ಮುಡಿಪು:‘ಝೇಂಕಾರ-2016’ ಉದ್ಘಾಟನೆ, ಸಂಸ್ಕಾರ ಇಲ್ಲದ ಜೀವನಕ್ಕೆ ಅರ್ಥ ಇಲ್ಲ: ಸುರೇಂದ್ರ ಶೆಟ್ಟಿ

ಮುಡಿಪುವಿನಲ್ಲಿ ಶನಿವಾರ ಅಂತರ್ ಕಾಲೇಜುಮಟ್ಟದ ಝೇಂಕಾರ 2016 ಸ್ಪರ್ಧೆಯನ್ನು ಸುರೇಂದ್ರ ಶೆಟ್ಟಿ ಉದ್ಘಾಟಿಸಿದರು.
ಕೊಣಾಜೆ: ವಿದ್ಯೆ, ಸಂಸ್ಕಾರ, ಸಾಧನೆ ಇದು ನಮ್ಮ ಜೀವನದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೇವಲ ವಿದ್ಯೆ ಇದ್ದು ಸಂಸ್ಕಾರ ಇಲ್ಲದಿದ್ದರೆ ಅಂತಹ ಜೀವನಕ್ಕೆ ಅರ್ಥ ಇರುವುದಿಲ್ಲ. ಆದ್ದರಿಂದ ನಾವು ವಿದ್ಯಾರ್ಥಿ ದೆಸೆಯಲ್ಲೇ ಉತ್ತಮ ಸಂಸ್ಕಾರವಂತರಾಗಿ ಉತ್ತಮ ಶಿಕ್ಷಣದೊಂದಿಗೆ ಇಂತಹ ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ನಿವೃತ್ತ ಸೈನಿಕ ನಕ್ರೆ ಸುರೇಂದ್ರ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅವರು ಮುಡಿಪುವಿನ ಕುರ್ನಾಡು ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಶನಿವಾರ ಮುಡಿಪುವಿನ ಸಭಾಂಗಣದಲ್ಲಿ ನಡೆದ ಅಂತರ್ ಕಾಲೇಜು ಸಾಂಸೃತಿಕ ಸ್ಪರ್ಧೆ ‘ಝೇಂಕಾರ-2016’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ದೆಸೆಯಲ್ಲಿಯೇ ನಾವು ಪೋಷಕರ ಮತ್ತು ಅದ್ಯಾಪಕರ ಸಹಾಯದೊಂದಿಗೆ ಮುಂದಿನ ಭವಿಷ್ಯದ ಬಗ್ಗೆ ಯೋಜನೆ ರೂಪಿಸಿಕೊಳ್ಳಬೇಕು. ಇಂದು ಬಿ.ಇ ಕಲಿತವರು ಎಂಟು-ಹತ್ತು ಸಾವಿರಕ್ಕೆ ಸಂಬಳಕ್ಕೆ ದುಡಿದರೆ, ಗಾರೆ ಕೆಲಸ ಮಾಡುವವ ತಿಂಗಳಿಗೆ 25 ಸಾವಿರಷ್ಟು ಸಂಪಾದನೆ ಮಾಡುತ್ತಾರೆ. ಆದ್ದರಿಂದ ಇಂದಿನ ಸ್ಫರ್ದಾತ್ಮಕ ಕಾಲಘಟ್ಟದಲ್ಲಿ ಆಯಾ ಕಾಲಕ್ಕೆ ಬೇಡಿಕೆಯಿರುವ ಮತ್ತು ನಮ್ಮ ಉತ್ಸಾಹದ ಶಿಕ್ಷಣ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು, ಅಲ್ಲದೆ ಉತ್ತಮ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕುರ್ನಾಡು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಗಿರಿಧರ್ ರಾವ್ ಅವರು ಮಾತನಾಡಿ, ನಮ್ಮ ಜೀವನದಲ್ಲಿ ಸಿಗುವ ಪ್ರತಿಯೊಂದು ಕ್ಷಣವನ್ನು ನಾವು ಸದುಪಯೋಗ ಪಡಿಸಿಕೊಳ್ಳಬೇಕು. ಹಾಗೂ ಶಿಕ್ಷಣದ ಮಹತ್ವನ್ನು ಅರಿತುಕೊಂಡು ಮುನ್ನಡೆಯುವುದರೊಂದಿಗೆ ಇಂತಹ ಸ್ಮರ್ಧಾತ್ಮಕ ಕಾರ್ಯಕ್ರಮಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉದ್ಯಮಿ ರಮೇಶ್ ಶೇಣವ ಅವರು ಭಾಗವಹಿಸಿದ್ದರು.
ಅದ್ಯಾಪಕ ಡಾ.ಶ್ರೀಧರ ಮಣಿಯಾಣಿ ಸ್ವಾಗತಿಸಿ, ದೈಹಿಕ ಶಿಕ್ಷಕಿ ಶುಭ ವಂದಿಸಿದರು. ವಿದ್ಯಾರ್ಥಿಗಳಾದ ಗೌತಮಿ ಹಾಗೂ ಶಬೀರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳು ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡರು.







