ಸೈನಾ ಕ್ವಾರ್ಟರ್ ಫೈನಲ್‌ಗೆ, ಶ್ರೀಕಾಂತ್, ಪ್ರಣೀತ್‌ಗೆ ಸೋಲು
ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್
ಬರ್ಮಿಂಗ್‌ಹ್ಯಾಮ್, ಮಾ.11: ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ. ಆದರೆ, ಸ್ಪರ್ಧೆಯಲಿದ್ದ ಉಳಿದ ಭಾರತದ ಆಟಗಾರರು ಟೂರ್ನಿಯಿಂದ ಹೊರಗುಳಿದಿದ್ದಾರೆ.
ಹೈದರಾಬಾದ್‌ನ 25ರ ಹರೆಯದ ಆಟಗಾರ್ತಿ ಸೈನಾ ಗುರುವಾರ ನಡೆದ ಎರಡನೆ ಸುತ್ತಿನ ಪಂದ್ಯದಲ್ಲಿ ಥಾಯ್ಲೆಂಡ್‌ನ ಬುಸಾನನ್ ಆಂಗ್‌ಬುಮ್ರುಂಗ್‌ಪನ್‌ರನ್ನು 21-16, 21-19 ಅಂತರದ ಗೇಮ್‌ಗಳಿಂದ ಮಣಿಸಿದರು. ಸೈನಾ ಅಂತಿಮ 8ರ ಘಟ್ಟದಲ್ಲಿ ತೈವಾನ್‌ನ ತೈ ಝು ಯಿಂಗ್‌ರನ್ನು ಎದುರಿಸಲಿದ್ದಾರೆ.
ಮೊದಲ ಗೇಮ್‌ನಲ್ಲಿ ಬುಸಾನನ್ ಅವರು ಸೈನಾಗೆ ತೀವ್ರ ಹೋರಾಟ ನೀಡಿದರು. ನೆಟ್‌ನಲ್ಲಿ ಉತ್ತಮ ಹಿಡಿತ ಸಾಧಿಸಿದ ಸೈನಾ ಸತತ 5 ಅಂಕಗಳನ್ನು ಪಡೆದರು. 18-11 ರಿಂದ ಮುನ್ನಡೆ ಪಡೆದರು.
ಎರಡನೆ ಗೇಮ್‌ನಲ್ಲಿ ಎರಡನೆ ಶ್ರೇಯಾಂಕದ ನೆಹ್ವಾಲ್ ಉತ್ತಮ ಪ್ರದರ್ಶನದಿಂದ ಗಮನ ಸೆಳೆದರು. ಎದುರಾಳಿ ಆಟಗಾರ್ತಿಯ ವಿರುದ್ಧ ಪ್ರಾಬಲ್ಯ ಮೆರೆದ ನೆಹ್ವಾಲ್ ಕೇವಲ 42 ನಿಮಿಷಗಳಲ್ಲಿ ಎರಡನೆ ಗೇಮ್‌ನ್ನು ಗೆದ್ದುಕೊಂಡಿದ್ದಾರೆ.
ಟೂರ್ನಿಯಲ್ಲಿ ಸ್ಪರ್ಧೆಯಲ್ಲಿದ್ದ ಭಾರತ ಇತರ ಶಟ್ಲರ್‌ಗಳು ಸೋಲುವ ಮೂಲಕ ನಿರಾಸೆಗೊಳಿಸಿದರು. ಪುರುಷರ ವಿಭಾಗದಲ್ಲಿ ಕೆ.ಶ್ರೀಕಾಂತ್ ಜಪಾನ್‌ನ ಕೆಂಟೊ ಮೊಮೊಟಾ ವಿರುದ್ಧದ ಎರಡನೆ ಸುತ್ತಿನ ಪಂದ್ಯವನ್ನು 10-21, 13-21 ಸೆಟ್‌ಗಳಿಂದ ಸೋತಿದ್ದಾರೆ.
ಮೊದಲ ಸುತ್ತಿನ ಪಂದ್ಯದಲ್ಲಿ ಐದು ಬಾರಿಯ ವಿಶ್ವ ಚಾಂಪಿಯನ್ ಮಲೇಷ್ಯಾದ ಲೀ ಚೊಂಗ್ ವೀ ಅವರನ್ನು ಮಣಿಸಿ ಎಲ್ಲರ ಗಮನ ಸೆಳೆದಿದ್ದ ಸಾಯ್ ಪ್ರಣೀತ್ ಎರಡನೆ ಸುತ್ತಿನ ಪಂದ್ಯದಲ್ಲಿ ಮುಗ್ಗರಿಸಿದರು.
ಡೆನ್ಮಾರ್ಕ್‌ನ್‌ನ ಹ್ಯಾನ್ಸ್-ಕ್ರಿಸ್ಟಿಯನ್ ವಿಟ್ಟಿಂಗಸ್ ವಿರುದ್ಧ ಮೊದಲ ಗೇಮ್‌ನ್ನು 21-12 ರಿಂದ ಜಯಿಸಿದ್ದ ಪ್ರಣೀತ್ ಉಳಿದೆರಡು ಗೇಮ್‌ಗಳನ್ನು 11-21, 6-21 ಅಂತರದಿಂದ ಸೋತರು.
ಭಾರತದ ಇನ್ನೋರ್ವ ಆಟಗಾರ ಸಮೀರ್ ವರ್ಮ ಚೀನಾದ ತೈನ್ ಹೌವೀ ವಿರುದ್ಧ ವೀರೋಚಿತ ಸೋಲುಂಡರು. ಸಮೀರ್ ಮೊದಲ ಗೇಮ್ಞ್‌ನ್ನು 21-10 ರಿಂದ ಗೆದ್ದುಕೊಂಡಿದ್ದರು. ಆದರೆ, ಉಳಿದೆರಡು ಪಂದ್ಯಗಳನ್ನು 12-21, 19-21 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.







