ಮಂಗಳೂರು: ಕರಾಮುವಿವಿ ಸಮಸ್ಯೆ ಶೀಘ್ರದಲ್ಲೆ ಪರಿಹಾರ:ಟಿ.ಬಿ.ಜಯಚಂದ್ರ
ಮಂಗಳೂರು,ಮಾ.12: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪದವಿ ಪ್ರವೇಶಕ್ಕೆ ಸಂಬಂಧಪಟ್ಟಂತೆ ಇರುವ ಕಾನೂನಾತ್ಮಕ ಸಮಸ್ಯೆಯನ್ನು ಮುಂದಿನ ಅಧಿವೇಶನದಲ್ಲಿ ತಿದ್ದುಪಡಿ ಮಾಡಿ ಸರಿಪಡಿಸಲಾಗುವುದು ಎಂದು ಕಾನೂನು ಮತ್ತು ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಆಗಿರುವ ಸಮಸ್ಯೆಯಿಂದ ಸಮಸ್ಯೆಗೊಳಗಾಗಿರುವ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಅವಕಾಶವನ್ನು ಕೊಡುವ ಚಿಂತನೆಯಿದೆ. ಸಂಯೋಜನ ಮಂಡಳಿ ಈಗಾಗಲೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.ನಿಯಾಮವಳಿಯಂತೆ ಮುಕ್ತ ವಿಶ್ವವಿದ್ಯಾನಿಲಯಗಳು ಹೊರರಾಜ್ಯಗಳ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಅವಕಾಶವಿಲ್ಲದೆ ಇರುವುದರಿಂದ ರಾಜ್ಯ ದಿಂದ ಹೊರಗಿನವರಿಗೆ ಪ್ರವೇಶ ನೀಡುವುದನ್ನು ನಿಲ್ಲಿಸಲಾಗುವುದು ಮತ್ತು ಹೊರ ರಾಜ್ಯದ ಮುಕ್ತ ವಿಶ್ವವಿದ್ಯಾನಿಲಯಗಳು ರಾಜ್ಯದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.





