ಇಶ್ರತ್ ಜಹಾನ್ ಎನ್ ಕೌಂಟರ್ ಪ್ರಕರಣ ; ಗುಜರಾತ್ ಪೊಲೀಸರ ವಿರುದ್ಧದ ಕ್ರಿಮಿನಲ್ ಪ್ರಕರಣ ಕೈಬಿಡಲು ಸುಪ್ರೀಂ ನಕಾರ

ಹೊಸದಿಲ್ಲಿ, ಮಾ.11 ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ಗುಜರಾತ್ ಪೊಲೀಸರ ವಿರುದ್ಧ ಅಮಾನತು ಮತ್ತು ಇತರ ಕ್ರಿಮಿನಲ್ ಪ್ರಕರಣವನ್ನು ಕೈ ಬಿಡುವಂತೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ.
ಪಾಕಿಸ್ತಾನ ಮೂಲದ ಅಮೆರಿಕ ಪ್ರಜೆಯಾಗಿರುವ ಹಾಗೂ ಮುಂಬೈ ದಾಳಿಯ ಶಂಕಿತ ಉಗ್ರ ಡೇವಿಡ್ ಕೊಲೆಮನ್ ಹ್ಯಾಡ್ಲಿ ಇತ್ತೀಚೆಗೆ ಅಮೆರಿಕದ ಚಿಕಾಗೋ ನಗರದಿಂದ ವೀಡಿಯೊ ಕಾನ್ಫೆರೆನ್ಸ್ ಮೂಲಕ ವಿಚಾರಣೆ ಮೂಲಕ ನೀಡಿರುವ ಹೇಳಿಕೆಯಲ್ಲಿ ೨೦೦೪ರಲ್ಲಿ ಗುಜರಾತ್ ಪೊಲೀಸರು ನಡೆಸಿದ ನಕಲಿ ಎನ್ಕೌಂಟರ್‌ನಲ್ಲಿ ಬಲಿಯಾದ ಇಸ್ರತ್ ಜಹಾನ್ ಲೆಷ್ಕರ್ ಎ ತೋಯ್ಬಾದೊಂದಿಗೆ ಸಂಪರ್ಕ ಹೊಂದಿದ್ದಳು ಎಂದು ಆರೋಪಿಸಿದ್ದನು.
ಹ್ಯಾಡ್ಲಿ ಹೇಳಿಕೆಯ ಹಿನ್ನೆಲೆಯಲ್ಲಿ ಪೊಲೀಸರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಅರ್ಜಿ ಸಲ್ಲಿಸಲಾಗಿತ್ತು.ಇಂದು ಅರ್ಜಿಯ ವಿಚಾರಣೆ ನಡೆಸಿದ ಜಸ್ಟೀಸ್ ಪಿ.ಸಿ ಘೋಷ್ ಮತ್ತು ಅಮಿತಾವ ರಾಯ್ ಅವರನ್ನೊಳಗೊಂಡ ನ್ಯಾಯಪೀಠ ಪೊಲೀಸರ ವಿರುದ್ಧದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪುರಸ್ಕರಿಸಲು ನಿರಾಕರಿಸಿತು.





