ಶೇ. 97ರಷ್ಟು ಪ್ರೌಢರಲ್ಲಿ ಆಧಾರ್: ಜೇಟ್ಲಿ

ಹೊಸದಿಲ್ಲಿ, ಮಾ.11: ಭಾರತದ ಶೇ. 97ರಷ್ಟು ಪ್ರೌಢರು ಈಗ ಆಧಾರ್ ಕಾರ್ಡ್ ಪಡೆದಿದ್ದಾರೆ. ತಾನು ಲೋಕಸಭೆಯಲ್ಲಿ ಮಂಡಿಸಿರುವ ಮಸೂದೆಯು, ಸರಕಾರದ ಸಬ್ಸಿಡಿಗಳು ಹಾಗೂ ಸೇವೆಗಳು ಸಂಪೂರ್ಣವಾಗಿ ಹಾಗೂ ನೇರವಾಗಿ ಫಲಾನುಭವಿಗಳಿಗೆ ತಲುಪುವಂತೆ ದೂರಗಾಮಿಯಾಗಿ ಖಚಿತಪಡಿಸಲಿದೆಯೆಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಇಂದು ಹೇಳಿದ್ದಾರೆ.
ಆಧಾರ್ (ಆರ್ಥಿಕ ಮತ್ತಿತರ ಸಬ್ಸಿಡಿಗಳು, ಲಾಭಗಳು ಹಾಗೂ ಸೇವೆಗಳ ಪೂರೈಕೆ ಗುರಿ) ಮಸೂದೆ-2016ರ ಮೇಲೆ ಚರ್ಚೆಗೆ ಚಾಲನೆ ನೀಡಿದ ಅವರು, ಆಧಾರ್ ಕಾರ್ಡ್‌ಗೆ ಒದಗಿಸಲಾಗಿರುವ ವ್ಯಕ್ತಿಗತ ವಿವರಗಳು ಯಾವುದೇ ರೀತಿಯೂ ದುರುಪಯೋಗವಾಗಲಾರದೆಂದು ಸದಸ್ಯರಿಗೆ ಭರವಸೆ ನಿಡಿದರು.
ಈ ಮಸೂದೆಯನ್ನು ಜೇಟ್ಲಿ, ಮಾ.3ರಂದು ಲೋಕಸಭೆಯಲ್ಲಿ ಮಂಡಿಸಿದ್ದರು.
ಭಾರತದಲ್ಲಿ ವಾಸಿಸುತ್ತಿರುವವರಿಗೆ ಆಧಾರ್ ಎಂದು ಕರೆಯಲ್ಪಡುವ ವಿಶಿಷ್ಟ ಗುರುತು ಸಂಖ್ಯೆಗೆ ಸಂಯೋಜಿಸುವ ಮೂಲಕ ಸೇವೆಗಳನ್ನು ಒದಗಿಸಲು ಸರಕಾರಕ್ಕೆ ಕಾನೂನಿನ ಬಲ ನೀಡಲು ಈ ಮಸೂದೆ ಉದ್ದೇಶಿಸಿದೆ. ಅರ್ಜಿ ಸಲ್ಲಿಸುವ ದಿನಾಂಕದ ಹಿಂದಿನ ಒಂದು ವರ್ಷದಲ್ಲಿ 182 ದಿನಗಳ ಕಾಲ ಭಾರತದಲ್ಲಿ ವಾಸಿಸಿರುವ ಪ್ರತಿಯೊಬ್ಬನಿಗೂ ಆಧಾರ್ ಕಾರ್ಡ್ ನೀಡಲಾಗುವುದು.
ಕಾಂಗ್ರೆಸ್‌ನ ವಿರೋಧದ ನಡುವೆಯೂ ಜೇಟ್ಲಿ, ಅದನ್ನು ಆರ್ಥಿಕ ಮಸೂದೆಯನ್ನಾಗಿ ಪರಿವರ್ತಿಸುವ ಕ್ರಮವನ್ನು ಸಮರ್ಥಿಸಿಕೊಂಡರು. 2010ರಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಪ್ರಾಯೋಗಿಕವಾಗಿ ಮಂಡಿಸಿದ್ದ ಹಿಂದಿನ ಮಸೂದೆ, ಅದನ್ನು ಆರ್ಥಿಕ ಮಸೂದೆ ಎಂದಿರಲಿಲ್ಲವೆಂದು ಲೋಕಸಭೆಯಲ್ಲಿ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪಿಸಿದರು.
ಆಳುವ ಮೈತ್ರಿಕೂಟ ಬಹುಮತ ಹೊಂದಿರದ ರಾಜ್ಯಸಭೆಯಲ್ಲಿ ಕರಡು ಮಸೂದೆಗೆ ಆತಂಕ ಉಂಟಾಗಬಹುದೆಂಬ ಶಂಕೆಯಿಂದ ಸರಕಾರ ಅದನ್ನು ಆರ್ಥಿಕ ಮಸೂದೆಯೆಂದು ಕರೆಯಬಯಸಿದೆಯೆಂದು ಅವರು ಆರೋಪಿಸಿದರು.
ಆದರೆ ಹೊಸ ಮಸೂದೆಯು, 2010ರಲ್ಲಿ ಮನಮೋಹನ್ ಸಿಂಗ್ ಸರಕಾರ ಮಂಡಿಸಿದ ಮಸೂದೆಯಂತಿಲ್ಲ. ಇದು ಸರಕಾರವು ಫಲಾ ನುಭವಿಗಳಿಗಾಗಿ ಖರ್ಚು ಮಾಡುವ ಹಣದ ಮೇಲೆ ಪ್ರಧಾನವಾಗಿ ದೃಷ್ಟಿ ಕೇಂದ್ರೀ ಕರಿಸಿದೆಯೇ ಹೊರತು, ಕೇವಲ ಗುರುತು ದಾಖಲೆ ಯಂತಲ್ಲವೆಂದು ಜೇಟ್ಲಿ ಹೇಳಿದರು.
ಈ ಮಸೂದೆ ಒಂದು ಪ್ರಾಥಮಿಕ ದೃಷ್ಟಿಯುಳ್ಳದ್ದಾಗಿದೆ. ಅದೆಂದರೆ- ಯಾರೂ ಭಾರತದ ನಿಧಿಯಿಂದ- ಅದು ರಾಜ್ಯ ಸರಕಾರ ಗಳಿರಬಹುದು, ಕೇಂದ್ರ ಸರಕಾರವಿರಬಹುದು ಅಥವಾ ಇತರ ಸಂಸ್ಥೆ ಗಳಿರಬಹುದು ಲಾಭವನ್ನು ಪಡೆಯುವ ಯಾರೇ ಆಗಲಿ, ಆಧಾರ್ ಕಾರ್ಡ್ ಹೊಂದಲು ಅರ್ಹನಿರುತ್ತಾನೆ ಎಂದವರು ತಿಳಿಸಿದರು.
ಶೇ.67ರಷ್ಟು ಮಕ್ಕಳು ಸಹ ಆಧಾರ್ ಕಾರ್ಡ್ ಪಡೆದಿದ್ದು, ಪ್ರತೀ ನಿತ್ಯ 5-7 ಲಕ್ಷ ಜನರು ಈ ವ್ಯವಸ್ಥೆಗೆ ಸೇರ್ಪಡೆಯಾಗುತ್ತಿದ್ದಾರೆಂದು ಜೇಟ್ಲಿ ಹೇಳಿದರು.





