ಆಮಂತ್ರಿತರ ಪಟ್ಟಿಯಲ್ಲಿ ಭಾರತ ವಿರೋಧಿಗಳು-ಭ್ರಷ್ಟರು-ಮೃತರು
ವಿಶ್ವ ಸಂಸ್ಕೃತಿ ಉತ್ಸವ ವಿವಾದ

ಹೊಸದಿಲ್ಲಿ, ಮಾ.11: ಆರ್ಟ್ ಆಫ್ ಲಿವಿಂಗ್‌ನ ವಿಶ್ವ ಸಂಸ್ಕೃತಿ ಉತ್ಸವದ ಆಮಂತ್ರಿತರ ಪಟ್ಟಿ, ಕಾರ್ಯಕ್ರಮದ ಸುತ್ತಲಿನ ವಿವಾದಕ್ಕೆ ಇನ್ನಷ್ಟು ಇಂಧನವೆರೆದಿದೆ. ಆಮಂತ್ರಿತರಲ್ಲಿ ಕೆಲವರು ಭಾಗವಹಿಸಲು ನಿರಾಕರಿಸಿದ್ದರೆ, ಇತರರು ಹಗರಣಗಳಿಗೆ ಸಂಬಂಧಿಸಿದವರಾಗಿದ್ದು, ಒಬ್ಬ ಮೃತ ವ್ಯಕ್ತಿಯಾಗಿದ್ದಾನೆ.
ಕಾಶ್ಮೀರದ ವಿವಾದದಲ್ಲಿ ಪಾಕಿಸ್ತಾನದ ಪರ ನಿಲುವಿಗೆ ಖ್ಯಾತರಾಗಿರುವ ಹಾಗೂ ಆಗಾಗ ಭಾರತವನ್ನು ಟೀಕಿಸುತ್ತಿರುವ ಟರ್ಕಿಯ ಮಾಜಿ ಮಹಾಕಾರ್ಯದರ್ಶಿ ಅಕ್ಮಲುದ್ದೀನ್ ಇಹ್ಸಾನೊಗ್ಲು, ಉತ್ಸವದ ಸ್ವಾಗತ ಸಮಿತಿಯ ಸದಸ್ಯನೆಂದು ಹೆಸರಿಸಲ್ಪಟ್ಟಿದ್ದಾರೆ.
ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಹಾಗೂ ಅಫ್ಘಾನಿಸ್ತಾನದ ಸಿಇಒ ಅಬ್ದುಲ್ಲಾ ಅಬ್ದುಲ್ಲಾ ಸಹಿತ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿರುವ ಅನೇಕ ವಿದೇಶಿ ನಾಯಕರು ಬಾರದಿರಲು ನಿರ್ಧರಿಸಿದ್ದಾರೆ.
ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮೊದಲು ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಕೊಂಡು ಬಳಿಕ ನಿರ್ಧಾರವನ್ನು ರದ್ದುಗೊಳಿಸಿದ್ದರೆ, ದಿಲ್ಲಿಗೆ ಆಗಮಿಸಿದ್ದ ಝಿಂಬಾಬ್ವೆಯ ನಾಯಕ ರಾಬರ್ಟ್ ಮುಗಾಬೆ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ನಿರ್ಧರಿಸಿ ಗುರುವಾ ರ ಸ್ವದೇಶಕ್ಕೆ ಮರಳಿದ್ದಾರೆ.
ಯಮುನಾ ನೆರೆ ಬಯಲಿಗೆ ಹಾನಿ ಹಾಗೂ ತೇಲು ಸೇತುವೆಗಳನ್ನು ನಿರ್ಮಿಸಲು ಸೇನೆಯನ್ನು ಬಳಸಿಕೊಂಡ ವಿವಾದಗಳು ಸಾಲದೆಂಬಂತೆ ಕೆಲವು ವಿದೇಶಿ ಆಮಂತ್ರಿತರು ಹಗರಣಗಳಿಂದ ಸುತ್ತುವರಿದವರಾಗಿದ್ದಾರೆ.
ಲೈಂಗಿಕ ಕಿರುಕುಳದ ಆರೋಪದ ಬಳಿಕ ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿಯ ಮುಖ್ಯಸ್ಥನ ಹುದ್ದೆಯನ್ನು ತೊರೆದಿದ್ದ ಮಾಜಿ ಡಚ್ ಪ್ರಧಾನಿ ರೂಡ್ ಲುಬ್ಬರ್ಸ್, ಉತ್ಸವದ ಅಧಿಕೃತ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿಯ ಉಪಾಧ್ಯಕ್ಷರಾಗಿದ್ದಾರೆ.
