ನಕಲಿ ಎನ್‌ಕೌಂಟರ್ ಪ್ರಕರಣವನ್ನು ತಿರುಚುತ್ತಿರುವ ಮೋದಿ ಸರಕಾರ
ಸಂಸತ್‌ನಲ್ಲಿ ಕೈ ಗದ್ದಲ
ಇಶ್ರತ್ ಜಹಾನ್ ಹತ್ಯೆ ಪ್ರಕರಣ
ಮುಂಬೈ, ಮಾ.11: ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ತಾನು ಗುರುವಾರ ಮಂಡಿಸಿದ ಸೂಚನಾ ಗೊತ್ತುವಳಿಯ ಮೇಲೆ ಚರ್ಚೆಗೆ ಅವಕಾಶ ನೀಡದಿದ್ದುದು ಘೋರ ಅನ್ಯಾಯವೆಂದು ಕಾಂಗ್ರೆಸ್ ಇಂದು ಲೋಕಸಭೆಯಲ್ಲಿ ಆಪಾದಿಸಿದೆ. ಆದರೆ ಈ ಆರೋಪವನ್ನು ಸರಕಾರ ಹಾಗೂ ಸ್ಪೀಕರ್ ಬಲವಾಗಿ ನಿರಾಕರಿಸಿದ್ದಾರೆ.
ಇಶ್ರತ್ ಜಹಾನ್ ವಿಷಯದ ಕುರಿತ ಚರ್ಚೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡದೆ ಇರುವುದು ಸಮಗ್ರ ಪ್ರತಿಪಕ್ಷಗಳಿಗೆ ಮಾಡಿದ ಘೋರ ಅನ್ಯಾಯವಾಗಿದೆ ಎಂದು ಸದನದಲ್ಲಿ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸದಸ್ಯರ ಗದ್ದಲ ನಡುವೆ ಆರೋಪಿಸಿದರು. ಪ್ರತಿಪಕ್ಷಗಳ ಪಾಲ್ಗೊಳ್ಳುವಿಕೆಯಿಲ್ಲದೆ ನಡೆದ ಚರ್ಚೆಯು ಪೂರ್ವಾಗ್ರಹಪೀಡಿತವಾಗಿದ್ದು, ಹಿಂದಿನ ಯುಪಿಎ ಸರಕಾರ ಹಾಗೂ ಅದರ ನಾಯಕತ್ವದ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡಲಾಗಿದೆ. ಸರಕಾರವು ಪ್ರಕರಣವನ್ನು ಒಂದೇ ಮಗ್ಗುಲಿನಲ್ಲಿ ಬಿಂಬಿಸಿದೆಯೆಂದವರು ಹೇಳಿದರು.
‘‘ಕಾಂಗ್ರೆಸ್ ಹಾಗೂ ಅದರ ನಾಯಕರ ವಿರುದ್ಧ ಹೆಣೆಯಲಾದ ಕಪೋಲ ಕಲ್ಪಿತ ಕಥೆ ಇದಾಗಿದೆ ಎಂದು ಖರ್ಗೆ ಆಪಾದಿಸಿದರು. ಚರ್ಚೆಯ ನಡುವೆ ಪಕ್ಷದ ನಾಯಕರಾದ ವೀರಪ್ಪ ಮೊಯ್ಲಿಯವರು ಕೇಂದ್ರ ಗೃಹ ಸಚಿವರಿಂದ ಸ್ಪಷ್ಟೀಕರಣವೊಂದನ್ನು ಕೇಳಿದಾಗ ಅವರಿಗೆ ಅನುಮತಿಯನ್ನು ನಿರಾಕರಿಸಲಾಯಿತೆಂದು ದೂರಿದರು.
