ಪಾಕ್ ತಂಡಕ್ಕೆ ವಿಶ್ವಕಪ್‌ನಲ್ಲಿ ಭಾಗವಹಿಸಲು ಸರಕಾರ ಅನುಮತಿ

ಕರಾಚಿ, ಮಾ.11: ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಮುಂಬರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾಗವಹಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೊನೆಗೂ ಅನುಮತಿ ನೀಡಿದೆ.
ಭದ್ರತೆಯ ವಿಚಾರದಲ್ಲಿ ಪಾಕ್‌ಗೆ ಕೇಂದ್ರ ಸರಕಾರ ಭರವಸೆ ನೀಡಿಲ್ಲವೆಂಬ ಕಾರಣಕ್ಕಾಗಿ ಪಾಕ್ ತಂಡ ಭಾರತಕ್ಕೆ ತೆರಳುವ ನಿರ್ಧಾರವನ್ನು ಮುಂದೂಡಿತ್ತು. ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಆಂತರಿಕ ವ್ಯವಹಾರಗಳ ಸಚಿವ ಚೌಧರಿ ನಿಸಾರ್ (ಅಲಿ ಖಾನ್) ಭಾರತಕ್ಕೆ ತೆರಳಲು ಅನುಮತಿ ನೀಡಿರುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧಿಕಾರಿ ನಜಮ್ ಸೇಥಿ ತಿಳಿಸಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡ ಕಳೆದ ಬುಧವಾರ ಭಾರತಕ್ಕೆ ತೆರಳುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಹಿಂದೂ ಮೂಲಭೂತವಾದಿಗಳ ಬೆದರಿಕೆಯ ಹಿನ್ನೆಲೆಯಲ್ಲಿ ಪ್ರವಾಸವನ್ನು ಮುಂದೂಡಿತ್ತು. ಸಚಿವ ಅಲಿ ಖಾನ್ ಗುರುವಾರ ನೀಡಿದ್ದ ಹೇಳಿಕೆಯಲ್ಲಿ ಭಾರತದಿಂದ ಭದ್ರತೆಯ ಬಗ್ಗೆ ಸ್ಪಷ್ಟ ಭರವಸೆ ದೊರೆಯದೆ ಇದ್ದಲ್ಲಿ ತಮ್ಮ ತಂಡವನ್ನು ಕಳುಹಿಸುವುದಿಲ್ಲ ಎಂದು ತಿಳಿಸಿದ್ದರು.
ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ಐಸಿಸಿ), ಬಿಸಿಸಿಐ , ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಪೊಲೀಸ್ ಮುಖ್ಯಸ್ಥರಿಂದ ತಂಡಕ್ಕೆ ಗರಿಷ್ಠ ಭದ್ರತೆ ನೀಡುವ ಭರವಸೆಯ ಪತ್ರ ಶುಕ್ರವಾರ ಪಾಕಿಸ್ತಾನಕ್ಕೆ ಸಿಕ್ಕಿದೆ ಎಂದು ಸಚಿವ ಅಲಿ ಖಾನ್ ಹೇಳಿದ್ದಾರೆ.
ಪಾಕಿಸ್ತಾನದ ರಾಯಭಾರಿ ಅಬ್ದುಲ್ ಬಾಸಿತ್ ಭಾರತದ ಕಾರ್ಯದರ್ಶಿ ಅವರನ್ನು ಭೇಟಿಯಾಗಿ ಈ ಸಂಬಂಧ ಮಾತುಕತೆ ನಡೆಸಿರುವುದಾಗಿ ಸಚಿವ ಖಾನ್ ಮಾಹಿತಿ ನೀಡಿದರು.
