ದಕ್ಷಿಣ ಸುಡಾನ್: ಅತ್ಯಾಚಾರಕ್ಕೆ ಅವಕಾಶವೇ ಸೈನಿಕರಿಗೆ ಸಂಬಳ
ಭೀಕರ ಪರಿಸ್ಥಿತಿಯ ಬಗ್ಗೆ ವಿಶ್ವಸಂಸ್ಥೆ ಎಚ್ಚರಿಕೆ

ಜಿನೇವ, ಮಾ. 11: ದಕ್ಷಿಣ ಸುಡಾನ್‌ನಲ್ಲಿ ಜಗತ್ತಿನಲ್ಲೇ ಭಯಾನಕ ಮಾನವಹಕ್ಕುಗಳ ಉಲ್ಲಂಘನೆ ಕೃತ್ಯಗಳು ನಡೆಯುತ್ತಿದ್ದು, ಈ ದೇಶವು ಸಂಬಳದ ಬದಲಿಗೆ ತನ್ನ ಸೈನಿಕರನ್ನು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲು ಬಿಡುತ್ತಿದೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಕಚೇರಿ ಶುಕ್ರವಾರ ಹೇಳಿದೆ.
‘‘ದಕ್ಷಿಣ ಸುಡಾನ್‌ನ ಸೇನೆಗೆ ಪೂರಕವಾಗಿ ದಾಳಿಗಳನ್ನು ನಡೆಸುತ್ತಿರುವ ಸಶಸ್ತ್ರ ಹೋರಾಟಗಾರರು ಮಾನವಹಕ್ಕು ಉಲ್ಲಂಘನೆಗಳನ್ನು ನಡೆಸುತ್ತಿದ್ದಾರೆ ಎಂಬ ಮಾಹಿತಿಯನ್ನು ನಮ್ಮ ವೀಕ್ಷಣಾ ತಂಡ ಪಡೆದುಕೊಂಡಿದೆ. ಈ ಸಂಬಂಧ ಈ ಹೋರಾಟಗಾರರು ಸರಕಾರದೊಂದಿಗೆ ‘ಏನು ಸಾಧ್ಯವೋ ಅದನ್ನು ಮಾಡಿ ಹಾಗೂ ಏನು ಸಾಧ್ಯವೋ ಅದನ್ನು ಪಡೆಯಿರಿ’ ಎಂಬ ಒಪ್ಪಂದವನ್ನು ಹೊಂದಿದ್ದಾರೆ’’ ಎಂದು ನೂತನ ವರದಿಯಲ್ಲಿ ಮಾನವಹಕ್ಕುಗಳ ಸಂಸ್ಥೆ ಹೇಳಿದೆ.
‘‘ಹಾಗಾಗಿ, ಹೆಚ್ಚಿನ ಯುವಕರು ತಮ್ಮ ಸಂಬಳವಾಗಿ ಆಕಳುಗಳು ಮತ್ತು ಇತರ ಸೊತ್ತುಗಳನ್ನು ಕದಿಯುತ್ತಿದ್ದಾರೆ ಹಾಗೂ ಮಹಿಳೆಯರು ಮತ್ತು ಬಾಲಕಿಯರನ್ನು ಅಪಹರಿಸಿ ಅತ್ಯಾಚಾರ ನಡೆಸುತ್ತಿದ್ದಾರೆ’’ ಎಂದು ವರದಿ ಹೇಳಿದೆ.
ಪ್ರತಿಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂಬುದಾಗಿ ಶಂಕಿಸಲಾದ ನಾಗರಿಕರನ್ನು ಜೀವಂತ ಸುಡಲಾಗುತ್ತಿದೆ, ಹಡಗುಗಳ ಕಂಟೇನರ್‌ಗಳಲ್ಲಿ ಹಾಕಿ ಉಸಿರುಗಟ್ಟಿಸಲಾಗುತ್ತಿದೆ, ಮರಕ್ಕೆ ನೇತು ಹಾಕಲಾಗುತ್ತಿದೆ ಹಾಗೂ ತುಂಡು ತುಂಡಾಗಿ ಕತ್ತರಿಸಲಾಗುತ್ತಿದೆ ಎಂಬ ಭಯಾನಕ ಚಿತ್ರಣವನ್ನು ವರದಿ ಮುಂದಿಟ್ಟಿದೆ. ಇಂಥ ಅಮಾನುಷ ಕ್ರೌರ್ಯಕ್ಕೆ ಒಳಗಾದವರಲ್ಲಿ ಮಕ್ಕಳು ಸೇರಿದ್ದಾರೆ ಎಂದಿದೆ.
ಯುದ್ಧಾಸ್ತ್ರವಾಗಿ ಮಹಿಳೆಯರ ಮೇಲೆ ಭೀಕರವಾಗಿ ಅತ್ಯಾಚಾರ ನಡೆಸಲಾಗುತ್ತಿದೆ ಎಂಬುದಾಗಿಯೂ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮುಖ್ಯಸ್ಥ ಝಾಯಿದ್ ರಅದ್ ಅಲ್ ಹುಸೈನ್ ಎಚ್ಚರಿಸಿದ್ದಾರೆ.







