ಮಂಗಳೂರು : ನಗರದ ಫಾದರ್ ಮುಲ್ಲರ್ ಚಾರಿಟೆಬಲ್ ಸಂಸ್ಥೆಯ ಪದವಿ ಪ್ರದಾನ ಸಮಾರಂಭ ಹಗೂ ಸಂಸ್ಥಾಪನಾ ದಿನ
ಮಂಗಳೂರು, ಮಾ.11: ನಗರದ ಫಾದರ್ ಮುಲ್ಲರ್ ಚಾರಿಟೆಬಲ್ ಸಂಸ್ಥೆಯ ಪದವಿ ಪ್ರದಾನ ಸಮಾರಂಭ ಹಗೂ ಸಂಸ್ಥಾಪನಾ ದಿನ ಮಾ. 13ರಂದು ಸಂಜೆ 5 ಗಂಟೆಗೆ ಫದಾರ್ ಮುಲ್ಲರ್ ಕ್ರಿಡಾಂಗಣದಲ್ಲಿ ನಡೆಯಲಿದೆ. ಇದೇ ವೇಳೆ ಫಾದರ್ ಮುಲ್ಲರ್ ಸಿಮ್ಯುಲೇಶನ್ ಮತ್ತು ಕೌಶಲ್ಯ ಕೇಂದ್ರದ ಉದ್ಘಾಟನೆಯೂ ಅಂದು ಬೆಳಗ್ಗೆ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಆಡಳಿತಾಧಿಕಾರಿ ಫಾ. ರಿಚ್ಚರ್ಡ್ ಕುವೆಲ್ಲೋ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು. ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಹಾಗೂ ಸಂಬಂಧಿತ ಆರೋಗ್ಯ ವಿಜ್ಞಾನ, ಹೋಮಿಯೋಪಥಿ ಮೆಡಿಕಲ್ ಕಾಲೇಜು, ನರ್ಸಿಂಗ್ ಸ್ಕೂಲ್ ಮತ್ತು ಕಾಲೇಜು, ವಾಕ್ ಮತ್ತು ಶ್ರವಣ ಕಾಲೇಜುಗಳ 579ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ. ಇದೇ ದಿನ ಸಂಸ್ಥೆಯ ಸಂಸ್ಥಾಪಕ ರೆ. ಫಾದರ್ ಅಗಸ್ಟಸ್ ಮುಲ್ಲರ್ ಎಸ್.ಜೆ.ಯವರ 175ನೆ ಹುಟ್ಟು ಹಬ್ಬವನ್ನೂ ಆಚರಿಸಲಾಗುವುದು ಎಂದು ಅವರು ಹೇಳಿದರು. ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ಜಂಟಿ ಕಾರ್ಯದರ್ಶಿ ಡಾ. ಮಂಜು ಸಿಂಗ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಕೆ. ಬೈರಪ್ಪ ವಿಶೇಷ ಅತಿಥಿಯಾಗಿ ಭಾಗವಹಿಸುವರು. ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಹಾಗೂ ಫಾದರ್ ಮುಲ್ಲರ್ ಚಾರಿಟೆಬಲ್ ಸಂಸ್ಥೆಗಳ ಅಧ್ಯಕ್ಷ ಅತಿ ವಂ. ಫಾ. ಅಲೋಶಿಯಸ್ ಪಾವ್ಲ್ ಡಿಸೋಜಾ ಅಧ್ಯಕ್ಷತೆ ವಹಿಸಲಿರುವರು. ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಸಿಬ್ಬಂದಿ, ಪೋಷಕರು, ಹಳೆ ವಿದ್ಯಾರ್ಥಿಗಳು ಸೇರಿದಂತೆ ಐದ ಸಾವಿರಕ್ಕೂ ಅಧಿಕ ಮಂದಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಅಂದು ಮುಂಜಾನೆ 9.30ಕ್ಕೆ ಫಾದರ್ ಮುಲ್ಲರ್ ಸಿಮ್ಯುಲೇಶನ್ ಹಾಗೂ ಕೌಶಲ್ಯ ಕೇಂದ್ರವನ್ನು ರಾಜ್ಯದ ಆರೋಗ್ಯ ಸಚಿವ ಯು.ಟಿ. ಖಾದರ್ ಉದ್ಘಾಟಿಸುವರು. ಸಿಮ್ಯುಲೇಟರ್ ಶಿಕ್ಷಣ ತಜ್ಞ ಡಾ. ದಿನಕರ್ ಪೈ ವಿಶೇಷ ಅತಿಥಿಯಾಗಿ ಭಾಗವಹಿಸುವರು. ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅತಿ ವಂ. ಡಾ. ಫ್ರಾನ್ಸಿಸ್ ಸೆರಾವೊ ಆಶೀರ್ವಚನ ನೀಡಲಿದ್ದಾರೆ. ಸಿಮ್ಯುಲೇಶನ್ ಮತ್ತು ಕೌಶಲ್ಯ ಕೇಂದ್ರ ತಂತ್ರಜ್ಞಾನ ಆಧಾರಿತ ಬಹುವೃತ್ತೀಯ ತರಬೇತಿ ವ್ಯವಸ್ಥೆಯಾಗಿದೆ ಎಂದು ಅವರು ಹೇಳಿದರು. ಗೋಷ್ಠಿಯಲ್ಲಿ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಡಳಿತಾಧಿಕಾರಿ ವಂ. ಫಾ. ರುಡಾಲ್ಫ್ ರವಿ ಡೇಸಾ, ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯ ಕಾಲೇಜಿನ ಪ್ರಾಂಶುಪಾಲ ಡಾ. ಶಿವಪ್ರಸಾದ್ ಕೆ. ಮೊದಲಾದವರು ಉಪಸ್ಥಿತರಿದ್ದರು.





