ಮೂಡುಬಿದಿರೆ : ತೊಟ್ಟಿಯಲ್ಲಿ ತುಂಬಿರುವ ಕಸವನ್ನು ವಿಲೇವಾರಿ ಮಾಡಿ, ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿಯ ಆಗ್ರಹ

ಮೂಡುಬಿದಿರೆ : ನೆಲಿಕಾರು ಗ್ರಾ.ಪಂ ವ್ಯಾಪ್ತಿಯ ಶಾಲೆಯ ಬಳಿ ಇಟ್ಟಿರುವ ಕಸದ ತೊಟ್ಟಿಯಲ್ಲಿ ಕಸವು ತುಂಬಿಕೊಂಡು ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಆದ್ದರಿಂದ ಗ್ರಾ. ಪಂಚಾಯತ್ ಕಸವನ್ನು ವಿಲೇವಾರಿ ಮಾಡಲು ಕ್ರಮಕ್ಯಗೊಳ್ಳಬೇಕೆಂದು ವಿದ್ಯಾರ್ಥಿ ಪ್ರವೀಣ್ ಆಗ್ರಹಿಸಿದ್ದಾರೆ. ನೆಲ್ಲಿಕಾರು ಗ್ರಾ.ಪಂ ಸಭಾಭವನದಲ್ಲಿ ವಿದ್ಯಾರ್ಥಿ ನಾಯಕಿ ಶಿಫಾ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಈ ಬಗ್ಗೆ ನೆಲ್ಲಿಕಾರು ಸೈಂಟ್ ವಿಕ್ಟರ್ ಹಿ.ಪ್ರಾ.ಶಾಲೆಯ ವಿದ್ಯಾರ್ಥಿ ಪಂಚಾಯತ್ ಅಧ್ಯಕ್ಷರ ಗಮನಕ್ಕೆ ತಂದರು. ಗ್ರಾ.ಪಂ ವ್ಯಾಪ್ತಿಯಲ್ಲಿ ಕಸವನ್ನು ಹಾಕಲು ಸೂಕ್ತವಾದ ಜಾಗವಿಲ್ಲದಿರುವುದರಿಂದ ಕಸವನ್ನು ವಿಲೇ ಮಾಡಲು ತೊಂದರೆಯಾಗಿದೆ ಈ ಬಗ್ಗೆ ಪಂಚಾಯತ್‌ನ ಸಭೆಯಲ್ಲಿ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿನೇಶ್ ನಾಯ್ಕಿ ಉತ್ತರಿಸಿದರು.
ನೆಲ್ಲಿಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದ ಮಧ್ಯ ಭಾಗದಲ್ಲಿ ತೆರೆದ ಬಾವಿಯಿದ್ದು ಶಾಲಾ ಮಕ್ಕಳು ಅಪಾಯವನ್ನು ಎದುರಿಸುತ್ತಿದ್ದು, ಈ ಬಾವಿಗೆ ನೆಟ್ ಹಾಕುವಂತೆ ವಿದ್ಯಾರ್ಥಿಗಳು ಪಂಚಾಯತ್ ಗಮನಕ್ಕೆ ತಂದರು. ಬೋರುಗುಡ್ಡೆ ಸ.ಹಿ.ಪ್ರಾ.ಶಾಲೆಯ ಆವರಣಗೋಡೆ ಸರಿ ಇಲ್ಲದಿರುವುದರಿಂದ ಶಾಲೆಯಲ್ಲಿ ಮಾಡಿರುವ ಕೈತೋಟ, ಕೃಷಿ ದನಗಳ ಪಾಲಾಗುತ್ತಿದೆ, ಶಾಲೆಯ ಬಳಿ ಬೀದಿ ನಾಯಿಗಳ ಕಾಟ ಜಾಸ್ತಿಯಾಗುತ್ತಿದೆ, ಪಂಚಾಯತ್ ವ್ಯಾಪ್ತಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಆಟವಾಡಲು ಆಟಿಕೆಗಳನ್ನು ನೀಡುವಂತೆ, ಮಾಂಟ್ರಾಡಿ ಶಾಲೆಯ ನಳ್ಳಿ ನೀರಿನ ವ್ಯವಸ್ಥೆಯನ್ನು ಸರಿಪಡಿಸುವಂತೆ, ಪೆಂಚಾರು ಶಾಲೆಗೆ ಮುಖ್ಯ ಶಿಕ್ಷಕರನ್ನು ಒದಗಿಸುವಂತೆ, ಶಾಲೆಗಳ ಬಳಿಯಲ್ಲಿ ಬ್ಯಾರಿಕೇಡ್ ಅಳವಡಿಸುವಂತೆ ವಿದ್ಯಾರ್ಥಿಗಳು ಪಂಚಾಯತ್‌ನ ಗಮನಕ್ಕೆ ತಂದರು.