ರಾಜತಾಂತ್ರಿಕ ಉದ್ವಿಗ್ನತೆಯಿಂದಾಗಿ ಉಭಯ ತಂಡಗಳಿಗೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ ದ್ವಿಪಕ್ಷೀಯ ಸರಣಿ ಆಡಲು ಸಾಧ್ಯವಾಗಿರಲಿಲ್ಲ. ಇದೀಗ ವಿಶ್ವಕಪ್‌ನ ಮೇಲೂ ಪರಿಣಾಮ ಉಂಟಾಗಿದೆ. 2007ರಿಂದ ಉಭಯ ತಂಡಗಳು ಪೂರ್ಣಾವಧಿ ಸರಣಿ ಆಡಿರಲಿಲ್ಲ. ಹೀಗಿದ್ದರೂ ಪಾಕಿಸ್ತಾನ ತಂಡ 2012ರಲ್ಲಿ ಭಾರತಕ್ಕೆ ಪ್ರವಾಸ ಕೈಗೊಂಡು ಅಲ್ಪಾವಧಿಯ ಏಕದಿನ ಸರಣಿ ಆಡಿತ್ತು. ಪಾಕಿಸ್ತಾನ ಮಾ.16ರಂದು ಕೋಲ್ಕತಾದಲ್ಲಿ ನಿಗದಿಯಾಗಿರುವ ತನ್ನ ಮೊದಲ ಪಂದ್ಯದಲ್ಲಿ ಅರ್ಹತಾ ಸುತ್ತಿನಲ್ಲಿ ತೇರ್ಗಡೆಯಾಗುವ ತಂಡವನ್ನು ಎದುರಿಸಲಿದೆ. ಮಾ.19ರಂದು ಸಾಂಪ್ರದಾಯಿಕ ಎದುರಾಳಿ ಭಾರತ ತಂಡವನ್ನು ಎದುರಿಸಲಿದೆ.
ಈ ಹಿಂದೆ ಭಾರತ-ಪಾಕ್ ತಂಡಗಳ ಮುಖಾಮುಖಿಗೆ ಧರ್ಮಶಾಲಾದ ಕ್ರೀಡಾಂಗಣ ನಿಗದಿಯಾಗಿತ್ತು. ಆದರೆ ಭಾರತದ ನಿವೃತ್ತ ಯೋಧರು ಮತ್ತು ಹಿಮಾಚಲ ಪ್ರದೇಶದ ರಾಜಕೀಯ ಧುರೀಣರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪಂದ್ಯವನ್ನು ಕೋಲ್ಕತಾದ ಈಡನ್ ಗಾರ್ಡನ್ಸ್‌ಗೆ ಸ್ಥಳಾಂತರ ಮಾಡಲಾಗಿತ್ತು.
ಪಾಕ್ ಕ್ರಿಕೆಟ್ ತಂಡಕ್ಕೆ ಭದ್ರತೆಯ ಭರವಸೆ
ಹೊಸದಿಲ್ಲಿ, ಮಾ.11: ಭಾರತದಲ್ಲಿ ಟ್ವೆಂಟಿ-20 ವಿಶ್ವಕಪ್ ಪಂದ್ಯಗಳಲ್ಲಿ ಪಾಲ್ಗೊಳ್ಳಲಿರುವ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಬಿಗಿ ಭದ್ರತೆ ನೀಡಲಾಗುತ್ತದೆ ಎಂದು ಭಾರತ ಶುಕ್ರವಾರ ಪಾಕಿಸ್ತಾನಕ್ಕೆ ಭರವಸೆ ನೀಡಿದೆ.
