ಸೇವಾತೆರಿಗೆ ಇಲಾಖೆಗೂ ಮಲ್ಯ 115 ಕೋಟಿ ರೂ. ಬಾಕಿ

♦ ಮಲ್ಯಗೆ ಸಮನ್ಸ್ ♦ ನಾನು ತಲೆಮರೆಸಿಕೊಂಡಿಲ್ಲ
ಹೊಸದಿಲ್ಲಿ, ಮಾ.11: ವಿದೇಶಕ್ಕೆ ಪರಾರಿಯಾಗಿರುವ ಮದ್ಯದೊರೆ ವಿಜಯ ಮಲ್ಯ ತನಗೆ 115 ಕೋಟಿ ರೂ. ಬಾಕಿಯಿರಿಸಿದ್ದಾರೆಂದು ಸೇವಾ ತೆರಿಗೆ ಇಲಾಖೆ ಶುಕ್ರವಾರ ಆಪಾದಿಸಿದ್ದು, ಅದನ್ನು ಪಾವತಿಸದೆ ಇರುವುದು ಜಾಮೀನುರಹಿತ ಅಪರಾಧವೆಂದು ಹೇಳಿದೆ.
ಸೇವಾತೆರಿಗೆ ವಂಚನೆ ಪ್ರಕರಣದಲ್ಲಿ ಮಲ್ಯ ಅವರಿಗೆ ಜಾಮೀನು ನೀಡುವುದನ್ನು ವಿರೋಧಿಸಿ ಸೇವಾ ತೆರಿಗೆ ಇಲಾಖೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಇಲ್ಲಿನ ವಿಶೇಷ ನ್ಯಾಯಾಲಯವು ಮುಂದಿನ ಆಲಿಕೆಯನ್ನು ಮಾರ್ಚ್ 28ಕ್ಕೆ ಮುಂದೂಡಿದೆ.
ಸೇವಾತೆರಿಗೆ ನಿಧಿಯು ಕೇಂದ್ರ ಸರಕಾರಕ್ಕೆ ಸೇರಿದ್ದಾಗಿರುವುದರಿದ ಸಾರ್ವಜನಿಕ ರಂಗದ ಬ್ಯಾಂಕ್‌ಗಳು ಮಲ್ಯರಿಗೆ ನೀಡಿರುವ ಸಾಲದ ಹಣವನ್ನು ವಸೂಲಿ ಮಾಡುವುದಕ್ಕಿಂತಲೂ, ಸೇವಾತೆರಿಗೆ ಇಲಾಖೆಗೆ ಅವರಿಂದ ಬರಬೇಕಾದ ಹಣವನ್ನು ವಸೂಲಿ ಮಾಡುವುದು ಹೆಚ್ಚು ಮುಖ್ಯವೆಂದು ಇಲಾಖೆಯು ತಿಳಿಸಿದೆ.
♦♦♦
ಮಲ್ಯಗೆ ಸಮನ್ಸ್
ಕಪ್ಪು ಹಣ ಬಿಳುಪುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು ವಿಜಯ ಮಲ್ಯಗೆ ಸಮನ್ಸ್ ಜಾರಿಗೊಳಿಸಿದ್ದು, ಮಾ.18ರಂದು ವಿಚಾರಣೆಗಾಗಿ ತನ್ನ ಮುಂದೆ ಹಾಜರಾಗುವಂತೆ ಅವರಿಗೆ ಇ-ಮೇಲ್ ಮೂಲಕ ತಿಳಿಸಿದೆ.
