ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ

ಬೆಂಗಳೂರು,ಮಾ,12 : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ. ಏನೇ ಆದರೂ ತಾವು ಹಾಗೂ ಕುಮಾರಸ್ವಾಮಿ ರಾಜಕೀಯ ನಿವೃತ್ತಿ ಪಡೆಯುವ ಪ್ರಶ್ನೆಯೇ ಇಲ್ಲ ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ
ಮಾತನಾಡಿದ ಅವರು, ಚುನಾವಣೆಗೆ ಸ್ಪರ್ಧಿಸುವುದು ಅಧಿಕಾರಕ್ಕಾಗಿ, ಸಾರಥ್ಯ ವಹಿಸುವುದು ಪಕ್ಷ ಸಂಘಟನೆಗೆ. ಮುಂದಿನ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ. ಕುಮಾರಸ್ವಾಮಿ 2018 ಚುನಾವಣೆಯಲ್ಲಿ ಪಕ್ಷ ಗೆಲ್ಲದಿದ್ದರೆ ನಾನೂ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಆ ಬಗ್ಗೆ ಈಗಲೇ ಊಹಿಸಲು ಸಾಧ್ಯವಿಲ್ಲ ಎಂದು ಹೇಳಿದರು. ನಾನಾಗಲಿ, ಕುಮಾರಸ್ವಾಮಿಯಾಗಲಿ ಚುನಾವಣೆಗೆ ಸ್ಪರ್ಧೆ ಮಾಡದಿದ್ದರೂ ಪಕ್ಷ ಕಟ್ಟುವ ಕೆಲಸದಲ್ಲಿ ನಿರಂತರವಾಗಿರುತ್ತೇವೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಅಧಿಕಾರ ಹೊಂದಾಣಿಕೆಗೆ ಸಂಬಂಧಿಸಿದಂತೆ, ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಪಕ್ಷದ ಸ್ಥಳೀಯ ಮುಖಂಡರು ಹಾಗೂ ಸ್ಥಳೀಯ ಶಾಸಕರಿಗೆ ಬಿಡಲಾಗಿದೆ ಎಂದು ಸ್ಪಷ್ಟಪಡಿಸಿದರು. ತುಮಕೂರಿನಲ್ಲಿ ಕಾಂಗ್ರೆಸ್, ಮೈಸೂರಿನಲ್ಲಿ ಬಿಜೆಪಿ, ರಾಯಚೂರಿನಲ್ಲಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಅಭಿಪ್ರಾಯಗಳು ಕೇಳಿಬಂದಿವೆ. ಸ್ಥಳೀಯ ಮುಖಂಡರು ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ. ಸನ್ನಿವೇಶಕ್ಕೆ ತಕ್ಕಂತೆ ಹೊಂದಾಣಿಕೆಯಾಗಲಿದೆ. ಜೆಡಿಎಸ್ ನ ಕೆಲ ಶಾಸಕರು ಠಿ ಮೀಸಲಾತಿ ವಿಚಾರ ಚರ್ಚಿಸಲು ಮುಖ್ಯಮಂತ್ರಿ ಮನೆಗೆ ಹೋಗಿದ್ದರು ಅಷ್ಟೆ. ಅದಕ್ಕೆ ಬೇರೇ ಅರ್ಥ ಕಲ್ಪಿಸೋದು ಬೇಕಿಲ್ಲ ಎಂದರು. ಇದೇ 19 ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಜೆಡಿಎಸ್ ಸಭೆ ನಡೆಯಲಿದೆ. ಚುನಾವಣೆಯಲ್ಲಿ ಗೆದ್ದಿರುವ ಸೋತಿರುವ ಅಭ್ಯರ್ಥಿಗಳು, ಶಾಸಕರು ಸಂಸದರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಚುನಾವಣಾ ಫಲಿತಾಂಶದಿಂದ ಕಾರ್ಯಕರ್ತರು. ಕುಗ್ಗಿದ್ದಾರೆ. ಕಾರ್ಯಕರ್ತರನ್ನು ಹುರಿದುಂಬಿಸುವ ನಿಟ್ಟಿನಲ್ಲಿ ಹಾಗೂ ಪಕ್ಷದ ಸಂಘಟನೆಗಾಗಿ ಇದೇ 26ರಿಂದ ರಾಜ್ಯಾದ್ಯಂತ ತಾವು ಪ್ರವಾಸ ಕೈಗೊಳ್ಳುವುದಾಗಿ ಹೇಳಿದರು. ಚುರುಕಿನಿಂದ ಕೆಲಸ ಮಾಡುವ ಹುಡುಗರಿಗೆ ಹೆಚ್ಚಿನ ಜವಾಬ್ದಾರಿ ಕೊಡುತ್ತೇವೆ. ಚುನಾವಣೆಗೆ ಸ್ಪರ್ಧಿಸುವುದು ಗೆಲ್ಲಬೇಕು ಎನ್ನುವ ಕಾರಣದಿಂದ. ನೀಡುವುದು ಪಕ್ಷ ಉಳಿಸಲು. ಆದರೆ ನಮ್ಮಲ್ಲಿ ಕೆಲವೊಂದು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದು, ಇವುಗಳನ್ನು ಬಗೆಹರಿಸಲು ಹೆಚ್ಚು ಒತ್ತು ನೀಡಲಾಗುವುದು ಎಂದರು. ಮತ್ತೆ ತಾವು ಕೇಂದ್ರ ರಾಜಕೀಯಕ್ಕೆ ಹೋಗಲ್ಲ. ಅಷ್ಟೇ ಅಲ್ಲದೇ ಮತ್ತೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ದೇವೇಗೌಡರು ಸ್ಪಷ್ಟಪಡಿಸಿದರು.
