ದಂಡ ಪಾವತಿಸಲು ಕಾಲಾವಕಾಶ ಕೋರಿದ ರವಿಶಂಕರ್ ಗುರೂಜಿ
ವಿಶ್ವ ಸಂಸ್ಕೃತಿ ಉತ್ಸವ ವಿವಾದ

ಹೊಸದಿಲ್ಲಿ, ಮಾ.11: ದಿಲ್ಲಿಯ ಯಮುನಾ ತೀರದಲ್ಲಿ ಇಂದು ವಿಶ್ವ ಸಂಸ್ಕೃತಿ ಉತ್ಸವ ಆರಂಭಕ್ಕೆ ಮೊದಲು ಭಾರತದ ಅತ್ಯುನ್ನತ ಪರಿಸರ ನ್ಯಾಯಾಲಯವು (ಎನ್‌ಜಿಟಿ) ಆದೇಶಿಸಿರುವ ರೂ. 5 ಕೋಟಿ ದಂಡವನ್ನು ಪಾವತಿಸಲು ತನ್ನಿಂದ ಸಾಧ್ಯವಾಗದೆಂದು ಆಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್‌ರ ಸಂಘಟನೆಯಿಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ತಿಳಿಸಿದೆ.
ಪ್ರಾಥಮಿಕ ಠೇವಣಿಯೆಂದು ರೂ. 25 ಲಕ್ಷ ಇಂದು ಪಾವತಿಸಲಾಗುವುದು. ಉಳಿದ ಹಣವನ್ನು 3 ವಾರಗಳೊಳಗೆ ನೀಡಲಾಗುವುದೆಂದು ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನ ಹೇಳಿದೆ. ಆದಾಗ್ಯೂ, ಯಮುನಾ ನದಿಯ ನೆರೆ ಬಯಲಿನ 1 ಸಾವಿರ ಎಕರೆ ಪ್ರದೇಶದಲ್ಲಿ ತಾವು ನಿರ್ಮಿಸ ಬಯಸಿರುವ ಬಯೋಡೈವರ್ಸಿಟಿ ಪಾರ್ಕ್‌ನ ನಿರ್ಮಾಣ ವೆಚ್ಚಕ್ಕೆ ಈ ರೂ. 5 ಕೋಟಿಯ ಪಾವತಿಯು ಸಲ್ಲಬೇಕೆಂದು ಸಂಘಟಕರು ಆಗ್ರಹಿಸಿದ್ದಾರೆ.
ತಾವು ಜೈಲಿಗೆ ಹೋಗಲು ಸಿದ್ಧರೇ ವಿನಾ ಒಂದು ಪೈಸೆ ದಂಡ ಪಾವತಿಸುವುದಿಲ್ಲ. ತಾವೇನೂ ತಪ್ಪು ಮಾಡಿಲ್ಲವೆಂದು ನಿನ್ನೆ 59ರ ಹರೆಯದ ರವಿಶಂಕರ್ ಹೇಳಿದ್ದರು. ಆದರೆ, ಅಂತಹ ಹೇಳಿಕೆಯನ್ನು ಶ್ರೀ ಶ್ರೀಯವರಂತಹ ಸ್ಥಾನಮಾನದ ವ್ಯಕ್ತಿಯಿಂದ ತಾನು ನಿರೀಕ್ಷಿಸಿರಲಿಲ್ಲವೆಂದು ನ್ಯಾಯಾಲಯ ಪ್ರತಿಕ್ರಿಯಿಸಿತು.
ವೇದಿಕೆಯ ಸೂಕ್ಷ್ಮ ಜೈವಿಕ ವ್ಯವಸ್ಥೆಯನ್ನು ರಕ್ಷಿಸಲು ವಿಫಲವಾದುದಕ್ಕಾಗಿ ಬುಧವಾರ ನ್ಯಾಯಾಧಿಕರಣವು ಸಂಘಟಕರು ಹಾಗೂ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಆ ಬಳಿಕ ಅದು ರೂ. 5 ಕೋಟಿ ದಂಡ ಪಾವತಿಸುವಂತೆ ಆದೇಶಿಸಿ, ಮುಂದೆ ಇನ್ನಷ್ಟು ತೆರಬೇಕಾಗುವುದೆಂಬ ಎಚ್ಚರಿಕೆ ನೀಡಿತ್ತು. ಉತ್ಸವ ಮುಗಿದ ಬಳಿಕ ಉದ್ಯಾನವನ ನಿರ್ಮಿಸಲೇಬೇಕೆಂದು ನ್ಯಾಯಾಧಿಕರಣ ತಾಕೀತು ಮಾಡಿತ್ತು.
ಇನ್ನೀಗ, ಆರ್ಟ್ ಆಫ್ ಲಿವಿಂಗ್ ನ್ಯಾಯಾಲಯಕ್ಕೆ ಕನಿಷ್ಠ ರೂ. 4.75 ಕೋಟಿಗಳನ್ನಾದರೂ ಪಾವತಿಸಲೇಬೇಕಾಗುತ್ತದೆ. ಅದನ್ನು ಕೊಡದಿದ್ದಲ್ಲಿ, ಪ್ರತಿಷ್ಠಾನಕ್ಕೆ ಸಂಸ್ಕೃತಿ ಸಚಿವಾಲಯ ಮಂಜೂರು ಮಾಡಿರುವ ರೂ. 2.5 ಕೋಟಿ ಅನುದಾನದ ಭಾಗ ವನ್ನು ತಾನು ಸಂಗ್ರಹಿಸುವೆನೆಂದು ನ್ಯಾಯಾಧಿಕರಣ ಹೇಳಿದೆ.
ಇಲ್ಲಿ ಯಾವುದೇ ವಿವಾದವಿಲ್ಲ. ರವಿ ಶಂಕರ್ ವಿವಾದ ಗಳನ್ನು ಪರಿಹರಿಸುವುದಕ್ಕೆ ಹೆಸರುವಾಸಿ ಯಾದವರೆಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅಭಿಪ್ರಾಯಿಸಿದ್ದಾರೆ.