ಆದಾಗ್ಯೂ, ಸಂಸದೀಯ ವ್ಯವಹಾರಗಳ ಸಚಿವ ರಾಜೀವ್ ಪ್ರತಾಪ್ ರೂಢಿ ಕಾಂಗ್ರೆಸ್‌ನ ಆರೋಪವನ್ನು ತಳ್ಳಿಹಾಕಿದರು. ಇಶ್ರತ್ ಜಹಾನ್ ಪ್ರಕರಣದ ಕುರಿತ ಚರ್ಚೆಯಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ಸದಸ್ಯರಿಗೆ ನೋಟಿಸ್ ಜಾರಿಗೊಳಿಸಲಾಗಿತ್ತು. ಆದರೆ ಹಾಗೆ ಮಾಡಲಿಲ್ಲವೆಂದು ರೂಢಿ ತಿಳಿಸಿದರು. ಸಚಿವರ ವಾದಕ್ಕೆ ಸ್ಪೀಕರ್ ಸುಮಿತ್ರಾ ಮಹಾಜನ್ ಕೂಡಾ ಸಹಮತ ವ್ಯಕ್ತಪಡಿಸಿದರು.
ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣದ ಬಗ್ಗೆ ಗುರುವಾರ ಸದನದಲ್ಲಿ ನಡೆದ ಚರ್ಚೆಯಲ್ಲಿ ಕೇಂದ್ರ ಸಚಿವ ರಾಜ್‌ನಾಥ್‌ಸಿಂಗ್ ಅವರು ಈ ಪ್ರಕರಣದಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿಯವರನ್ನು ಸಿಲುಕಿಸಲು ಕಾಂಗ್ರೆಸ್ ಆಳವಾದ ಸಂಚನ್ನು ರೂಪಿಸಿತ್ತೆಂದು ಗೃಹ ಸಚಿವ ರಾಜ್‌ನಾಥ್‌ಸಿಂಗ್ ಆಪಾದಿಸಿದ್ದರು.
ಇಶ್ರತ್‌ಗೆ ಉಗ್ರಗಾಮಿ ಸಂಘಟನೆ ಲಷ್ಕರೆ ತಯ್ಯಿಬಾ ಸಂಘಟನೆಯ ಜೊತೆ ನಂಟಿತ್ತೆಂಬ ವಿಷಯದಲ್ಲಿ ಯುಪಿಎ ಆಡಳಿತವು ಇಬ್ಬಂದಿತನವನ್ನು ಪ್ರದರ್ಶಿಸಿತೆಂದು ಅವರು ಆರೋಪಿಸಿದ್ದರು. ಯುಪಿಎ ಸರಕಾರದ ಗೃಹ ಸಚಿವರು ಕೇಸರಿ ಭಯೋತ್ಪಾದನೆ ಎಂಬ ಪದವನ್ನು ಬಳಸುವ ಮೂಲಕ ಕೋಮುವಾದಕ್ಕೂ ಬಣ್ಣ ಹಚ್ಚಿದ್ದಾರೆಂದು ರಾಜ್‌ನಾಥ್ ಅವರು ಪಿ.ಚಿದಂಬರಂ ಅವರ ಹೆಸರನ್ನು ಉಲ್ಲೇಖಿಸದೆಯೇ ಟೀಕಿಸಿದರು.
ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದ ಆರೋಪಿ ಪಾಕ್ ಮೂಲದ ಅಮೆರಿಕನ್ ಉಗ್ರಗಾಮಿ ಡೇವಿಡ್ ಹೆಡ್ಲಿ ಇತ್ತೀಚೆಗೆ ಹೇಳಿಕೆ ನೀಡಿದ್ದನು. 2009ರ ಆಗಸ್ಟ್ 6ರಂದು ಆಗಿನ ಯುಪಿಎ ಸರಕಾರವು ಸಲ್ಲಿಸಿದ ಮೊದಲ ಅಫಿದಾವಿತ್‌ನಲ್ಲಿ ಕೂಡಾ ಇಶ್ರತ್‌ಗೆ ಲಷ್ಕರೆ ತಯ್ಯಿಬಾದ ಜೊತೆ ನಂಟಿತ್ತೆಂಬುದನ್ನು ದೃಢಪಡಿಸಿದೆಯೆಂದು ಗೃಹಸಚಿವರು ವಾದಿಸಿದರು.





