ಪೋಷಕರ ಪಾಲಿಗಿದು ಪರೀಕ್ಷೆಯ ಕಾಲ
ಎಸ್ಸೆಸೆಲ್ಸಿ, ಪಿಯುಸಿ ಪರೀಕ್ಷೆಗಳ ರಣ ದುಂದುಭಿ ಮೊಳಗಿದೆ. ಇಂದಿನಿಂದ ರಾಜ್ಯದಲ್ಲಿ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸ್ತಿದ್ದಾರೆ. ಸುಮಾರು ಆರೂವರೆ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಬರೆಯುತ್ತಿದ್ದಾರೆ. ಮೂರು ಲಕ್ಷಕ್ಕೂ ಅಧಿಕ ವಿದ್ಯಾರ್ಥಿನಿಯರೂ ಈ ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ. ಈ ಬಾರಿ ವಿದ್ಯಾರ್ಥಿಗಳ ಮೇಲಿನ ಕಣ್ಗಾವಲು ವಿಪರೀತವಾಗಿದೆ. ಅವರು ಸೆಂಟ್ರಲ್ ಜೈಲಿನ ಕೈದಿಗಳೋ ಎಂಬಂತೆ ಅವರ ಸುತ್ತ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಚುನಾವಣೆಗಳಲ್ಲಿ ಕ್ಷೇತ್ರಗಳನ್ನು ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಎಂದು ಗುರುತಿಸುವ ಹಾಗೆಯೇ, ಪರೀಕ್ಷಾ ಕೇಂದ್ರಗಳನ್ನೂ ಸೂಕ್ಷ್ಮ, ಅತೀ ಸೂಕ್ಷ್ಮ ಎಂದು ವಿಂಗಡಿಸಲಾಗಿದೆ. 1032 ಪರೀಕ್ಷಾ ಕೇಂದ್ರಗಳಲ್ಲಿ 826 ಸೂಕ್ಷ್ಮ ಹಾಗೂ 155 ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳಿವೆಯಂತೆ. ವಿದ್ಯಾರ್ಥಿಗಳ ಈ ಪರೀಕ್ಷೆಯನ್ನು ನಮ್ಮ ಸರಕಾರ ಎಷ್ಟು ಗಂಭೀರವಾಗಿ ಸ್ವೀಕರಿಸಿದೆ ಎನ್ನುವುದಕ್ಕೆ ಈ ವಿಂಗಡನೆ ಉದಾಹರಣೆಯಾಗಿದೆ. ಶಿಕ್ಷಣ ಸಂಸ್ಥೆಗಳ ನಡುವೆ ತೀವ್ರ ಪೈಪೋಟಿ ಇರುವುದರಿಂದ, ಸರಕಾರ ಮಾತ್ರವಲ್ಲ, ಶಾಲೆಗಳೂ ಪರೀಕ್ಷೆಯನ್ನು ಗಂಭೀರವಾಗಿ ಸ್ವೀಕರಿಸಿವೆ. ವಿದ್ಯಾರ್ಥಿಗಳನ್ನು ಯುದ್ಧಕ್ಕೆ ಸಿದ್ಧವಾಗುವ ಸೈನಿಕರ ರೀತಿ ತರಬೇತಿ ಗೊಳಿಸಿವೆ. ಶಾಲೆಗಳೆಂದರೆ, ನೂರಾರು ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆಯ ಉದ್ಯಮವಾಗಿರುವುದರಿಂದ, ಪರೀಕ್ಷೆಯ ಫಲಿತಾಂಶವೆಂದರೆ, ಹೂಡಿದ ಬಂಡವಾಳದ ಕೊಯ್ಲು. ಅತ್ಯುತ್ತಮ ಫಲಿತಾಂಶಗಳನ್ನು ಪಡೆದದ್ದೇ ಆದಲ್ಲಿ, ಡೊನೇಶನ್‌ಗಳನ್ನು ಹೆಚ್ಚಿಸಬಹುದು. ಬೇರೆ ಬೇರೆ ರೀತಿಯಲ್ಲಿ ವಿದ್ಯಾರ್ಥಿಗಳ ಪೋಷಕರನ್ನು ಬ್ಲಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡಬಹುದು. ಒಟ್ಟಿನಲ್ಲಿ, ಇತರ ಶಾಲೆಗಳಿಂದ ವಿದ್ಯಾರ್ಥಿಗಳನ್ನು ಕಸಿದುಕೊಳ್ಳಬಹುದು. ಆದುದರಿಂದಲೇ ಹೆಚ್ಚು ಹೆಚ್ಚು ಅಂಕಗಳನ್ನು ಗಳಿಸಲು ವಿದ್ಯಾರ್ಥಿಗಳನ್ನು ತರಬೇತುಗೊಳಿಸಲಾಗುತ್ತದೆ. ವಿದ್ಯಾರ್ಥಿಗಳನ್ನು ಎಷ್ಟರ ಮಟ್ಟಿಗೆ ಪ್ರತಿಭಾವಂತರಾಗಿಸುತ್ತೀರಿ ಎನ್ನುವುದಕ್ಕಿಂತ ವಿದ್ಯಾರ್ಥಿಗಳು ಎಷ್ಟರ ಮಟ್ಟಿಗೆ ಅಂಕಗಳನ್ನು ಪಡೆಯಲು ತರಬೇತುಗೊಳಿಸುತ್ತೀರಿ ಎನ್ನುವುದು ಪ್ರಾಧ್ಯಾಪಕರಿಗೆ ಆಡಳಿತ ಮಂಡಳಿ ನೀಡುವ ಆದೇಶವಾಗಿರುತ್ತದೆ. ತಮ್ಮ ತಮ್ಮ ಪಠ್ಯಗಳಲ್ಲಿ ಹೆಚ್ಚು ಹೆಚ್ಚು ಅಂಕಗಳನ್ನು ಗಳಿಸುವಂತೆ ಮಾಡುವುದು ಪ್ರಾಧ್ಯಾಪಕರ ಅತಿದೊಡ್ಡ ಹೊಣೆಗಾರಿಕೆಯಾಗಿರುತ್ತದೆ. ಇಲ್ಲವಾದರೆ, ಅವರ ವೃತ್ತಿಗೇ ಕುತ್ತು ಬರಬಹುದು. ಆದುದರಿಂದ ಅವರೂ ವಿದ್ಯಾರ್ಥಿಗಳ ಮೇಲೆ ಹದ್ದಿನ ಕಣ್ಣುಗಳನ್ನು ನೆಟ್ಟಿರುತ್ತಾರೆ. ಇನ್ನು ಪೋಷಕರ ಸ್ಥಿತಿಯೋ ಚಿಂತಾಜನಕ. ಪರೀಕ್ಷೆ ಬರೆಯುವುದು ಮಕ್ಕಳೇ ಆಗಿದ್ದರೂ, ಅದನ್ನು ತಲೆಯಲ್ಲಿ ಹೊತ್ತು ಓಡಾಡುವುದು ಪೋಷಕರು. ಕಚೇರಿಗಳಿಗೆ ರಜೆ ಘೋಷಿಸಿ, ಮದುವೆ, ಮುಂಜಿ ಮೊದಲಾದ ಕಾರ್ಯಕ್ರಮಗಳನ್ನು ತ್ಯಜಿಸಿ, ಮನೆಯ ಟಿವಿಯ ಕೇಬಲ್ ಸಂಪರ್ಕವನ್ನು ಕಿತ್ತು ಮಕ್ಕಳ ಹಿಂದೆ, ಮುಂದೆ ಕಮಾಂಡೋಗಳಂತೆ ಓಡಾಡುತ್ತಿರುತ್ತಾರೆ. ಮಗ ಒಂದಿಷ್ಟು ನಿದ್ದೆ ಮಾಡಿದರೆ, ಮೈದಾನದಲ್ಲಿ ಕ್ರಿಕೆಟ್ ಆಡಿದರೆ, ಆಕಾಶ ಭೂಮಿ ಒಂದು ಮಾಡುತ್ತಾರೆ. ‘ಓದು ಓದು ಓದು’ ಪದಗಳಲ್ಲದೆ ಪೋಷಕರ ಬಾಯಿಯಲ್ಲಿ ಇನ್ನೊಂದು ಪದ ಹೊರ ಬೀಳುವುದಿಲ್ಲ. ಅಂತಿಮವಾಗಿ ಈ ಪರೀಕ್ಷೆ ವಿದ್ಯಾರ್ಥಿಗಳದ್ದಾಗಿರುವುದಿಲ್ಲ. ವಿದ್ಯಾಸಂಸ್ಥೆ, ಶಿಕ್ಷಕರು ಮತ್ತು ಪೋಷಕರ ಪಾಲಿನ ಪರೀಕ್ಷೆಯಾಗಿ ಪರಿವರ್ತನೆಯಾಗುತ್ತದೆ. ಆದರೆ ಪರೀಕ್ಷೆಯನ್ನು ಬರೆಯುವುದು, ಅದರ ಸಕಲ ಒತ್ತಡವನ್ನು ಅನುಭವಿಸುವುದು ಮಾತ್ರ ವಿದ್ಯಾರ್ಥಿ. ಈ ಒತ್ತಡ ವಿದ್ಯಾರ್ಥಿಗಳ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳ ಬಗ್ಗೆ ಯಾರಿಗೂ ಗಮನವಿಲ್ಲ. ಪರೀಕ್ಷೆ ಹತ್ತಿರ ಬರುತ್ತಿರುವಂತೆಯೇ ವಿದ್ಯಾರ್ಥಿಗಳಲ್ಲಿ ಅನಾರೋಗ್ಯ ತಲೆದೋರುವುದು ಮುಖ್ಯವಾಗಿ ಮಾನಸಿಕವಾಗಿ ಅಸ್ವಸ್ಥರಾಗುವವರ ಸಂಖ್ಯೆ ಹೆಚ್ಚುತ್ತಿವೆ. ಅಷ್ಟೇ ಅಲ್ಲ, ಹೆಚ್ಚಿನವರು ಪ್ರತಿಭಾವಂತರಾಗಿದ್ದರೂ, ಪರೀಕ್ಷೆಯಲ್ಲಿ ಸರಿಯಾಗಿ ಅಂಕ ಪಡೆಯದೇ ಇರುವುದಕ್ಕೂ ಅವರು ಎದುರಿಸುವ ಒತ್ತಡಗಳು ಕಾರಣವಾಗಿವೆ. ಎಲ್ಲಕ್ಕಿಂತ ದೊಡ್ಡ ದುರಂತವೆಂದರೆ, ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವುದು. ಮಾರ್ಚ್, ಎಪ್ರಿಲ್ ತಿಂಗಳು ವಿದ್ಯಾರ್ಥಿಗಳ ಆತ್ಮಹತ್ಯೆಗಳಿಗೆ ಕುಖ್ಯಾತವಾದ ತಿಂಗಳುಗಳಾಗಿವೆ. ಸಾಧಾರಣವಾಗಿ ರೈತರು ಸಾಲದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡರೆ ಅದು ಮಾಧ್ಯಮಗಳಿಗೆ ಚರ್ಚೆಯ ವಿಷಯವಾಗುತ್ತದೆ. ರಾಜಕಾರಣಿಗಳೂ ಅದನ್ನು ಮುಂದಿಟ್ಟುಕೊಂಡು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಾರೆ. ಆದರೆ ವಿದ್ಯಾರ್ಥಿಗಳ ಆತ್ಮಹತ್ಯೆ ಯಾವುದೇ ಚರ್ಚೆಯನ್ನು ಈವರೆಗೆ ಹುಟ್ಟು ಹಾಕಿಲ್ಲ. ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡರೆ, ‘ಪರೀಕ್ಷೆಯಲ್ಲಿ ಅನುತ್ತೀರ್ಣ: ನೊಂದ ವಿದ್ಯಾರ್ಥಿ ಆತ್ಮಹತ್ಯೆ’ ಎಂಬ ಎರಡು ಸಾಲುಗಳಲ್ಲಿ ವಿಷಯ ಮುಗಿದು ಹೋಗುತ್ತದೆ. ಆದರೆ ಆತನನ್ನು ಆತ್ಮಹತ್ಯೆಯ ಕಡೆಗೆ ತಳ್ಳಿದವರು ಯಾರು? ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡರೆ, ನಿನ್ನ ಬದುಕು ಮುಗಿದೇ ಹೋಯಿತು ಎಂದು ಆತನ ತಲೆಗೆ ತುಂಬಿದವರು ಯಾರು? ಆತ್ಮಹತ್ಯೆಗೆ ಒಬ್ಬನನ್ನು ಅದರಲ್ಲೂ ಎಳೆಯ ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು ಅಪರಾಧವಲ್ಲವೇ? ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡರೆ, ಅದರಲ್ಲಿ ಆಡಳಿತ ಮಂಡಳಿ, ಪೋಷಕರ ಪಾಲು ಬಹುದೊಡ್ಡದಿರುತ್ತದೆ. ತಮ್ಮ ದುರಾಸೆಗಾಗಿ ವಿದ್ಯಾರ್ಥಿಯೊಳಗೆ ಅನಗತ್ಯ ತಪ್ಪು ಕಲ್ಪನೆಗಳನ್ನು ಹುಟ್ಟು ಹಾಕಿ, ಆತನ ಮೇಲೆ ಆತನಿಗೆ ಅಸಾಧ್ಯವಾಗುವ ಒತ್ತಡಗಳನ್ನು ಹೇರಿ, ಅವನನ್ನು ಪರೋಕ್ಷವಾಗಿ ಇವರು ಕೊಲೆಗೈದಿರುತ್ತಾರೆ. ಒಂದು ವೇಳೆ, ಆತ ಈ ಎಲ್ಲ ಒತ್ತಡಗಳ ನಡುವೆ ಬದುಕಿ ಉಳಿದರೂ, ಅವನೊಳಗಿನ ಸೃಜನಶೀಲತೆಯನ್ನು ಅವರು ಸಂಪೂರ್ಣ ಹೀರಿ, ಹಿಂಡಿ, ಹಿಪ್ಪೆ ಮಾಡಿ ಬಿಟ್ಟಿರುತ್ತಾರೆ. ವಿದ್ಯಾರ್ಥಿಗಳೆಂದರೆ, ಅಂಕಗಳನ್ನು ದುಡಿದು ತರುವ ಬಾಲಕಾರ್ಮಿಕರೇ ಆಗಿದ್ದಾರೆ ಪೋಷಕರ ಪಾಲಿಗೆ. ವಿದ್ಯಾರ್ಥಿಗಳೆಂದರೆ ಪ್ರಯೋಗ ಪಶುಗಳಲ್ಲ. ಅಥವಾ ಯಾರದೋ ಕನಸುಗಳಿಗೆ ಬಲಿಯಾಗಬೇಕಾದ ಬಲಿಪಶುಗಳೂ ಅಲ್ಲ. ವಿದ್ಯಾರ್ಥಿಗಳೆಂದರೆ, ನಮ್ಮ ಸಮಾಜದ ಭವಿಷ್ಯ. ಅವರಲ್ಲಿ ಇರುವ ಪ್ರತಿಭೆಗಳನ್ನು ಗುರುತಿಸಿ ಅವುಗಳಿಗೆ ನೀರೆರೆಯುವುದು ವಿದ್ಯಾಸಂಸ್ಥೆಗಳ ಕರ್ತವ್ಯವಾಗಬೇಕು. ಅಂಕಗಳು ಬರೇ ಪದವೀಧರರನ್ನು ಮಾತ್ರ ಸೃಷ್ಟಿ ಮಾಡಬಲ್ಲವು. ಅಂಕಗಳು ಪ್ರತಿಭಾವಂತರನ್ನು ಸೃಷ್ಟಿಸಲಾರವು. ಒಬ್ಬ ವಿಜ್ಞಾನಿ, ಒಬ್ಬ ಸಾಹಿತಿ, ಒಬ್ಬ ಕೃಷಿಕ, ಕಲಾವಿದರನ್ನು ಅಂಕಗಳು ಸೃಷ್ಟಿ ಮಾಡಲಾರವು. ಬದಲಿಗೆ ಅಂಕಗಳ ಮೇಲಿರುವ ದುರಾಸೆ ಒಬ್ಬ ಅತ್ಯುತ್ತಮ ಪ್ರತಿಭಾವಂತನನ್ನು, ಭವಿಷ್ಯದ ವಿಜ್ಞಾನಿ, ಸಾಹಿತಿ, ಕೃಷಿಕರನ್ನು ನಾಶ ಮಾಡಬಲ್ಲವು. ಪರೀಕ್ಷೆಗಳಲ್ಲಿ ಫೇಲಾದವರು ಬದುಕಿನ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಬಲ್ಲರು. ಈ ದೂರದೃಷ್ಟಿಯನ್ನು ಇಟ್ಟುಕೊಂಡು ತಮ್ಮ ತಮ್ಮ ಮಕ್ಕಳನ್ನು ಪೋಷಕರು ಪರೀಕ್ಷೆಗೆ ಸಜ್ಜುಗೊಳಿಸಬೇಕಾಗಿದೆ. ಹಾಗೆಯೇ ಅನುತ್ತೀರ್ಣದ ಭಯವಿರುವ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ತುಂಬಿ, ಅವರನ್ನು ಅನಂತರದ ಬದುಕಿಗೆ ಸಜ್ಜುಗೊಳಿಸುವುದು ಅಧ್ಯಾಪಕರು, ಪೋಷಕರ ಕರ್ತವ್ಯವಾಗಿದೆ.





