ರಿಯಲ್ ಎಸ್ಟೇಟ್ ಮಸೂದೆ ರಾಜ್ಯಸಭೆಯಲ್ಲಿ ಪಾಸ್

ಹೊಸದಿಲ್ಲಿ, ಮಾ.10: ಬಹು ನಿರೀಕ್ಷಿತ ರಿಯಲ್ ಎಸ್ಟೇಟ್(ನಿಯಂತ್ರಣ ಮತ್ತು ಅಭಿವೃದ್ಧಿ) ಮಸೂದೆ-2016 ಗುರುವಾರ ರಾಜ್ಯ ಸಭೆಯಲ್ಲಿ ಅಂಗೀಕಾರಗೊಂಡಿದೆ. ಅದು ಪೂರ್ವಾನ್ವಯವಾಗಿರುತ್ತದೆ.
ಮನೆ ಖರೀದಿಸುವ ಅಪಾರ ಜನರಿಗೆ ಈ ಮಸೂದೆಯು ಪರಿಹಾರವಾಗಿದ್ದು, ಅವರ ಹಿತಾಸಕ್ತಿಯನ್ನು ರಕ್ಷಿಸಲಿದೆ.
ಆದಾಗ್ಯೂ, ನಗರ ಸಂಸ್ಥೆಗಳು ಹಾಗೂ ಸರಕಾರಿ ಯೋಜನೆಗಳಿಗೆ ಈ ಮಸೂದೆ ಅನ್ವಯವಾಗುವುದಿಲ್ಲ.
ಅಪಾರ್ಟ್‌ಮೆಂಟ್ ಒಂದರ ಕಾರ್ಪೆಟ್ ಏರಿಯಾ ಶುದ್ಧ ಉಪಯೋಗವಾಗುವ ನೆಲದ ವಿಸ್ತೀರ್ಣವಾಗಿರುತ್ತದೆ ಎನ್ನುವುದನ್ನು ಸ್ಪಷ್ಟಪಡಿಸಿರುವ ಮಸೂದೆಯು, ಕಾಯ್ದೆಬದ್ಧ ಅನುಮತಿ ದೊರಕಿದ ಬಳಿಕವೇ ನಿರ್ಮಾಣ ಆರಂಭಿಸಬೇಕೆಂದು ಹೇಳಿರುವುದು ಜನರಿಗೆ ಒಂದು ಬೆಳ್ಳಿ ಚುಕ್ಕೆಯಾಗಿದೆ.ಇದಲ್ಲದೆ, ದಾರಿ ತಪ್ಪಿಸುವ ಜಾಹೀರಾತುಗಳನ್ನು ಶಿಕ್ಷಾರ್ಹ ಅಪರಾಧವಾಗಿಸಲಾಗುವುದು. ಮೊದಲ ಬಾರಿಯ ತಪ್ಪಿಗೆ ಯೋಜನೆಯ ಶೇ.10ರಷ್ಟು ದಂಡ ವಿಧಿಸಲಾಗುವುದು. ಇದೇ ತಪ್ಪನ್ನು ಮತ್ತೆ ಮತ್ತೆ ಮಾಡಿದರೆ ಸೆರೆಮನೆ ಸೇರಬೇಕಾಗಬಹುದೆಂದು ಅಧಿವೇಶನದಲ್ಲಿ ತಿಳಿಸಲಾಗಿದೆ. ನಡೆಯುತ್ತಿರುವ ಎಲ್ಲ ಯೋಜನೆಗಳಿಗೂ ಮಸೂದೆ ಅನ್ವಯವಾಗುತ್ತದೆ. ಯೋಜನೆಯ ಯಾವುದೇ ಬದಲಾವಣೆಗೆ ಮೂರನೆ ಎರಡರಷ್ಟು ಮನೆ ಖರೀದಿದಾರರು ಸಮ್ಮತಿ ನೀಡಬೇಕಾಗುತ್ತದೆ.
ಈ ಮಸೂದೆಯನ್ನು ಯುಪಿಎ ಸರಕಾರವು 2013ರಲ್ಲಿ ರಾಜ್ಯಸಭೆಯಲ್ಲಿ ಮಂಡಿಸಿತ್ತು.
ರಿಯಲ್ ಎಸ್ಟೇಟ್ ವಲಯದಲ್ಲಿ ಕಪ್ಪು ಹಣವನ್ನು ನಿಯಂತ್ರಿಸುವ ಹಾಗೂ ಮನೆ ಖರೀದಿದಾರರ ದೂರು ಪರಿಹಾರ ವ್ಯವಸ್ಥೆಯೊಂದಕ್ಕೆ ಅವಕಾಶ ಕಲ್ಪಿಸುವ ಈ ಮಸೂದೆಯ ಮಂಜೂರಾತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ತೀವ್ರ ಆಸಕ್ತಿ ತಳೆದಿದ್ದರು.
ಮಧ್ಯಮ ದರ್ಜೆಯವರ ಮೇಲೆ ಕಣ್ಣಿರಿಸಿದ ಸರಕಾರ, ರಿಯಲ್ ಎಸ್ಟೇಟ್ ವಲಯವನ್ನು, ಹಣದ ವ್ಯವಹಾರದಲ್ಲಿ ಪಾರದರ್ಶಕತೆ ತಂದು ‘ನಿಜವಾದ ಖರೀದಿದಾರರಿಗೆ’ ನೆರವಾಗುವಂತೆ ‘ಗ್ರಾಹಕ ಮಿತ್ರ’ ನನ್ನಾಗಿಸಲು ಇಚ್ಛಿಸಿದೆ.







