ವಿಶ್ವ ಸಾಂಸ್ಕೃತಿಕ ಉತ್ಸವದಿಂದ ಹಿಂದೆ ಸರಿದ ವಿಶ್ವ ನಾಯಕರು

ನವದೆಹಲಿ :ಶ್ರೀ ಶ್ರೀ ರವಿಶಂಕರ್ ಅವರ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ಆಯೋಜಿಸುತ್ತಿರುವ ವಿವಾದಾಸ್ಪದ ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸುವ ಗಣ್ಯರಲ್ಲಿ ನಾಲ್ಕು ಮಂದಿ ಕೊನೆಯ ಕ್ಷಣದಲ್ಲಿ ಕಾರ್ಯಕ್ರಮದಿಂದ ಹಿಂದೆ ಸರಿದಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ನಿರ್ಧರಿಸಿದವರಲ್ಲಿ ನೇಪಾಳದ ಅಧ್ಯಕ್ಷೆ ಬಿಧ್ಯಾ ದೇವಿ ಭಂಡಾರಿ,ಶ್ರೀಲಂಕಾ ಹಾಗೂ ಜಿಂಬಾಬ್ವೆ ಅಧ್ಯಕ್ಷರುಗಳಾದ ಮೈತ್ರಪಾಲ ಸಿರಿಸೇನಾ ಹಾಗೂ ರಾಬರ್ಟ್ ಮುಗಾಬೆ ಹಾಗೂ ಅಫ್ಗಾನಿಸ್ತಾನದ ಮುಖ್ಯ ಕಾರ್ಯವಿರ್ವಹಣಾಧಿಕಾರಿ ಅಬ್ದುಲ್ಲಾ ಅಬ್ದುಲ್ಲಾ ಸೇರಿದ್ದಾರೆ. ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಈಗಾಗಲೇ ಈ ಕಾರ್ಯಕ್ರಮದಲ್ಲಿ ತಮ್ಮ ಭಾಗವಹಿಸುವಿಕೆಯನ್ನು ರದ್ದುಪಡಿಸಿದ್ದಾರೆ.
ಭಾರತ ಸರಕಾರವು ಈ ಕಾರ್ಯಕ್ರಮಕ್ಕೆ ತನ್ನ ರಾಯಭಾರ ಕಚೇರಿಗಳ ಮುಖಾಂತರ ಸಾಕಷ್ಟು ಪ್ರಚಾರ ನೀಡುತತಿದ್ದರೂ ಈಗಗಲೇ ಸಂಯುಕ್ತ ಅರಬ್ ಸಂಸ್ಥಾನದ ಹಗೂ ಮಂಗೋಲಿಯಾದ ಸಂಸ್ಕೃತಿ ಸಚಿವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲವೆಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.
ನೇಪಾಳ ತನ್ನ ಉಪ ಪ್ರಧಾನಿಯನ್ನು ಕಾಂರ್ಕ್ರಮಕ್ಕೆ ಕಳುಹಿಸುವುದಾಗಿ ತಿಳಿದು ಬಂದಿದೆ. ರಾಬರ್ಟ್ ಮುಗಾಬೆಯವರು ಈಗಾಗಲೇ ಭಾರತಕ್ಕೆ ಬಂದಿದ್ದರೂ ಮತ್ತೆ ಸ್ವದೇಶಕ್ಕೆ ಮರಳಿದ್ದಾರೆ. ಸುರಕ್ಷಾ ವಿಚಾರಗಳಲ್ಲಿರುವ ಕೆಲವೊಂದು ಲೋಪದೋಷಗಳು ಹಾಗೂ ಪ್ರೊಟೋಕಾಲ್ ಸಂಬಂಧಿತ ವಿಷಯಗಳಿಂದ ಪ್ರಣಬ್ ಭಾಗವಹಿಸದೇ ಇರುವ ಸಮಾರಂಭದಲ್ಲಿ ಭಾಗವಹಿಸುವುದು ಸರಿಯಲ್ಲವೆಂದು ಅವರು ತಿಳಿದುಕೊಂಡಿದ್ದಾರೆನ್ನಲಾಗಿದೆ.
ಯಮುನಾ ನದಿ ತೀರದಲ್ಲಿ ಕಾರ್ಯಕ್ರಮ ಆಯೋಜನೆ ಅಲ್ಲಿನ ಸೂಕ್ಷ್ಮ ಪರಿಸರಕ್ಕೆ ಹಾನಿಯುಂಟು ಮಾಡುವುದೆಂದು ಈಗಾಗಲೇ ಸಾಕಷ್ಟು ಅಪಸ್ವರ ಎದ್ದಿರುವುದನ್ನು ಇಲ್ಲಿ ಸ್ಮರಿಸಬಹುದು.