ಮಹತ್ವದ ಬೆಳವಣಿಗೆಯೊಂದರಲ್ಲಿ, ಈಗ ಸ್ಥಗಿತಗೊಂಡಿರುವ ಕಿಂಗ್‌ಫಿಶರ್ ಏರ್‌ಲೈನ್ಸ್‌ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಎ.ರಘುನಾಥನ್ ಇಂದು ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಕಪ್ಪುಹಣ ಬಿಳುಪುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು ಐಡಿಬಿಐ ಬ್ಯಾಂಕ್ ಹಾಗೂ ಮಲ್ಯ ಒಡೆತನದ ಕಿಂಗ್‌ಫಿಶರ್ ಏರ್‌ಲೈನ್ಸ್‌ನ ಆರು ಮಂದಿ ಅಧಿಕಾರಿಗಳಿಗೆ ಸಮನ್ಸ್ ನೀಡಿದೆ. ಕಳೆದ ಐದು ವರ್ಷಗಳಲ್ಲಿನ ತಮ್ಮ ವೈಯಕ್ತಿಕ ಹಣಕಾಸು ವ್ಯವಹಾರಗಳು ಹಾಗೂ ಆದಾಯ ತೆರಿಗೆ ಪಾವತಿಯ ವಿವರಗಳನ್ನು ತನಿಖಾ ಧಿಕಾರಿಗಳಿಗೆ ಸಲ್ಲಿಸುವಂತೆಯೂ ಅವರಿಗೆ ಆದೇಶಿಸಲಾಗಿದೆ.
2015ರಲ್ಲಿ ಸಿಬಿಐ ಸಿದ್ಧಪಡಿಸಿದ ಎಫ್‌ಐಆರ್ ಆಧರಿಸಿ ಜಾರಿ ನಿರ್ದೇಶನಾಲಯವು ಮಲ್ಯ ಮತ್ತಿತರರ ವಿರುದ್ಧ ಕಪ್ಪುಹಣ ಬಿಳುಪುಗೊಳಿಸಿದ ಪ್ರಕರಣವನ್ನು ದಾಖಲಿಸಿತ್ತು. ಕಿಂಗ್‌ಫಿಶರ್ ಏರ್‌ಲೈನ್ಸ್‌ನ ಆರ್ಥಿಕ ಸ್ಥಿತಿಗತಿ ಹಾಗೂ ಯಾವುದಾದರೂ ಲಂಚವನ್ನು ಪಾವತಿಸಿರುವ ಸಾಧ್ಯತೆಯಿದೆಯೇ ಎಂಬ ಬಗ್ಗೆ ಅದು ತನಿಖೆ ನಡೆಸುತ್ತಿದೆ.
♦♦♦
ನಾನು ತಲೆಮರೆಸಿಕೊಂಡಿಲ್ಲ
ಅಜ್ಞಾತ ಸ್ಥಳದಿಂದ ವಿಜಯ ಮಲ್ಯ ಟ್ವೀಟ್ ಹೊಸದಿಲ್ಲಿ, ಮಾ.11: ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಹಣವನ್ನು ಮರುಪಾವತಿಸದೆ ವಿದೇಶಕ್ಕೆ ಪರಾರಿಯಾಗಿರುವ ಹಿನ್ನೆಲೆಯಲ್ಲಿ ಕಾನೂನು ಕ್ರಮವನ್ನು ಎದುರಿಸುತ್ತಿರುವ ಮದ್ಯದೊರೆ ವಿಜಯ ಮಲ್ಯ ತಾನು ತಲೆಮರೆಸಿಕೊಂಡಿಲ್ಲ ಹಾಗೂ ನೆಲದ ಕಾನೂನಿಗೆ ಸರಿಯಾಗಿ ನಡೆದುಕೊಳ್ಳುತ್ತಿದ್ದೇನೆಂದು ಹೇಳಿದ್ದಾರೆ.
‘‘ನಾನೋರ್ವ ಅಂತಾರಾಷ್ಟ್ರೀಯ ಉದ್ಯಮಿ. ನಾನು ಭಾರತದಿಂದ ಆಗಾಗ್ಗೆ ವಿದೇಶಗಳಿಗೆ ಪ್ರಯಾಣಿಸುತ್ತಿರುತ್ತೇನೆ. ನಾನು ಭಾರತದಿಂದ ಪರಾರಿಯಾಗಿಲ್ಲ ಅಥವಾ ತಲೆಮರೆಸಿ ಕೊಂಡಿಲ್ಲ’’ ಎಂದವರು ಹೇಳಿ ದ್ದಾರೆ. ನಮ್ಮ ನ್ಯಾಯಾಂಗ ವ್ಯವ ಸ್ಥೆಯು ಬಲಿಷ್ಠವಾಗಿದೆ ಹಾಗೂ ಗೌರ ವಾನ್ವಿತವಾಗಿದೆ.
