ಪಾನಮತ್ತನಾಗಿ ಬಂದ ವರನಿಗೆ ವಧು ಕಪಾಲಮೋಕ್ಷ ಮಾಡಿದಾಗ ಇತರರು ಚಪ್ಪಲಿಹಾರ ಹಾಕಿದರು!

ಪಾಟ್ನಾ, ಮಾರ್ಚ್.11: ವಿಶ್ವ ಮಹಿಳಾ ದಿನದಲ್ಲಿ ಬಿಹಾರದಲ್ಲಿ ನಡೆದ ವಿವಾಹವೊಂದರ ಕತೆ ಜಾಗತಿಕ ಮಾಧ್ಯಮಗಳಲ್ಲಿಯೂ ವರದಿಯಾಗಿದ್ದವು. ಮದುವೆ ದಿನದಂದು ಮೂಗಿನವರೆಗೆ ಪಾನಮತ್ತನಾಗಿ ಬಂದಿದ್ದ ವರನೊಂದಿಗೆ ವಧು ವರ್ತಿಸಿದ ರೀತಿ ಮತ್ತು ವರದಕ್ಷಿಣೆಯನ್ನು ವಾಪಸು ಪಡೆದಿರುವುದು ಜಾಗತಿಕ ಗಮನ ಸೆಳೆದಿತ್ತು.
ಮದುವೆಗೆ ಸ್ವಲ್ಪ ಮೊದಲು ಗೆಳೆಯರೊಂದಿಗೆ ಶರಾಬು ಕುಡಿದು ಬಂದ ವರನನ್ನು ಏನು ಮಾಡಬೇಕೆಂದೇ ಗೊತ್ತಾಗದ ಸ್ಥಿತಿ ನಿರ್ಮಾಣವಾಗಿತ್ತು. ಆತ ಕುಡಿದು ಬಂದದ್ದಲ್ಲದೆ ಅಲ್ಲಿದ್ದವರಲ್ಲಿ ಪುನಃ ಬಿಯರ್‌ನ್ನು ಕೊಡಿ ಎಂದು ಕೇಳಿ ಗಲಾಟೆಗೆ ತೊಡಗಿದ್ದ. ಆದರೆ ಯಾರೂ ಅವನಿಗೆ ಬಿಯರ್ ನೀಡಲಿಲ್ಲ. ಇದನ್ನೆಲ್ಲವನ್ನೂ ನೋಡಿ ಸಹನೆಗೆಟ್ಟ ವಧು ಅವನ ಕಪಾಲಕ್ಕೆ ಹೊಡೆದದ್ದಲ್ಲದೆ. ಮುಖಕ್ಕೆ ಮಸಿ ಹಾಕಿ ಬಿಟ್ಟಳು. ಅಷ್ಟರಲ್ಲಿ ವಧುವಿನ ಮನೆಯವರೂ ಸೇರಿದರು. ವರನಿಗೆ ಚಪ್ಪಲಿಯ ಹಾರವನ್ನು ಹಾಕಿ ಕೋಣೆಯೊಳಗೆ ಕೂಡಿಹಾಕಿದರು. ಆತನೊಂದಿಗೆ ಮದುವೆಯೇ ಬೇಡವೆಂದು ವಧು ಹೇಳಿದಾಗ ಅದಕ್ಕೊಪ್ಪಿದ ಮನೆ ಮಂದಿ ವರದಕ್ಷಿಣೆಯನ್ನು ವಾಪಸು ಕೊಡಿ ಇಲ್ಲದಿದ್ದರೆ ವರನನ್ನು ಕೋಣೆಯಿಂದ ಹೊರಗೆ ಬಿಡುವುದಿಲ್ಲ ಎಂದು ವಧುವಿನ ಕಡೆಯವರು ಹಟ ತೊಟ್ಟರು. ಅನಿವಾರ್ಯವಾಗಿ ವರದಕ್ಷಿಣೆ ಮೊತ್ತವನ್ನು ಒಂದು ಗಂಟೆಯಲ್ಲಿ ಕಲೆಹಾಕಿ ವಧುವಿನ ಕಡೆಯವರಿಗೆ ನೀಡಿದ ಮೇಲೆಯೇ ಪಾನಮತ್ತ ವರನನ್ನು ಬಿಟ್ಟಿದ್ದರು. ಮದುವೆ ನಿಂತು ಹೋಯಿತು. ವಿಶ್ವ ಮಹಿಳಾ ದಿನದಲ್ಲಿ ಸ್ತ್ರೀ ಶಕ್ತಿಯ ಸಾಮರ್ಥ್ಯವನ್ನು ವಿವರಿಸಲಿಕ್ಕಾಗಿ ಜಾಗತಿಕ ಮಾಧ್ಯಮಗಳು ಕೂಡ ಮಧುಬನಿ ಜಿಲ್ಲೆಯ ಪುಟ್ಟ ಗ್ರಾಮದ ಈ ಘಟನೆಯನ್ನು ಸುದ್ದಿ ಮಾಡಿದ್ದವು. ಹೇಗೆ ಜೀವನದಲ್ಲಿ ವಿವಿಧ ಪರಿಸ್ಥಿತಿಯನ್ನು ನಿಭಾಯಿಸಲಾಗುತ್ತಿದೆ ಎಂಬುದನ್ನು ಮಹಿಳೆಯರಿಗೆ ಈ ಘಟನೆಯನ್ನು ಪ್ರಕಟಿಸುವ ಮೂಲಕ ವಿವರಿಸಿವೆ.