ಭಾರತದಲ್ಲಿರುವ ಪಾಕಿಸ್ತಾನದ ಹೈ ಕಮಿಶನರ್ ಅಬ್ದುಲ್ ಬಾಸಿತ್ ಅವರ ಮೂಲಕ ಪಾಕಿಸ್ತಾನಕ್ಕೆ ಭದ್ರತೆಯ ಭರವಸೆ ನೀಡಲಾಗಿದೆ. ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಸಂಪೂರ್ಣ ಭದ್ರತೆ ನೀಡುವುದಾಗಿ ಗೃಹ ಸಚಿವಾಲಯ ಬಾಸಿತ್‌ಗೆ ಭರವಸೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನದ ಮುಖ್ಯ ಸಮಸ್ಯೆಗೆ ಪರಿಹಾರ ನೀಡಲಾಗಿದೆ. ಪಂದ್ಯವನ್ನ್ನು ಧರ್ಮಶಾಲಾದಿಂದ ಸ್ಥಳಾಂತರಿಸಲಾಗಿದೆ. ಪಾಕ್ ಕೇವಲ ಕೋಲ್ಕತಾ(2 ಪಂದ್ಯಗಳು) ಹಾಗೂ ಮೊಹಾಲಿ(2 ಪಂದ್ಯಗಳು)ಯಲ್ಲಿ ಮಾತ್ರ ಪಂದ್ಯ ಆಡಲಿದೆ ಎಂದು ಬಾಸಿತ್ ತಿಳಿಸಿದರು. ‘‘ಭಾರತದ ಗೃಹ ಕಾರ್ಯದರ್ಶಿ ರಾಜೀವ್ ಮೆಹರಿಶಿ ತನಗೆ ಭದ್ರತೆಯ ಕುರಿತು ಸಂಪೂರ್ಣ ಭರವಸೆ ನೀಡಿದ್ದು, ತನ್ನ ಶಿಫಾರಸು ಪತ್ರವನ್ನು ಇಸ್ಲಾಮಾಬಾದ್‌ಗೆ ಕಳುಹಿಸಿಕೊಟ್ಟಿರುವೆ. ಪಾಕ್ ಸರಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ’’ ಎಂದು ಸುದ್ದಿಗಾರರಿಗೆ ಬಾಸಿತ್ ತಿಳಿಸಿದ್ದಾರೆ.
ಮಮತಾ ಭರವಸೆ: ಭಾರತ-ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯವನ್ನು ಕೋಲ್ಕತಾಕ್ಕೆ ಸ್ಥಳಾಂತರಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾ.19 ರಂದು ನಡೆಯಲಿರುವ ಪಂದ್ಯಕ್ಕೆ ತನ್ನ ಸರಕಾರ ಸಂಪೂರ್ಣ ಭದ್ರತೆ ನೀಡಲಿದೆ ಎಂದು ಬಂಗಾಳ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಸೌರವ್ ಗಂಗುಲಿಗೆ ಪತ್ರದ ಮೂಲಕ ಆಶ್ವಾಸನೆ ನೀಡಿದ್ದಾರೆ.
ಪಾಕ್ ವಿರುದ್ಧ ವಿಶ್ವಕಪ್ ಪಂದ್ಯ ಆಯೋಜಿಸಬೇಡಿ ಎಟಿಎಫ್ ಬೆದರಿಕೆ
ಕೋಲ್ಕತಾ, ಮಾ.11: ಭಾರತ-ಪಾಕಿಸ್ತಾನ ನಡುವಿನ ಟ್ವೆಂಟಿ-20 ವಿಶ್ವಕಪ್ ಪಂದ್ಯದ ಆತಿಥ್ಯವಹಿಸಿದರೆ ಈಡನ್‌ಗಾರ್ಡನ್ಸ್ ಸ್ಟೇಡಿಯಂನ ಪಿಚ್‌ನ್ನು ಅಗೆದುಹಾಕಲಾಗುವುದು ಎಂದು ಭಯೋತ್ಪಾದಕ ವಿರೋಧಿ ಸಂಘಟನೆ (ಎಟಿಎಫ್) ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೆೆ ಬರೆದ ಪತ್ರದಲ್ಲಿ ಬೆದರಿಕೆ ಹಾಕಿದೆ. ಮುಂಬೈ, ಪಠಾಣ್‌ಕೋಟ್ ಹಾಗೂ ಇತ್ತೀಚೆಗೆ ನಡೆದ ಪಾಂಪೋರ್ ದಾಳಿಯ ಸೂತ್ರಧಾರಿಗಳನ್ನು ಪಾಕಿಸ್ತಾನವು ಭಾರತಕ್ಕೆ ಹಸ್ತಾಂತರಿಸುವ ತನಕ ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ಪಂದ್ಯವನ್ನು ಆಯೋಜಿಸಬಾರದು ಎಂದು ಎಟಿಎಫ್‌ಒತ್ತಾಯಿಸಿದೆ.