ಆದರೆ ನನ್ನ ವಿಚಾರಣೆಯನ್ನು ಮಾಧ್ಯಮಗಳು ನಡೆಸುವುದನ್ನು ನಾನು ಒಪ್ಪುವುದಿಲ್ಲವೆಂದು ಅವರು, ಅಜ್ಞಾತ ಸ್ಥಳವೊಂದರಿಂದ ಟ್ವೀಟ್ ಮಾಡಿದ್ದಾರೆ.
ಮಾಧ್ಯಮಗಳನ್ನು ತೀವ್ರವಾಗಿ ಟೀಕಿಸಿರುವ ಅವರು, ‘‘ಒಮ್ಮೆ ಮಾಧ್ಯಮಗಳು ಬೇಟೆ ಆರಂಭಿಸಿದರೆ, ಅದು ಬೆಂಕಿಯ ದಾವಾನಲವಾಗಿ ಮಾರ್ಪಾಡಾಗುತ್ತದೆ. ಅಲ್ಲಿ ಸತ್ಯ ಹಾಗೂ ವಾಸ್ತವಗಳು ಸುಟ್ಟುಬೂದಿಯಾಗುತ್ತದೆ. ನಾನು ಹಲವು ವರ್ಷಗಳಿಂದ ನೀಡಿದ ಸಹಾಯ, ಸಹಕಾರವನ್ನು ಮಾಧ್ಯಮ ದೊರೆಗಳು ಮರೆಯಕೂಡದು. ಈಗ ಅವರು ತಮ್ಮ ಟಿಆರ್‌ಪಿ ಜಾಸ್ತಿ ಮಾಡುವ ಉದ್ದೇಶದಿಂದ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ’’ ಎಂದು ಅವರು ಆರೋಪಿಸಿದರು.
ತನ್ನ ಆಸ್ತಿಗಳ ವಿವರಗಳನ್ನು ತಾನು ಬಹಿರಂಗಪಡಿಸಬೇಕೆಂದು ಆಗ್ರಹಿಸಿ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು ‘‘ಬ್ಯಾಂಕ್‌ಗಳಿಗೆ ನನ್ನ ಸಂಪತ್ತಿನ ವಿವರ ಗಳು ಗೊತ್ತಿಲ್ಲವೇ? ಅಥವಾ ರಾಜ್ಯಸಭಾ ಸದಸ್ಯನಾಗಿ ನಾನು ಘೋಷಿಸಿರುವ ಆಸ್ತಿ ವಿವರಗಳನ್ನು ಅವರು ಪರಿಶೀಲಿಸಿಲ್ಲವೆಂದು ಇದರ ಅರ್ಥವೇ?’’ ಎಂದು ಮಲ್ಯ ಪ್ರಶ್ನಿಸಿದರು.
ವಿವಿಧ ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರೂ. ಸಾಲವನ್ನು ಮರುಪಾವತಿಸದೆ ಇದ್ದುದಕ್ಕಾಗಿ ಕಾನೂನುಕ್ರಮವನ್ನು ಎದುರಿಸುತ್ತಿರುವ ವಿಜಯ ಮಲ್ಯ ಮಾರ್ಚ್ 2ರಂದು ವಿದೇಶಕ್ಕೆ ಪರಾರಿಯಾಗಿದ್ದರು.
ತಾನು ಎಲ್ಲಿರುವೆನೆಂಬ ಬಗ್ಗೆ ಯಾವುದೇ ಮಲ್ಯ ಟ್ವೀಟ್‌ನಲ್ಲಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆಅವರು ಬ್ರಿಟನ್ ರಾಜಧಾನಿ ಲಂಡನ್ ಸಮೀಪದ ಗ್ರಾಮವೊಂದರಲ್ಲಿ ನೆಲೆಸಿದ್ದಾರೆಂದು ನಂಬಲಾಗಿದೆ.