ಸಂಸತ್ತಿನಲ್ಲಿ ರೈತರ ಬಗ್ಗೆ ಚರ್ಚಿಸಲು ಹೆಚ್ಚಿನ ಸಮಯ ಕೇಳಿದ್ದೇನೆ. ಸಭಾಧ್ಯಕ್ಷರು ಸಹ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ರೈತರ ಸಮಸ್ಯೆ ಕಾಂಗ್ರೆಸ್, ಬಿಜೆಪಿ ಅಧಿಕಾರದಲ್ಲಿದ್ದರೂ ಸಮಸ್ಯೆ ಪರಿಹರಿಸಿಲ್ಲ. ಪ್ರಧಾನಿಗಳಿಗೆ ಲಿಖಿತವಾಗಿ ಸಹ ನಾನು ಮನವಿ ಮಾಡಿದ್ದೇನೆ ಎಂದರು. ಕಾವೇರಿ ನದಿ ಪಾತ್ರದ ಮೇಕೆದಾಟು ಯೋಜನೆ ಇನ್ನೇನು ಆರಂಭವಾಗಿದೆ ಎನ್ನುವಂತೆ ಮಾತನಾಡಲಾಗುತ್ತಿತ್ತು. ಆದರೆ ಆ ವಿಚಾರದ ಬಗ್ಗೆ ಸುದ್ದಿಯೇ ಇಲ್ಲದಂತಾಗಿದೆ. ರಾಜ್ಯದಲ್ಲಿ ನೀರಿನ ಸಮಸ್ಯೆ ಪರಿಹರಿಸಲು ಜೆಡಿಎಸ್ ನಿರ್ದಾಕ್ಷಿಣ್ಯವಾಗಿ ಹೋರಾಟ ಮಾಡಿದೆ. ಇದಕ್ಕೆ ನಾನೇ ಸಾಕ್ಷಿ. ರಾಜ್ಯದ ಅಭಿವೃದ್ಧಿಗೆ ಪ್ರಾದೇಶಿಕ ಅವಶ್ಯ ಎಂದರು. ಇಂದಲ್ಲಾ ನಾಳೆ ದೇಶದ ಎಲ್ಲಾ ಪ್ರಾದೇಶಿಕ ಪಕ್ಷಗಳು ಒಂದಾಗುತ್ತವೆ. ಅದು ನನ್ನ ಕಲಾದಲ್ಲೋ ಇನ್ನಾವ ಕಾಲದಲ್ಲೋ ಆಗಬಹುದು. ಎರಡೂ ರಾಷ್ಟ್ರೀಯ ಪಕ್ಷಗಳ ನಡೆ ಕಂಡಾಗ ಇದು ಸ್ಪಷ್ಟವಾಗುತ್ತೆ. ಪ್ರಾದೇಶಿಕ ಪಕ್ಷಗಳು ಒಂದಾಗಲೇಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಹುಟ್ಟಿರುವ ವಿಜಯ್ ಮಲ್ಯ ಕರ್ನಾಟಕದ ಮಣ್ಣಿನ ಮಗ. ಅವರು ಕಾಂಗ್ರೆಸ್‌ಗೆ ಸಮೀಪದವರು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ. ಮಲ್ಯ ತಂದೆ ವಿಠಲ್ ಮಲ್ಯ ಅವರು ಕಾಂಗ್ರೆಸ್ಸಿಗರು. ಅವರು ಮಾಡಿದ ತಪ್ಪಿಗೆ ಕಾನೂನು ರೀತಿಯಲ್ಲಿ ಉತ್ತರ ಕೊಡುವುದಾಗಿ ಹೇಳಿದ್ದಾರೆ. ಮಲ್ಯ ಅವರ ಬಳಿ ಆಸ್ತಿ ಇಲ್ಲ ಎಂದಲ್ಲ. ಬೆಂಗಳೂರು, ಮುಂಬೈ ಸೇರಿದಂತೆ ಎಲ್ಲಾ ಕಡೆ ಆಸ್ತಿ. ಅವರ ಆಸ್ತಿ ಮೌಲ್ಯ 9 ಸಾವಿರ ಕೋಟಿ ರೂ ಗೂ ಹೆಚ್ಚಿಸಬಹುದು. ಇಂತಹ ಮಲ್ಯ ಬಗ್ಗೆ ರಾಜ್ಯಸಭೆ ಮತ್ತು ಲೋಕಸಭಾದಲ್ಲಿ ಚರ್ಚೆ ಮಾಡುವುದು ಸರಿಯಲ್ಲ ಎಂದರು.







