ವ ಸಂಸ್ಕೃತಿ ಉತ್ಸವಕ್ಕೆ ಮುನ್ನ ರೂ. 5 ಕೋಟಿ ದಂಡವನ್ನು ಠೇವಣಿಯಿರಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ನೀಡಿರುವ ಆದೇಶದ ಕುರಿತು ಪ್ರತಿಕ್ರಿಯಿಸುತ್ತಿದ್ದರು.
ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನದ ಮುಖ್ಯಸ್ಥ ರವಿಶಂಕರ್, ಮೂರು ದಿನಗಳ ಈ ಕಾರ್ಯಕ್ರಮವನ್ನು ‘ವಿಶ್ವ ಸಂಸ್ಕೃತಿ ಉತ್ಸವ’ ಎಂದು ಘೋಷಿಸಿದ್ದಾರೆ.
7 ಎಕರೆ ವಿಸ್ತಾರದ ವೇದಿಕೆ, ನದಿಯ ಮೇಲಿನ ತಾತ್ಕಾಲಿಕ ತೇಲು ಸೇತುವೆಗಳು ಹಾಗೂ ಲಕ್ಷಾಂತರ ಜನರ ಸೇರುವಿಕೆಯಿಂದ ಪ್ರದೇಶದ ಸೂಕ್ಷ್ಮ ಜೈವಿಕ ವ್ಯವಸ್ಥೆಗೆ ಹಾನಿಯಾಗಬಹುದೆಂದು ಪರಿಸರವಾದಿಗಳು ನ್ಯಾಯಾಧಿಕರಣದ ಮುಂದೆ ಆರೋಪಿಸಿದ್ದರು. ಆದರೆ, ರವಿಶಂಕರ್ ಇದನ್ನು ನಿರಾಕರಿಸಿದ್ದಾರೆ.
ಸಮಾರಂಭದ ಬಳಿಕ ತನ್ನ ಸ್ವಯಂ ಸೇವಕರು ನೆರೆ ಬಯಲಿನಲ್ಲಿ ಬಯೋ ಡೈವರ್ಸಿಟಿ ಪಾರ್ಕ್ ಒಂದನ್ನು ನಿರ್ಮಿಸಬಹುದು. ಅದನ್ನು ತಾವೇ ಮಾಡಬಯಸಿದ್ದೇವೆ ಹೊರತು ಅದು ನ್ಯಾಯಾಲಯದ ತೀರ್ಪಿನ ಭಾಗವಾಗಿಲ್ಲ ಎಂದಿದ್ದಾರೆ.
ತಾನು ಆದೇಶಿಸಿರುವ ರೂ. 5 ಕೋಟಿ ದಂಡದ ಹಿಂದೆಯೇ ತನ್ನ ತಜ್ಞರು ಸಿದ್ಧಪಡಿಸಿರುವ ಇನ್ನೂ ದೊಡ್ಡ ಬಿಲ್ ಖಂಡಿತ ಬರುತ್ತದೆಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಎಚ್ಚರಿಸಿದೆ.
ಕಾರ್ಯಕ್ರಮ ಸನಿಹದಲ್ಲಿರುವಾಗ ತಮಗೆ ಅಲ್ಲಿಂದ ಹೊರ ನಡೆಯಲು ಹೇಳುವುದು ನ್ಯಾಯೋಚಿತವಲ್ಲ. ಸಮಾರಂಭಕ್ಕಾಗಿ ಸೇನೆಯು ತೇಲು ಸೇತುವೆಗಳನ್ನು ನಿರ್ಮಿಸಿರುವುದು ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ತನಗೆ ಸಂಬಂಧವಿದೆಯೆಂಬ ಭಾವನೆಯ ಸೂಚನೆಯಲ್ಲ. ಲಕ್ಷಾಂತರ ಜನರು ಆಗಮಿಸುತ್ತಿರುವಾಗ ಇದನ್ನು ಖಾಸಗಿ ಕಾರ್ಯಕ್ರಮವೆಂದು ಪರಿಗಣಿಸಲು ಹೇಗೆ ಸಾಧ್ಯ? ಇದು ಕುಂಭಮೇಳವಾಗಿರುತ್ತಿದ್ದರೆ, ಸಹಾಯಕ್ಕೆ ಸೇನೆಯನ್ನು ಉಪಯೋಗಿಸುತ್ತಿರಲಿಲ್ಲವೇ? ಎಂದು ರವಿಶಂಕರ್ ಪ್ರಶ್ನಿಸಿದ್ದಾರೆ.







