ಇರಾಕಿ ಜನರಿಗೆ ಮತ್ತೊಂದು ಅಪಾಯ ಕಾದು ನಿಂತಿದೆಯೇ?
ಮೊಸುಲ್‌ನ ಅಣೆಕಟ್ಟು ಯಾವ ಕ್ಷಣವೂ ಛಿದ್ರವಾಗಬಹುದೆಂದು ಎಚ್ಚರಿಸಿದ ಅಮೆರಿಕ!

ಬಗ್ದಾದ್, ಮಾರ್ಚ್.11: ಕೆಲವು ವರ್ಷಗಳಿಂದ ಇರಾಕ್ ಐಸಿಸ್ ಉಗ್ರರಿಂದಾಗಿ ಭಾರೀ ಸಂಕಷ್ಟವನ್ನೇ ಎದುರಿಸುತ್ತಿದೆಯಷ್ಟೇ?. ಈಗ ಇರಾಕ್‌ನ ಅತಿದೊಡ್ಡ ಅಣೆಕಟ್ಟು ಮೊಸುಲ್‌ನಲ್ಲಿದೆ. ಹೆಚ್ಚು ಗಟ್ಟಿಯಿಲ್ಲದ ಪಂಚಾಂಗದಲ್ಲಿ ಅದನ್ನು ಕಟ್ಟಲಾಗಿದ್ದು ಯಾವ ಕ್ಷಣವೂ ಅದು ಛಿದ್ರವಾಗಬಹುದು. ಅದನ್ನು ತಡೆಯುವ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಮೆರಿಕದ ರಾಯಭಾರಿ ಇರಾಕ್ ಸರಕಾರವನ್ನು ಎಚ್ಚರಿಸಿದ್ದಾರೆ. ಮೊಸುಲ್ ಅಣೆಕಟ್ಟು ಸಮೀಪ ಹದಿನೈದು ಲಕ್ಷ ಮಂದಿ ವಾಸಿಸುತ್ತಿದ್ದಾರೆ. ಅಮೆರಿಕದ ಮುನ್ನೆಚ್ಚರಿಕೆ ನಿಜವಾಯಿತೆಂದರೆ ಇವರೆಲ್ಲರ ಪ್ರಾಣ ಅಪಾಯಕ್ಕೆ ತುತ್ತಾಗಲಿದೆ. ಇರಾಕ್‌ನ ವಿಶ್ವಸಂಸ್ಥೆ ರಾಯಬಾರಿ ಅಲ್‌ಹಕೀಂ ಕರೆದಿದ್ದ ಸಭೆಯಲ್ಲಿ ಅಮೆರಿಕದ ರಾಯಭಾರಿ ಸಮಂತ ಪವರ್ ಈ ಅಣೆಕಟ್ಟಿನ ರಕ್ಷಣೆಗೆ ವಿಶ್ವಸಂಸ್ಥೆಯ ಸದಸ್ಯರಾಷ್ಟ್ರಗಳು ನೆರವಾಗಬೇಕೆಂದು ಕರೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿ ವಿಶ್ವಸಂಸ್ಥೆಯ ಏಯ್ಡ್ ಆಂಡ್ ಡೆವಲಪ್‌ಮೆಂಟ್ ಏಜೆನ್ಸಿಗಳಿಂದ ತಂತ್ರಜ್ಞಾನ ಪರಿಣಿತರನ್ನು , ಇಂಜಿನಿಯರ್‌ಗಳು ಹಾಗೂ ಪ್ರತಿನಿಧಿಗಳು ಬೆರಳೆತ್ತಿತೋರಿಸಿದ ವಸ್ತು ಸ್ಥಿತಿಯನ್ನು ಅಮೆರಿಕದ ರಾಯಭಾರಿ ಈ ಸಭೆಯಲ್ಲಿ ವಿವರಿಸಿದ್ದರು. ಅವರು ಆ ಅಣೆಕಟ್ಟು ತೀರಾ ಅಪಾಯದಲ್ಲಿದೆ. ಯಾವುದೇ ಕ್ಷಣವೂ ಒಡೆದು ಹೋಗಬಹುದು. ಅಣೆಕಟ್ಟಿನ ಸಮೀಪವಾಸಿಗಳಿಗೆ ಅಪಾಯವಾಗಬಹುದು ಎಂದು ಸಭೆಗೆ ತಿಳಿಸಿದ್ದರು.
ಅಣೆಕಟ್ಟು ಒಡೆಯುವ ಸನ್ನಿವೇಶ ಸಂಭವನೀಯವಾಗಿದ್ದು ಒಂದು ವೇಳೆ ಅದು ಛಿದ್ರವಾದರೆ ಕೆಲವು ಕಡೆ 14 ಮೀಟರ್‌ನಷ್ಟು ಎತ್ರರಕ್ಕೆ ನೀರು ಬರಬಹುದು. ಮತ್ತು ಅಲ್ಲಿರುವ ಎಲ್ಲವೂ ನಾಶವಾಗಲಿದೆ .ಆದ್ದರಿಂದ ಅಣೆಕಟ್ಟಿನ ದುರಸ್ತಿಕಾರ್ಯ ಆದಷ್ಟು ಬೇಗನೆ ನಡೆಸಬೇಕೆಂದು ಅಮೆರಿಕದ ರಾಯಭಾರಿ ಹೇಳಿದ್ದಾರೆ.
ಅಣೆಕಟ್ಟಿನ ಅಪಾಯ ಸ್ಥಿತಿ ಮನಗಂಡು ಇರಾಕಿಗರನ್ನು ಅಲ್ಲಿಂದ ಪಾರು ಮಾಡುವ ಉಪಾಯಗಳನ್ನು ಯೋಚಿಸಬೇಕೆಂದು ಅವರು ಸರಕಾರಕ್ಕೆ ಸೂಚಿಸಿದ್ದಾರೆ. ಅಣೆಕಟ್ಟಿನ ದುರಸ್ತಿಗೆ ಇಟಲಿಯ ಕಂಪೆನಿ ಟೆವಿಯನ್ನು ಆಯ್ಕೆ ಮಾಡಲಾಗಿದೆ. ಈಗ ಅಣೆಕಟ್ಟು ಕುರ್ದಿಷ್ ಪೆಷ್‌ಮೆಗರ್ ಸೇನೆಯ ಸಂರಕ್ಷಣೆಯಲ್ಲಿದೆ.







