ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ

ಬೆಂಗಳೂರು, ಮಾ.10: ರಾಜ್ಯದೆಲ್ಲೆಡೆ ಶುಕ್ರವಾರ ದಿಂದ ದ್ವಿತೀಯ ಪಿಯುಸಿ ಪರೀಕ್ಷೆಯು ನಡೆಯಲಿದ್ದು, ಈ ಬಾರಿ 6,40,033 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಪಲ್ಲವಿ ಅಕೂರಾತಿ ತಿಳಿಸಿದ್ದಾರೆ.
ಗುರುವಾರ ನಗರದ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದಲ್ಲಿ ಒಟ್ಟು 1,032 ಕೇಂದ್ರಗಳಲ್ಲಿ ಪರೀಕ್ಷೆಗೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದು, 3,29,187 ಬಾಲಕರು ಹಾಗೂ 3,10,846 ಬಾಲಕಿಯರು ಪರೀಕ್ಷೆಯನ್ನು ಎದುರಿಸಲಿದ್ದಾರೆ. ಹಾಗೂ ಹಾಜರಾತಿ ಇಲ್ಲದ 2,536 ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಿಸಿ ಕ್ಯಾಮೆರಾ ಕಣ್ಗಾವಲು: 1,032 ಪರೀಕ್ಷಾ ಕೇಂದ್ರಗಳಲ್ಲಿ 826 ಸೂಕ್ಷ್ಮ ಹಾಗೂ 155 ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳೆಂದು ಗುರುತಿಸಲಾಗಿದೆ.
ಈ ಪರೀಕ್ಷಾ ಕೇಂದ್ರಗಳಲ್ಲಿ ವ್ಯವಸ್ಥಿತವಾಗಿ ಸಿಸಿ ಕ್ಯಾಮೆರಾಗಳನ್ನು ಅವಳವಡಿಸಲಾಗಿದ್ದು, ಪರೀಕ್ಷಾ ಕೊಠಡಿಯ ಒಳಗೆ ಹಾಗೂ ಹೊರಗಿನ ಚಲನವಲನಗಳ ಬಗ್ಗೆ ನಿಗಾ ಇಡಲಾಗುವುದು ಎಂದು ನಿರ್ದೇಶಕಿ ಪಲ್ಲವಿ ಅಕೂರಾತಿ ತಿಳಿಸಿದ್ದಾರೆ.
1,032 ಅಧೀಕ್ಷಕರು: ದ್ವಿತೀಯ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಲು ಇಲಾಖೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದು, ಇದಕ್ಕಾಗಿ 1,032 ಅಧೀಕ್ಷಕರು, 1,032 ಸಹ ಅಧೀಕ್ಷಕರನ್ನು ನೇಮಿಸಲಾಗಿದೆ. ಕೊಠಡಿಯ ಮೇಲ್ವಿಚಾರಕರನ್ನು ಮುಖ್ಯ ಅಧೀಕ್ಷಕರು ನೇಮಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಸೂಕ್ತ ಪೊಲೀಸ್ ಬಂದೂಬಸ್ತ್: ಪ್ರತಿ ಪರೀಕ್ಷಾ ಕೇಂದ್ರಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಜೊತೆಗೆ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಿತ ಪ್ರದೇಶವೆಂದು ಜಿಲ್ಲಾಧಿಕಾರಿಗಳು ಘೋಷಿಸಲು ಕ್ರಮ ಕೈಗೊಳ್ಳಲಾಗಿದೆ. ಇದರ ಜೊತೆಗೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿರುವ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಹಾಯವಾಣಿ: ದ್ವಿತೀಯ ಪರೀಕ್ಷೆಗೆ ಸಂಬಂಧಿಸಿದಂತೆ ಇರುವ ಎಲ್ಲ ಗೊಂದಲಗಳನ್ನು ನಿವಾರಿಸಲಾಗಿದೆ. ಆದರೂ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಗೊಂದಲ ಇಲ್ಲವೆ ಸಮಸ್ಯೆಗಳು ಕಂಡುಬಂದರೆ ಇಲಾಖೆ ಕೇಂದ್ರ ಕಚೇರಿ ದೂ.080-23083800/23361858 ಹಾಗೂ www.pue.kar.in ಇಲ್ಲಿಗೆ ಸಂಪರ್ಕಿಸಬೇಕೆಂದು ಇಲಾಖೆಯ ನಿರ್ದೇಶಕಿ ಪಲ್ಲವಿ ಅಕೂರಾತಿ ತಿಳಿಸಿದ್ದಾರೆ.







