ಉಪ್ಪಿನಂಗಡಿ: ಬಸ್ಸು ಹತ್ತುತ್ತಿದ್ದ ಮಹಿಳೆಯ ಬುರ್ಖಾದ ಕಿಸೆ ಕತ್ತರಿಸಿ ಪಿಕ್ ಪಾಕೆಟ್
.jpg)
ಉಪ್ಪಿನಂಗಡಿ: ಮಹಿಳೆಯೊಬ್ಬರು ಬಸ್ಸು ಹತ್ತುತ್ತಿದ್ದ ವೇಳೆಯಲ್ಲಿ ಅವರ ಬುರ್ಖಾದ ಕಿಸೆಯಲ್ಲಿದ್ದ ರೂ. 55 ಸಾವಿರ ನಗದನ್ನು ಕಿಸೆ ಕತ್ತರಿಸಿ ಪಿಕ್ ಪಾಕೆಟ್ ನಡೆಸಿದ ಘಟನೆ ಶನಿವಾರ ಮದ್ಯಾಹ್ನ ಉಪ್ಪಿನಂಗಡಿ ಬಸ್ಸು ನಿಲ್ದಾಣದಲ್ಲಿ ನಡೆದಿದೆ. ಉಪ್ಪಿನಂಗಡಿ ಸಮೀಪದ ಕರ್ವೇಲು ನಿವಾಸಿ ಸಫಿಯಾ ಹಣ ಕಳೆದುಕೊಂಡ ಮಹಿಳೆ. ಸಫಿಯಾ ಅವರು ಬಸ್ಸು ಹತ್ತುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ಮಹಿಳೆಯೋರ್ವಳು ಇವರ ಬುರ್ಖಾದ ಕಿಸೆಯನ್ನು ಕತ್ತರಿಸಿ ಹಣವನ್ನು ಎಗರಿಸಿ ಪರಾರಿಯಾಗಿದ್ದಾಳೆ.
ಸಫಿಯಾ ಸ್ತ್ರೀ ಶಕ್ತಿ ಸಂಘದಲ್ಲಿ ಸದಸ್ಯರಾಗಿದ್ದು ಇಲ್ಲಿ ತೆಗೆದಿದ್ದ ಸಾಲದ ಹಣವನ್ನು ಮರುಪವಾತಿಸಲೆಂದು ತನ್ನ ಅತ್ತೆಯೊಂದಿಗೆ ಶನಿವಾರ ಉಪ್ಪಿನಂಗಡಿಯ ಮೂರ್ತೆದಾರರ ಸೇವಾ ಸಹಕಾರಿ ಸಂಘಕ್ಕೆ ಬಂದು ಅಲ್ಲಿ ತನ್ನ ಚಿನ್ನಾಭರಣವನ್ನು ಅಡವಿಟ್ಟು ರೂ. 55 ಸಾವಿರ ರೂಪಾಯಿ ಪಡೆದಿದ್ದರು. ಈ ಹಣವನ್ನು ತಾನು ತೊಟ್ಟಿದ್ದ ಬುರ್ಖಾದ ಕಿಸೆಯಲ್ಲಿಟ್ಟ ಅವರು ಉಪ್ಪಿನಂಗಡಿಯ ಬಸ್‌ನಿಲ್ದಾಣಕ್ಕೆ ಬಂದು ಕರ್ವೇಲ್‌ಗೆ ಹೋಗಲೆಂದು ಮಂಗಳೂರಿಗೆ ಹೋಗುವ ಬಸ್‌ಗೆ ಹತ್ತುತ್ತಿದ್ದರು. ಈ ಸಂದರ್ಭ ಬಸ್ಸು ಹತ್ತಲು ಬಂದ ಮಹಿಳೆಯೋರ್ವಳು ಇವರ ಬುರ್ಖಾದ ಕಿಸೆಯನ್ನು ಕತ್ತರಿಸಿ ಅದರಲ್ಲಿದ್ದ ಹಣದ ಕಟ್ಟನ್ನು ಕಸಿದುಕೊಂಡು ನೋಡನೋಡುತ್ತಿದ್ದಂತೆಯೇ ಓಡಿ ಪರಾರಿಯಾಗಿದ್ದಾಳೆ. ಬಳಿಕ ಸ್ಥಳೀಯರು ಕಳ್ಳತನ ನಡೆಸಿ ಪರಾರಿಯಾದ ಈಕೆಗಾಗಿ ಹುಡುಕಾಟ ನಡೆಸಿದರೂ ಆಕೆಯ ಪತ್ತೆಯಾಗಿಲ್ಲ.
ಈ ಹಿಂದೆಯೂ ಉಪ್ಪಿನಂಗಡಿಯಲ್ಲಿ ಇಂತಹ ಪ್ರಕರಣ ನಡೆದಿದ್ದು, ಕೆಲ ದಿನಗಳ ಹಿಂದೆ ಬಸ್ಸಿಗೆ ಹತ್ತುತ್ತಿದ್ದ ಮಹಿಳೆಯ ಬ್ಯಾಗ್ ಕಸಿದುಕೊಂಡು ಮಹಿಳೆಯೊಬ್ಬಳು ಪರಾರಿಯಾಗಿದ್ದು, ಆಕೆ ದೂರದಲ್ಲಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಪರಾರಿಯಾಗಿದ್ದಳು. ಆದರೆ ಬ್ಯಾಗ್ ಕಳೆದುಕೊಂಡವರು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರನ್ನು ದಾಖಲಿಸದೆ ತನ್ನ ಪಾಡಿಗೆ ತಾನು ಹೋಗಿದ್ದರು. ಇದೀಗ ಮಹಿಳೆಯ ಬುರ್ಖಾದ ಕಿಸೆಯಿಂದ ಹಣ ಎಗರಿಸಿದ ಮಹಿಳೆಯೂ ಜನರು ನೋಡುತ್ತಿದ್ದಂತೆ ಪರಾರಿಯಾಗಿದ್ದು, ಬಳಿಕ ಸಾಕಷ್ಟು ಮಂದಿ ಹುಡುಕಾಟ ನಡೆಸಿದ್ದರೂ ಕಣ್ಣಿಗೆ ಬೀಳದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇಲ್ಲಿ ಕಳ್ಳರು ತಂಡವಾಗಿ ಕಾರ್ಯಾಚರಿಸುತ್ತಿದ್ದು ಹಣ ಎಗರಿಸದ ಮಹಿಳೆಯೂ ಕಾರಿನಲ್ಲಿ ಪರಾರಿಯಾಗಿರಬಹುದು, ಇದು ಚಾಣಾಕ್ಷ ಕಿಸೆಗಳ್ಳರ ತಂಡದ ಕೆಲಸವಾಗಿರಬಹುದು ಎಂದು ಸ್ಥಳೀಯರು ಸಂಶಯ ವ್ಯಕ್ತ ಪಡಿಸಿದ್ದಾರೆ. ಕಳ್ಳತನ ಪ್ರಕರಣದ ಬಗ್ಗೆ ಸಫಿಯಾರ ಅತ್ತೆ ಮೈಮೂನಾ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.