2020ರ ಟೋಕಿಯೊ ಒಲಿಂಪಿಕ್ಸ್‌ಗಾಗಿ ನಿರ್ಮಿಸಲಾಗುತ್ತಿರುವ ಕ್ರೀಡಾಂಗಣವೊಂದರ ಉಬ್ಬುತ್ತಿರುವ ಖರ್ಚಿನ ಕುರಿತು ವಿವಾದದಿಂದಾಗಿ ಕಳೆದ ವರ್ಷ ಜಪಾನ್‌ನ ಪ್ರಧಾನಿ ಶಿಂಜೊ ಅಬೆಯವರ ಸಂಪುಟ ತ್ಯಜಿಸಿದ್ದ ಹಕುಬುನ್ ಶಿಮೊಮುರಾ ಅದೇ ಸಮಿತಿಯ ಸದಸ್ಯರಾಗಿದ್ದಾರೆ. ಶಿಮೊಮುರಾ ಪದವಿ ತ್ಯಜಿಸಿದ್ದರೂ ಕಾರ್ಯಕ್ರಮದಲ್ಲಿ ಅವರನ್ನಿನ್ನೂ ಜಪಾನ್‌ನ ಕ್ರೀಡಾ ಸಚಿವರೆಂದೇ ಉಲ್ಲೇಖಿಸಲಾಗಿದೆ.
93ರ ಹರೆಯದಲ್ಲಿ ಫೆ.16ರಂದು ನಿಧನರಾಗಿರುವ ವಿಶ್ವಸಂಸ್ಥೆಯ ಮಾಜಿ ಮಹಾಕಾರ್ಯದರ್ಶಿ ಬುಟ್ರೋಸ್ ಬುಟ್ರೋಸ್ ಘಾಲಿಯವರನ್ನು ಸ್ವಾಗತ ಸಮಿತಿಯಲ್ಲಿ ಸೇರಿಸಿರುವುದು ಇನ್ನೂ ವಿಚಿತ್ರವಾಗಿದೆ.
ನೇಪಾಳದ ಅಧ್ಯಕ್ಷೆಯಾಗಿದ್ದ ಮೊದಲ ಮಹಿಳೆ ವಿದ್ಯಾದೇವಿ ಭಂಡಾರಿ, ಪಾಕಿಸ್ತಾನದ ಮಾಜಿ ಪ್ರಧಾನಿ ಯೂಸುಫ್ ರಝಾ ಗಿಲಾನಿ, ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಾಮಿದ್ ಕರ್ಝಾಯಿ ಹಾಗೂ ಮಂಗೋಲಿಯ ಮತ್ತು ಯುಎಇಗಳ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸದವರ ಪಟ್ಟಿಯಲ್ಲಿ ಸೇರಿದ್ದಾರೆ. ನೇಪಾಳವನ್ನು ಉಪ ಪ್ರಧಾನಿ ಕಮಲ್ ಥಾಪಾ ಪ್ರತಿನಿಧಿಸಿದ್ದಾರೆ.
ವಿಶ್ವಾದ್ಯಂತದ ಭಾರತೀಯ ದೂತಾವಾಸಗಳನ್ನು ಸಮಾರಂಭದ ಪ್ರಚಾರಕ್ಕೆ ಬಳಸಿದ್ದ ಸರಕಾರಕ್ಕೆ ಅವರೆಲ್ಲರ ಗೈರು ಹಾಜರಿ ಮುಜುಗರ ವನ್ನುಂಟುಮಾಡುವ ಸಂಭವವಿದೆ.
ಭಾಗವಹಿಸದಿರಲು ನಿರ್ಧರಿಸಿರುವ ಅಗ್ರ ನಾಯಕರಲ್ಲಿ ಅನೇಕರು, ಶ್ರೀಶ್ರೀ ರವಿಶಂಕರ್‌ರ ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನ ಸಂಘಟಿಸಿರುವ ಮೂರು ದಿನಗಳ ಈ ಉತ್ಸವದ ವೇಳೆ, ಸಮ್ಮೇಳನಗಳಲ್ಲಿ ಭಾಷಣ ಮಾಡುವ ನಿರೀಕ್ಷೆಯಿತ್ತು.