ಪಾಕಿಸ್ತಾನ ವಿರುದ್ಧ ಪಂದ್ಯದ ಆತಿಥ್ಯವಹಿಸುವುದು ಭಯೋತ್ಪಾದಕರ ದಾಳಿಗೆ ವೀರಮರಣವನ್ನಪ್ಪಿರುವ ಸೈನಿಕರಿಗೆ ಮಾಡುವ ಅವಮಾನ. ಪಾಕ್ ವಿರುದ್ಧ ಪಂದ್ಯದ ಆತಿಥ್ಯವಹಿಸಬಾರದು.ಆ ಪಂದ್ಯಕ್ಕೆ ಯಾವುದೇ ಭದ್ರತೆಯನ್ನು ಒದಗಿಸಬಾರದು ಎಂದು ನಾವು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗೆ ಪತ್ರದ ಮೂಲಕ ತಿಳಿಸಿದ್ದೇವೆ ಎಂದು ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ವೀರೇಶ್ ಶಾಂಡಿಲ್ಯ ಹೇಳಿದ್ದಾರೆ.
‘‘ಮಾ.14ರ ಬಳಿಕ ನಮ್ಮ ಸಂಘಟನೆಯ ಕಾರ್ಯಕರ್ತರು ಈಡನ್‌ಗಾರ್ಡನ್ಸ್, ತಂಡಗಳು ವಾಸ್ತವ್ಯವಿರುವ ಹೊಟೇಲ್‌ಗಳು ಹಾಗೂ ಏರ್‌ಪೋರ್ಟ್ ಸಹಿತ ಕೋಲ್ಕತಾ ನಗರದಾದ್ಯಂತ ಪ್ರತಿಭಟನೆ ನಡೆಸಲಿದೆ. ನಾವು ಈ ಪಂದ್ಯ ನಡೆಯದಂತೆ ನೋಡಿಕೊಳ್ಳಲು ಬದ್ಧವಾಗಿದ್ದು, ಈಡನ್‌ಗಾರ್ಡನ್ಸ್‌ನ ಪಿಚ್‌ನ್ನು ಅಗೆಯಲು ಸಿದ್ಧರಾಗಿದ್ದೇವೆ. ಪಾಕಿಸ್ತಾನ ತಂಡ ಭಾರತಕ್ಕೆ ಪ್ರವೇಶಿಸದಂತೆ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಬೇಕು’’ ಎಂದು ಶಾಂಡಿಲ್ಯ ಆಗ್ರಹಿಸಿದರು.
ಈ ಸಂಘಟನೆಯು ಧರ್ಮಶಾಲಾದಲ್ಲಿ ಮಾ.19 ರಂದು ಭಾರತ-ಪಾಕಿಸ್ತಾನ ಪಂದ್ಯದ ಆತಿಥ್ಯವಹಿಸಿದ್ದಕ್ಕೆ ಈ ಹಿಂದೆ ವಿರೋಧ ವ್ಯಕ್ತಪಡಿಸಿದ್ದು, ಎಚ್‌ಪಿಸಿಎ ಸ್ಟೇಡಿಯಂ ಪಿಚ್‌ನ್ನು ಹಾಳುಗೆಡಹುವ ಬೆದರಿಕೆ ಹಾಕಿತ್ತು.
