ರೈತರ ಆತ್ಮಹತ್ಯೆ ತಡೆಗೆ ಕ್ರಮ: ರಾಧಾಮೋಹನ್ ಸಿಂಗ್

ಹೊಸದಿಲ್ಲಿ, ಮಾ.11: ಬೆಳೆ ಉತ್ಪಾದನೆ ಹೆಚ್ಚಿಸುವುದಷ್ಟೇ ರೈತರ ಆತ್ಮಹತ್ಯೆ ತಡೆಗಿರುವ ಏಕೈಕ ಪರಿಹಾರವಲ್ಲ. ಆದರೆ, ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆಯಂತಹ ಕಾರ್ಯಕ್ರಮಗಳು ರೈತರನ್ನು ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ತಡೆಯಬಹುದೆಂದು ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ರಾಜ್ಯ ಸಭೆಯಲ್ಲಿಂದು ಅಭಿಪ್ರಾಯಿಸಿದ್ದಾರೆ.
ಉತ್ತಮ ಬೆಲೆಗೆ ತಮ್ಮ ಉತ್ಪನ್ನಗಳನ್ನು ಮಾರಲು ರೈತರಿಗೆ ಅನುಕೂಲವಾಗುವಂತೆ ಎ.14ರಂದು ಸ್ಥಾಪಿಸಲಾಗುವ ರಾಷ್ಟ್ರವ್ಯಾಪಿ ಇ-ಮಂಡಿ ಸೇರಿದಂತೆ ಸರಕಾರ ಕೈಗೊಂಡಿರುವ ಅನೇಕ ಕ್ರಮಗಳನ್ನು ಪಟ್ಟಿ ಮಾಡಿದ ಅವರು, ಬೆಳೆಗಳಿಂದ ಉತ್ಪಾದನೆಯನ್ನು ಹೆಚ್ಚಿಸುವುದರ ಜೊತೆಗೆ, ರೈತರ ನಿವ್ವಳ ಆದಾಯ ವೃದ್ಧಿಯಾದಲ್ಲಿ ರೈತರ ಕಲ್ಯಾಣ ಸುಧಾರಿಸುವುದೆಂಬುದು ಸರಕಾರದ ವಿಶ್ವಾಸವಾಗಿದೆ ಎಂದರು.
ಇದನ್ನು ಗಮನದಲ್ಲಿರಿಸಿ, ಹೆಚ್ಚು ಉತ್ಪಾದನೆ ಸಾಧ್ಯವಾಗಿಸುವುದರ ಜೊತೆಗೆ ಕೃಷಿಯ ವೆಚ್ಚವನ್ನು ಕಡಿಮೆ ಮಾಡುವುದು ಹಾಗೂ ರೈತರ ಉತ್ಪನ್ನಗಳಿಗೆ ಸೂಕ್ತ ಪ್ರತಿಫಲ ದೊರೆಯುವುದನ್ನು ಖಚಿತಪಡಿಸುವುದು ಸರಕಾರದ ಯೋಜನೆಯಾಗಿದೆಯೆಂದು ಸಿಂಗ್ ಹೇಳಿದರು.
ಪ್ರಶ್ನಾವಧಿಯಲ್ಲಿ ಮಾತ ನಾಡಿದ ಅವರು, ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆ, ಬೇವು ಲೇಪಿತ ಯುರಿಯಾದ ಬಳಕೆಯನ್ನು ಉತ್ತೇಜಿಸುವುದು, ಪರಂಪರಾಗತ ಕೃಷಿ ವಿಕಾಸ ಯೋಜನೆಯ ಅನುಷ್ಠಾನ ಹಾಗೂ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಗಳು ಇತ್ಯಾದಿ ಈ ದಿಸೆಯಲ್ಲಿ ಮಹತ್ವದ ಕ್ರಮಗಳಾಗಿವೆಯೆಂದು ತಿಳಿಸಿದರು.
ಭಾರತದಲ್ಲಿ ಬೆಳೆಸಲಾಗುವ ಹೆಚ್ಚಿನ ಕೃಷಿಗಳ ತಲಾ ಹೆಕ್ಟೇರ್ ಉತ್ಪಾದನೆಯು, ಚೀನಾ, ಯುರೋಪ್‌ನ ಅನೇಕ ದೇಶಗಳು ಹಾಗೂ ಅಮೆರಿಕಗಳಿಗೆ ಹೋಲಿಸಿದರೆ ಬಹಳ ಕಮ್ಮಿಯಿದೆ. ಉತ್ಪಾದನೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿ ಸಲು ಮತ್ತು ರೈತರ ಆದಾಯ ಮಟ್ಟವನ್ನು ಸುಧಾರಿಸಲು ಸರಕಾರವು ರಾಜ್ಯ ಸರಕಾರಗಳ ಮೂಲಕ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆಯೆಂದು ಅವರು ಹೇಳಿದರು.
ಈ ವರ್ಷ ಬರಗಾಲವಿದ್ದ ಹೊರತಾಗಿಯೂ ಅಂದಾಜು ಕೃಷಿ ಉತ್ಪನ್ನ ಹೆಚ್ಚಿದೆ. ರಾಜ್ಯಗಳ ಕೃಷಿ ಮಾರುಕಟ್ಟೆ ಕಾನೂನುಗಳ ಬದಲಾವಣೆಗಾಗಿ ಅವುಗಳೊಂದಿಗೆ ಕೇಂದ್ರ ಸಮಾಲೋಚನೆ ನಡೆಸುತ್ತಿದೆ. ಈ ಸಂಬಂಧ 11 ರಾಜ್ಯಗಳು 200 ಸಲಹೆಗಳನ್ನು ಕಳುಹಿಸಿವೆ. ಕೃಷಿಕರಿಗೆ ತಮ್ಮ ಉತ್ಪಾದನೆಗಳನ್ನು ಯೋಗ್ಯ ಬೆಲೆಗೆ ಮಾರಲು ಸಹಾಯವಾಗುವಂತೆ ಎ.14ರಂದು ದೇಶವ್ಯಾಪಿ ಇ-ಮಂಡಿಯೊಂದನ್ನು ಸ್ಥಾಪಿಸಲಾಗುವುದು. ಪಂಜಾಬ್‌ನ ಹೊರತು ಹೆಚ್ಚಿನ ರಾಜ್ಯಗಳು ಈ ಸಂಬಂಧ ತಮ್ಮ ಕಾನೂನುಗಳ ಬದಲಾವಣೆಗೆ ಒಪ್ಪಿಕೊಂಡಿದೆಯೆಂದು 2022ರ ಒಳಗೆ ರೈತರಿಗೆ ಆದಾಯ ದುಪ್ಪಟ್ಟುಗೊಳಿಸಲು ಸಹಾಯಕವಾಗುವ ಕ್ರಮಗಳ ಬಗ್ಗೆ ಸಿಂಗ್ ವಿವರಿಸಿದರು.