ಝಿಂಬಾಬ್ವೆ ಹಾಗೂ ಅಫ್ಘಾನಿಸ್ತಾನ ಸಹಿತ ಅನೇಕ ದೇಶಗಳು ತಮ್ಮ ನಾಯಕರ ಭೇಟಿ ರದ್ದತಿಗೆ ಶಿಷ್ಟಾಚಾರದ ಕಳವಳವನ್ನು ಮುಂದಿಟ್ಟಿವೆ. ಅನೇಕ ರಾಷ್ಟ್ರಗಳ ಅಧ್ಯಕ್ಷರು, ತಮ್ಮ ಭಾರತೀಯ ಸೋದ್ಯೋಗಿ ಭಾಗವಹಿಸದಿರುವ ಕಾರ್ಯಕ್ರಮಕ್ಕೆ ತಾವು ಹೋಗುವುದು ಉಚಿತವಲ್ಲವೆಂದು ಅಭಿಪ್ರಾಯಿಸಿದ್ದಾರೆಂದು ಆ ದೇಶಗಳ ಅಧಿಕಾರಿಗಳು ಸೂಚಿಸಿದ್ದಾರೆ.
ಝಿಂಬಾಬ್ವೆಯ ಹೊರತಾಗಿ ಹೆಚ್ಚಿನ ದೇಶಗಳು ತಮ್ಮ ನಾಯಕರ ಭಾಗವಹಿಸುವಿಕೆ ರದ್ದತಿಯ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ.
ಶಿಷ್ಟಾಚಾರ ಹಾಗೂ ಭದ್ರತಾ ವ್ಯವಸ್ಥೆಗಳಲ್ಲಿ ಭಾರೀ ಕೊರತೆಯ ಕುರಿತು ಉತ್ಸವದ ಸಂಘಟಕರು ಮಾಹಿತಿ ನೀಡಿದ ಕಾರಣ ಮುಗಾಬೆ ಭಾಗವಹಿಸದಿರಲು ನಿರ್ಧರಿಸಿದರೆಂದು ಅವರ ವಕ್ತಾರರು ಹೇಳಿದ್ದಾರೆ.
ವಿದೇಶಾಂಗ ಸಚಿವಾಲಯದ ಕಾರ್ಯಕ್ರಮದಿಂದ ಅಂತರ ಕಾಪಾಡಲು ನಿರ್ಧರಿಸಿದ್ದು, ಮುಗಾಬೆ ಯವರಂತಹ ವಿದೇಶಿ ನಾಯಕರನ್ನು ಆಹ್ವಾನಿಸಿದುದು ಆರ್ಟ್ ಆಫ್ ಲಿವಿಂಗ್ ಸಂಘಟನೆಯೇ ಹೊರತು ಸರಕಾರವಲ್ಲವೆಂದು ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್, ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
ಕಾರ್ಯಕ್ರಮದಲ್ಲಿ ಬೇರೆ ಅಧ್ಯಕ್ಷೀಯ ಮಟ್ಟದ ವ್ಯಕ್ತಿಗಳು ಭಾಗವಹಿಸುತ್ತಿಲ್ಲವಾದ ಕಾರಣ ಮುಗಾಬೆ, ಭಾಗವಹಿಸದಿರಲು ನಿರ್ಧರಿಸಿರಬಹುದೆಂದು ಅವರು ಹೇಳಿದ್ದರು.
ಆದಾಗ್ಯೂ, ಅನೇಕ ಭಾರತೀಯ ದೂತಾ ವಾಸಗಳು ತಮ್ಮ ಜಾಲತಾಣಗಳು ಹಾಗೂ ಫೇಸ್‌ಬುಕ್ ಪುಟಗಳಲ್ಲಿ ಕಳೆದ ಕೆಲವು ದಿನಗಳಿಂದ ಕಾರ್ಯಕ್ರಮದ ಬಗ್ಗೆ ಪ್ರಚಾರ ಮಾಡಲು ನೆರವಾಗಿದ್ದವು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅಲ್ಲಿನ ಭಾರತೀಯ ಸಮುದಾಯಗಳನ್ನು ವಿನಂತಿಸಿದ್ದವು.