ಪಾಕಿಸ್ತಾನ-ಬಂಗಾಳ ವಿಶ್ವಕಪ್ ಅಭ್ಯಾಸ ಪಂದ್ಯ ರದ್ದು
ಕೋಲ್ಕತಾ, ಮಾ.11: ಪಾಕಿಸ್ತಾನ ಸರಕಾರ ತನ್ನ ಕ್ರಿಕೆಟ್ ತಂಡ ಭಾರತಕ್ಕೆ ಪ್ರವಾಸ ಕೈಗೊಳ್ಳಲು ಶುಕ್ರವಾರ ಸಂಜೆ ಹಸಿರು ನಿಶಾನೆ ತೋರಿದ ಹಿನ್ನೆಲೆಯಲ್ಲಿ ಶನಿವಾರ ಕೋಲ್ಕತಾದಲ್ಲಿ ನಿಗದಿಯಾಗಿದ್ದ ಪಾಕಿಸ್ತಾನ-ಬಂಗಾಳ ನಡುವಿನ ಟ್ವೆಂಟಿ-20 ವಿಶ್ವಕಪ್ ಅಭ್ಯಾಸ ಪಂದ್ಯ ರದ್ದಾಗಿದೆ. ಪಾಕಿಸ್ತಾನ ಶನಿವಾರ ಮಧ್ಯಾಹ್ನ 3 ಗಂಟೆಗೆ ಬಂಗಾಳದ ರಣಜಿ ತಂಡದ ವಿರುದ್ಧ ಮೊದಲ ಅಭ್ಯಾಸ ಪಂದ್ಯವನ್ನು ಆಡಬೇಕಾಗಿತ್ತು. ಆದರೆ, ಪಾಕ್ ತಂಡ ವಿಳಂಬವಾಗಿ ಭಾರತಕ್ಕೆ ಆಗಮಿಸುತ್ತಿರುವ ಕಾರಣ ಈ ಪಂದ್ಯ ರದ್ದಾಗಿದೆ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆ(ಸಿಎಬಿ) ತಿಳಿಸಿದೆ.
ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾಗವಹಿಸಲು ಭಾರತಕ್ಕೆ ತೆರಳಲು ನಮ್ಮ ತಂಡಕ್ಕೆ ಸರಕಾರ ಅನುಮತಿ ನೀಡಿದೆ. ಪಾಕ್ ಕ್ರಿಕೆಟ್ ತಂಡ ಶುಕ್ರವಾರ ರಾತ್ರಿ ಇಲ್ಲವೇ ಶನಿವಾರ ರಾತ್ರಿ ದುಬೈ ಮೂಲಕ ಭಾರತಕ್ಕೆ ತೆರಳಲಿದೆ ಎಂದು ಪಿಸಿಬಿ ಉನ್ನತಾಧಿಕಾರಿ ನಜಮ್ ಸೇಥಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪಾಕಿಸ್ತಾನ ತಂಡ ಭಾರತಕ್ಕೆ ವಿಳಂಬವಾಗಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಾ.19 ರಂದು ಕೋಲ್ಕತಾದಲ್ಲಿ ನಡೆಯಲಿರುವ ಭಾರತ-ಪಾಕ್ ನಡುವಿನ ವಿಶ್ವಕಪ್ ಪಂದ್ಯದ ಟಿಕೆಟ್‌ಗಳ ವಿತರಣೆಯಲ್ಲೂ ವಿಳಂಬವಾಗಿದೆ. ಧರ್ಮಶಾಲಾದಿಂದ ಕೋಲ್ಕತಾಕ್ಕೆ ಸ್ಥಳಾಂತರವಾಗಿರುವ ಪಂದ್ಯದ ಟಿಕೆಟ್ ಮಾರಾಟ ಮಾ.16 ರಿಂದ ಆರಂಭವಾಗಲಿದೆ.
ಪಾಕಿಸ್ತಾನ ತಂಡ ಮಾ.14 ರಂದು ಈಡನ್‌ಗಾರ್ಡನ್ಸ್‌ನಲ್ಲಿ ಹಾಲಿ ಚಾಂಪಿಯನ್ ಶ್ರೀಲಂಕಾದ ವಿರುದ್ಧ ಎರಡನೆ ಅಭ್ಯಾಸ ಪಂದ್ಯವನ್ನು ಆಡಲಿದೆ. ಮಾ.16 ರಂದು ಪ್ರಧಾನ ಸುತ್ತಿನ ಪಂದ್ಯವನ್ನು ಎ ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯುವ ತಂಡದ ವಿರುದ್ಧ ಆಡಲಿದೆ.