ಪೆಂಚಾರು ಅಂಗನವಾಡಿ ಕೇಂದ್ರದ ಶೌಚಾಲಯದ ಮೇಲ್ಚಾವಣಿ ಕುಸಿದು ಬೀಳುವ ಹಂತದಲ್ಲಿದ್ದು ಪುಟಾಣಿ ಮಕ್ಕಳನ್ನು ಒಳಗಡೆ ಕಳುಹಿಸಲು ಹೆದರಿಕೆಯಾಗುತ್ತಿದೆ ಈ ಬಗ್ಗೆ ಇದನ್ನು ಪಂಚಾಯತ್ ಸರಿಪಡಿಸಬೇಕೆಂದು ಅಂಗನವಾಡಿ ಕಾರ್ಯಕರ್ತೆ ಸಭೆಯ ಗಮನಕ್ಕೆ ತಂದರು. ಶಾಲೆಗಳಿಗೆ ಅನುದಾನ ನೀಡಲು ಗ್ರಾ.ಪಂಗಳಿಗೆ ಅವಕಾಶವಿಲ್ಲ ಅಲ್ಲದೆ ಅನುದಾನವೂ ಇಲ್ಲ. ಸಣ್ಣ ಪುಟ್ಟ ವ್ಯವಸ್ಥೆಗಳನ್ನು ಸರಿಪಡಿಸಲು ಮಾತ್ರ ಅವಕಾಶವಿದೆ. ಶಾಲೆಗಳಲ್ಲಿರುವ ಸಮಸ್ಯೆಗಳ ಬಗ್ಗೆ ಶಿಕ್ಷಣ ಇಲಾಖೆಗೆ ಪಂಚಾಯತ್ ವತಿಯಿಂದ ಮನವಿ ಮಾಡಲಾಗುವುದು ಎಂದು ಪಂಚಾಯತ್ ಅಧ್ಯಕ್ಷ ಜಯಂತ ಹೆಗ್ಡೆ ತಿಳಿಸಿದರು. ಅಂಗವಾಡಿ ಕೇಂದ್ರಗಳ ಮಕ್ಕಳಿಗೆ ಆಟಿಕೆಗಳನ್ನು ನೀಡಲಾಗುವುದು ಆದರೆ ಶೌಚಾಲಯ ನೀಡಲು ಅವಕಾಶವಿಲ್ಲ, ಬದಲಾಗಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಅವಕಾಶವಿದೆ ಎಂದು ತಿಳಿಸಿದ ಪಿಡಿಓ ದಾನಿಗಳ ಸಹಕಾರವನ್ನು ಪಡೆಯಲು ಪ್ರಯತ್ನಿಸಿ ಎಂದು ಶಿಕ್ಷಕಿಯರಿಗೆ ಸಲಹೆ ನೀಡಿದರು. ಶಾಲೆಯಲ್ಲಿ ಮಧ್ಯಾಹ್ನದ ವೇಳೆ ವಿದ್ಯಾರ್ಥಿಗಳು ಆಹಾರ ವಸ್ತುಗಳನ್ನು ಚೆಲ್ಲುವುದರಿಂದ ಶಾಲೆಗಳ ಬಳಿಯಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಆದ್ದರಿಂದ ಮಕ್ಕಳು ಆಹಾರ ಪದಾರ್ಥಗಳನ್ನು ಚೆಲ್ಲುವುದನ್ನು ಕಡಿಮೆ ಮಾಡಬೇಕೆಂದು ನೆಲ್ಲಿಕಾರು ಸೈಂಟ್ ವಿಕ್ಟರ್ ಶಾಲೆಯ ಶಿಕ್ಷಕರು ಸಲಹೆ ನೀಡಿದರಲ್ಲದೆ, ಪಂಚಾಯತ್ ವತಿಯಿಂದ ಪೈಪ್ ಕಾಂಪೋಸ್ಟ್‌ಗಳನ್ನು ಮಾಡಲು ಪ್ರತಿ ಶಾಲೆಗಳಿಗೂ ಪೈಪ್‌ಗಳನ್ನು ನೀಡುವಂತೆ ಕೇಳಿಕೊಂಡರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿರ್ತಾಡಿ ವಲಯದ ಮೇಲ್ವೀಚಾರಕಿ ರತಿ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಕ್ಕಳ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದರು.
ಪಂಚಾಯತ್ ಉಪಾಧ್ಯಕ್ಷೆ ಕುಶಲ, ಮಾಜಿ ಅಧ್ಯಕ್ಷ ಹರೀಶ್ ಆಚಾರ್ಯ, ಸದಸ್ಯರುಗಳಾದ ಎಂ. ಶಶಿಧರ್, ಸುಂದರ ಪೂಜಾರಿ, ಉದಯ, ಯಶೋಧ, ಲಲಿತಾ, ಭಾರತಿ, ಸರಸ್ವತಿ ನಾಯ್ಕ, ಸುನಂದ, ಉದ್ಯೋಗ ಖಾತರಿ ಯೋಜನೆಯ ತಾಲೂಕು ಇಂಜಿನಿಯರ್ ಸೂರಜ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸ್ಟ್ಯಾನಿ ಪಿಂಟೋ ಅತಿಥಿಗಳಾಗಿ ಭಾಗವಹಿಸಿದ್ದರು. ಪಂಚಾಯತ್ ಸಿಬಂದಿ ಪ್ರಶಾಂತ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ದೀಕ್ಷಾ ವಂದಿಸಿದರು.







