ಕಾಸರಗೋಡು ಕಡಲ ತೀರಕ್ಕೆ ಅಪ್ಪಳಿಸಿದ ಸುನಾಮಿ!
ಪ್ರಾಕೃತಿಕ ಅವಘಡ ಸಂದರ್ಭದ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿಗಾಗಿ ಅಣಕು ಪ್ರದರ್ಶನ

ಕಾಸರಗೋಡು, ಮಾ.11: ಸುನಾಮಿ ದುರಂತ ಸಂಭವಿಸುವ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ದುರಂತ ನಿವಾರಣಾ ಪ್ರಾಧಿಕಾರದ ವತಿಯಿಂದ ಅಣಕು ಪ್ರದರ್ಶನ ನಡೆಯಿತು. ರಾಷ್ಟ್ರೀಯ ದುರಂತ ನಿವಾರಣಾ ಪ್ರಾಧಿಕಾರದ ಆದೇಶದಂತೆ ಶುಕ್ರವಾರ ಅಪರಾಹ್ನ ಕಾಸರಗೋಡು ಕಸಬಾ ಸಮುದ್ರ ತೀರದಲ್ಲಿ ಸುನಾಮಿ ಅಣಕು ಪ್ರದರ್ಶನ ನಡೆಯಿತು. ಜಿಲ್ಲಾಡಳಿತದ ಸಹಕಾರದೊಂದಿಗೆ ನಡೆದ ಅಣಕು ಪ್ರದರ್ಶನ ನಾಗರಿಕರಲ್ಲಿ ಧೈರ್ಯ ಮೂಡಿಸಿತು. ಅವಘಡಗಳು ಸಂಭವಿಸಿದಾಗ ಯಾವ ರೀತಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು?, ಹೇಗೆ ಸಮಯ ಪ್ರಜ್ಞೆ ತೋರಬೇಕು ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಲಾಯಿತು. ಶುಕ್ರವಾರ ಮಧ್ಯಾಹ್ನ 12:30ಕ್ಕೆ ಪಾಕಿಸ್ತಾನ ತೀರದಲ್ಲಿ ಸಂಭವಿಸಿದ ಭೂಕಂಪದ ಹಿನ್ನೆಲೆಯಲ್ಲಿ ಕಾಸರಗೋಡು ತೀರದಲ್ಲಿ ಸುನಾಮಿಯ ಸಾಧ್ಯತೆ ಇದೆ ಎಂದು ಕಾಸರಗೋಡು ಜಿಲ್ಲಾಧಿಕಾರಿಗೆ ರಾಷ್ಟ್ರೀಯ ದುರಂತ ಪ್ರಾಧಿಕಾರದ ಸಂದೇಶ ಲಭಿಸುವಂತೆ ಮಾಡಿ ಅಣಕು ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.
ಎರಡು ಲಕ್ಷ ಕುಟುಂಬಗಳ ಮೇಲೆ ಸುನಾಮಿ ಪರಿಣಾಮ ಬೀರಲಿದ್ದು , 25 ಮೀ.ಎತ್ತರದ ಅಲೆಗಳು ಅಪ್ಪಳಿಸಲಿವೆ ಎಂಬ ಸಂದೇಶ ನೀಡಲಾಗಿತ್ತು. ಸಂದೇಶ ಲಭಿಸಿದ ಕೂಡಲೇ ಜಿಲ್ಲಾಧಿಕಾರಿ ಇ. ದೇವದಾಸನ್ ತಮ್ಮ ಕಚೇರಿಯಲ್ಲಿ ಜಿಲ್ಲಾ ದುರಂತ ನಿವಾರಣಾ ಅಧಿಕಾರಿಗಳ ತುರ್ತು ಸಭೆ ನಡೆಸಿದರು. ಚಂದ್ರಗಿರಿ ಕಸಬಾ ತೀರದ 150 ಕುಟುಂಬಗಳ 1,000 ಮಂದಿಯನ್ನು ಸಮೀಪದ ಶಾಲೆಗಳಿಗೆ ಸ್ಥಳಾಂತರಿಸಲಾಯಿತು. ಶಾಲೆಗಳಿಗೆ ರಜೆ ಘೋಷಿಸಲಾಯಿತು. ಕಂಟ್ರೋಲ್ ರೂಂ ತೆರೆಯಲಾಯಿತು. ಸಂಚಾರ ವ್ಯವಸ್ಥೆ ಸುಗಮಗೊಳಿಸಲಾಯಿತು. ಆರೋಗ್ಯ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗಳು ಸಹಕರಿಸಿದವು. ಕಂದಾಯ, ಪೊಲೀಸ್, ಆರೋಗ್ಯ, ಅಗ್ನಿಶಾಮಕ ದಳ, ಮೀನುಗಾರಿಕೆ, ವಾರ್ತಾ ಇಲಾಖೆಗಳು ಸೂಕ್ತ ವ್ಯವಸ್ಥೆಗಳನ್ನು ಕೈಗೊಂಡವು. ಸ್ಥಳಿಯರು ಸಹಕರಿಸಿದರು. ಜಿಲ್ಲಾಧಿಕಾರಿ ಇ. ದೇವದಾಸನ್, ಜಿಲ್ಲಾ ಎಸ್ಪಿ ಎ.ಶ್ರೀನಿವಾಸ್, ಉಪ ಜಿಲ್ಲಾಧಿಕಾರಿ ಮೃಣ್ಮಯಿ ಶಶಾಂಕ್, ಅಬ್ದುಲ್ ನಾಸರ್ ಮತ್ತಿತರ ಅಧಿಕಾರಿಗಳು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಸಾವಿರಾರು ಮಂದಿ ಅಣಕು ಪ್ರದರ್ಶನಕ್ಕೆ ಸಾಕ್ಷಿಗಳಾದರು.







